21ಕ್ಕೆ ಅರಣ್ಯವಾಸಿಗಳಿಂದ ಜಿಲ್ಲೆಯ ೫೦೦ ಕಡೆ ಲಕ್ಷ ಗಿಡ ನೆಡುವ ಅಭಿಯಾನ

KannadaprabhaNewsNetwork |  
Published : Jun 08, 2025, 01:26 AM IST
6ಎಸ್.ಆರ್.ಎಸ್5 (ನಗರದ ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ದಶ ಲಕ್ಷ ಗಿಡ ನೆಡುವ ಅಭಿಯಾನದ ಲಾಂಛನ ಬಿಡುಗಡೆಗೊಳಿಸಲಾಯಿತು.) | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಭೌಗೋಳಿಕವಾಗಿ ೧೦,೫೭೧ ಚದರ್ ಕಿ.ಮೀ. ಪ್ರದೇಶವಿದೆ. ಅದರಲ್ಲಿ ೮,೫೦೦ ಚದರ್ ಕಿ.ಮೀ. ಅರಣ್ಯ ಪ್ರದೇಶವಿದೆ.

ಶಿರಸಿ; ಅರಣ್ಯ ಅಭಿವೃದ್ಧಿ ಮತ್ತು ಪರಿಸರ ಜಾಗೃತಿ ಅರಣ್ಯವಾಸಿಗಳಲ್ಲಿ ಹೆಚ್ಚಿಸುವ ಉದ್ದೇಶದಿಂದ ಭೂಮಿ ಹಕ್ಕು ಹೋರಾಟಕ್ಕೆ ೩೩ ವರ್ಷವಾಗಿರುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಂದ ಏಕ ಕಾಲದಲ್ಲಿ ಜಿಲ್ಲಾದ್ಯಂತ ೫೦೦ಕ್ಕೂ ಮಿಕ್ಕಿ ವಿವಿಧ ಸ್ಥಳಗಳಲ್ಲಿ ದಶ ಲಕ್ಷ ಗಿಡ ನೆಡುವ ಅಭಿಯಾನವನ್ನು ಜೂ.೨೧ರಂದು ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ಅವರು ಶುಕ್ರವಾರ ನಗರದ ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ದಶ ಲಕ್ಷ ಗಿಡ ನೆಡುವ ಅಭಿಯಾನದ ಲಾಂಛನ ಬಿಡುಗಡೆಗೊಳಿಸಿ, ಮಾತನಾಡಿದರು.

ಜಿಲ್ಲೆಯಲ್ಲಿ ಭೌಗೋಳಿಕವಾಗಿ ೧೦,೫೭೧ ಚದರ್ ಕಿ.ಮೀ. ಪ್ರದೇಶವಿದೆ. ಅದರಲ್ಲಿ ೮,೫೦೦ ಚದರ್ ಕಿ.ಮೀ. ಅರಣ್ಯ ಪ್ರದೇಶವಿದೆ. ಭೌಗೋಳಿಕವಾಗಿ ಜಿಲ್ಲೆಯ ಜನಸಂಖ್ಯೆ ಸಾಂದ್ರತೆ ಪ್ರಮಾಣ ಪ್ರತಿ ಸ್ಕ್ವೇರ್‌ ಕಿ.ಮೀ.ಗೆ ೨೦೨ ಜನ ಇದ್ದರೆ, ಅರಣ್ಯ ಸಾಂದ್ರತೆಯ ಪ್ರದೇಶವು ಜನಸಂಖ್ಯೆಯ ಸಾಂದ್ರತೆಗಿಂತ ೧೦ ಪಟ್ಟು ಹೆಚ್ಚಾಗಿದೆ. ವಾಸ್ತವಿಕವಾಗಿ ಗಿಡ, ಮರ ಪ್ರಮಾಣ ಕಡಿಮೆ ಇರುವುದು ಉಲ್ಲೇಖಾರ್ಹ. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯ, ಬೆಂಕಿ, ಜಲವಿದ್ಯುತ್ ಯೋಜನೆ, ಸಾರಿಗೆ, ಅರಣ್ಯ ಇಲಾಖೆಯ ಕಾಮಗಾರಿ ಮುಂತಾದ ಉದ್ದೇಶದಿಂದ ಜಿಲ್ಲೆಯಲ್ಲಿನ ಅರಣ್ಯ ಸಾಂದ್ರತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ವಿಷಾದಕರ. ಅಭಿಯಾನದಲ್ಲಿ ಪ್ರತಿ ಅರಣ್ಯವಾಸಿ ಕುಟುಂಬವು ಕನಿಷ್ಠ ೧೦ ದೀರ್ಘಾಯುಷ್ಯ ಮತ್ತು ಪರಿಸರ ಅಭಿವೃದ್ದಿಗೆ ಸಂಬಂಧಿಸಿದ ಗಿಡ ನೆಡುವಂತೆ ಕರೆ ನೀಡಿದರು.

ಯಲ್ಲಾಪುರ ತಾಲೂಕು ಅಧ್ಯಕ್ಷ ಭಿಮ್ಸಿ ವಾಲ್ಮೀಕಿ, ಮುಂಡಗೋಡ ಅಧ್ಯಕ್ಷ ಶಿವಾನಂದ ಜೋಗಿ, ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ನೆಹರು ನಾಯ್ಕ ಬಿಳೂರು, ಸುಬ್ಬಣ್ಣ ಮಾಗೋಡ, ಎಂ.ಆರ್. ನಾಯ್ಕ ಕಂಡ್ರಾಜಿ, ನಾಗರಾಜ ಅಚನಳ್ಳಿ, ಸ್ವಾತಿ ಜೈನ್, ಕಲ್ಪನಾ ಪಾವಸ್ಕರ, ಯಶೋದಾ ನರೇಬೈಲ್, ಮಂಜಪ್ಪ ನಾಯ್ಕ ಬಂಕನಾಳ, ಎಂ.ಕೆ. ನಾಯ್ಕ ಬಂಕನಾಳ, ರೇಣುಕಾ ಎಮ್ ಸಿದ್ದಿ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾದಂತ ೧೫ ದಿನಗಳ ಅಭಿಯಾನ: ಜಿಲ್ಲೆಯ ವಿವಿಧ ತಾಲೂಕುಗಳ ೧೬೩ ಗ್ರಾಪಂ ವ್ಯಾಪ್ತಿಯ ೫೦೦ಕ್ಕೂ ಮಿಕ್ಕಿ ಹಳ್ಳಿಗಳಲ್ಲಿ ಏಕ ಕಾಲದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಅಭಿಯಾನವು ಜಿಲ್ಲಾಧ್ಯಂತ ಜುಲೈ ೫ ರವರೆಗೆ ೧೫ ದಿನಗಳು ಜರುಗುವುದು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಮಾಹಿತಿ ನೀಡಿದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌