- ಬೀರೂರು ಹೋಬಳಿ ಎಮ್ಮೆದೊಡ್ಡಿ ಸರ್ವೆ ನಂ. 70ರ 10 ಎಕರೆ ಅರಣ್ಯ ಪ್ರದೇಶ ವಶ
ಕನ್ನಡಪ್ರಭ ವಾರ್ತೆ ಬೀರೂರುಬೀರೂರು ಹೋಬಳಿ ಎಮ್ಮೆದೊಡ್ಡಿಯ ಬೆಳ್ಳಿಗುತ್ತಿ ಸಮೀಪದ ಸರ್ವೆ ನಂ 70ರಲ್ಲಿನ 10 ಎಕರೆ ಅರಣ್ಯ ಪ್ರದೇಶ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದ ಜಾಗವನ್ನು ಪೊಲೀಸರ ಸಹಕಾರದೊಂದಿಗೆ ಅರಣ್ಯಾಧಿಕಾರಿಗಳು ಶನಿವಾರ ಬೆಳ್ಳಂಬೆಳಿಗ್ಗೆ ಯಂತ್ರೋಪಕರಣಗಳ ಮೂಲಕ ತೆರವುಗೊಳಿಸಿ ಜಾಗನ್ನು ವಶಕ್ಕೆ ಪಡೆದರು.ಎಮ್ಮೆದೊಡ್ಡಿ ಸರ್ವೆ ನಂ. 70 ರಲ್ಲಿ 10 ಎಕರೆ ಅರಣ್ಯ ಜಾಗವನ್ನು ಅತಿಕ್ರಮಿಸಿ ಅಲ್ಲಿ ಮನೆ, ಕೋಳಿ ಶೆಡ್ ಮುಂತಾದವುಗಳನ್ನು ನಿರ್ಮಿಸಿ ಅಡಕೆ ಇನ್ನಿತರ ಗಿಡಗಳನ್ನು ಬೆಳೆಯಲಾಗಿತ್ತು. ಈ ಜಾಗವನ್ನು ಕಡೂರು ಪುರಸಭೆ ಮುಖ್ಯಾಧಿಕಾರಿಯಾಗಿದ್ದವ ರೊಬ್ಬರು ಅತಿಕ್ರಮಿಸಿದ್ದಾರೆ. ಅಲ್ಲಿ ಗೆಸ್ಟ್ ಹೌಸ್, ಈಜುಕೊಳ ಮುಂತಾದವುಗಳನ್ನು ನಿರ್ಮಿಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕವಾಗಿಯೇ ಕೇಳಿಬರುತ್ತಿದ್ದವು. ಈ ಕುರಿತು ಆಕ್ಷೇಪಣೆಗೆ ಹಲವಾರು ದೂರುಗಳು ಸಲ್ಲಿಕೆಯಾಗಿದ್ದವು. ಒಂದು ವರ್ಷದ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನಂತರ ತಹಸೀಲ್ದಾರ್ ಗೆ ತನಿಖೆ ಮಾಡಲು ಸೂಚಿಸಿದ್ದರು.ಈ ಬಗ್ಗೆ ಹಲವಾರು ತನಿಖೆಗಳು ನಡೆದು ನಂತರ ಅಂತಿಮವಾಗಿ ಈಗ ಎಸಿಎಫ್ ನ್ಯಾಯಾಲಯದ 60ಎ ಆದೇಶದನ್ವಯ ಈ ಭೂಮಿ ತೆರವುಗೊಳಿಸಲಾಗಿದೆ. ತೆರವಿಗೂ ಮುನ್ನ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಲು ಕರ್ನಾಟಕ ಹಣಕಾಸು ನಿಗಮದ ಪ್ರಭಾರಿ ನಿರ್ದೇಶಕರಾದ ( ಹಿಂದೆ ಕಡೂರು ಪುರಸಭೆ ಮುಖ್ಯಾಧಿಕಾರಿ) ಎಚ್.ಎನ್.ಮಂಜುನಾಥ್, ಸೇರಿದಂತೆ ಮುಸ್ಲಾಪುರದ ಪರಮೇಶ್ವರಪ್ಪ, ಜಾಹೀದಾಬಾನು, ಆಶಾ ರಮೇಶ್ ಎಂಬುವವರಿಗೆ ಸೂಚಿಸಲಾಗಿತ್ತು.ಇದಕ್ಕೆ ಯಾವುದೇ ಪ್ರತಿಕ್ರಿಯೆ ಅವರಿಂದ ಬಾರದ ಕಾರಣ ಅಕ್ರಮವಾಗಿ ನಿರ್ಮಿಸಿರುವ ಶೆಡ್, ಮನೆ ಮುಂತಾದ ಕಟ್ಟಡ ಗಳನ್ನು ಶನಿವಾರ ಬೆಳಿಗ್ಗೆ ಎಸಿಎಫ್ ಮೋಹನ್‌ನಾಯ್ಕ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಯಂತ್ರ ಬಳಸಿ ತೆರವುಗೊಳಿಸಿದರು. ತೆರವು ಕಾರ್ಯಾಚರಣೆ ವೇಳೆ ಯಾರು ಇರಲಿಲ್ಲ. ಕಾರ್ಯಾರಂಭದಲ್ಲಿ ಗ್ರಾಮದ ಕೆಲ ಜನರು ಬಂದು ಪ್ರತಿರೋಧ ವ್ಯಕ್ತಪಡಿಸಿದರೂ ಅಧಿಕಾರಿಗಳು ಅದೇಶ ಓದಿ ಹೇಳಿದಾಗ ಅವರೆಲ್ಲರೂ ಅಲ್ಲಿಂದ ತೆರಳಿದರು. ಬಳಿಕ 10 ಎಕರೆ ಭೂಮಿಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದು ಒಳಗೆ ಪ್ರವೇಶ ನಿರ್ಬಂಧ ಹೇರಿ ಸೂಚನ ಫಲಕ ಅಳವಡಿಸಿದರು. ಕಾರ್ಯಾಚರಣೆಯಲ್ಲಿ ವಲಯಾರಣ್ಯಾಧಿಕಾರಿ ರಜಾಕ್ ಸಾಬ್ ನದಾಫ್, ಪಿಎಸೈಗಳಾದ ಪವನ್, ನವೀನ್‌ಕುಮಾರ್, ಎಮ್ಮೆದೊಡ್ಡಿ ವಲಯಾರಣ್ಯಾಧಿಕಾರಿ ಸಂತೋಷ್ ಹಾಗೂ ಸಿಬ್ಬಂದಿ ಇದ್ದರು.13 ಬೀರೂರು 1 (ಬೀರೂರು ಹೋಬಳಿಯ ಎಮ್ಮೆದೊಡ್ಡಿ ಸರ್ವೆ ನಂ 70ರಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್‌ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಮೂಲಕ ನೆಲಸಮಗೊಳಿಸಿದರು.)13 ಬೀರೂರು 2 (ಒತ್ತುವರಿ ತೆರವಿನ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳ ನಡುವೆ ಗ್ರಾಮಸ್ಥರು ಚರ್ಚೆ ನಡೆಸಿದರು.)