ಆನೆಗಳ ಸಾವು : ತನಿಖೆಗೆ ಸಚಿವ ಖಂಡ್ರೆ ಆದೇಶ

KannadaprabhaNewsNetwork |  
Published : Nov 05, 2025, 03:30 AM ISTUpdated : Nov 05, 2025, 10:44 AM IST
Eshwar Khandre

ಸಾರಾಂಶ

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಳೇಗಾಳಿ ಗ್ರಾಮದಲ್ಲಿ ಭಾನುವಾರ ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಸಾವಿಗೀಡಾಗಿರುವ ಬಗ್ಗೆ ನೋವು ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸೂಕ್ತ ತನಿಖೆಗೆ ಆದೇಶ ಹೊರಡಿಸಿದ್ದಾರೆ.

  ಬೆಳಗಾವಿ :  ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಳೇಗಾಳಿ ಗ್ರಾಮದಲ್ಲಿ ಭಾನುವಾರ ವಿದ್ಯುತ್ ಸ್ಪರ್ಶದಿಂದ ಎರಡು ಕಾಡಾನೆಗಳು ಸಾವಿಗೀಡಾಗಿರುವ ಬಗ್ಗೆ ನೋವು ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸೂಕ್ತ ತನಿಖೆಗೆ ಆದೇಶ ಹೊರಡಿಸಿದ್ದಾರೆ.

ಈ ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಜಮೀನು ಮಾಲೀಕನನ್ನು ಬಂಧಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಇದೇ ಪ್ರದೇಶದಲ್ಲಿ ಆನೆಗಳು ಓಡಾಡುತ್ತಿದ್ದರೂ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೂಕ್ತ ಕ್ರಮ ಕೈಗೊಳ್ಳದೆ, ಕರ್ತವ್ಯ ಲೋಪ ಮಾಡಿರುವುದೇ ಆನೆಗಳ ಸಾವಿಗೆ ಕಾರಣ ಎಂಬ ಆರೋಪವಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಲೋಪವಿದ್ದಲ್ಲಿ ಶಿಸ್ತು ಕ್ರಮದ ಶಿಫಾರಸಿನೊಂದಿಗೆ ಐದು ದಿನಗಳ ಒಳಗಾಗಿ ವರದಿ ಸಲ್ಲಿಸಬೇಕು ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸಚಿವ ಖಂಡ್ರೆ ಅವರು ಸೂಚಿಸಿದ್ದಾರೆ.ಬೇಲಿಗೆ ವಿದ್ಯುತ್ ಸಂಪರ್ಕ ನೀಡಿ, ಆನೆಗಳ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ರೀತ್ಯ ಪ್ರಕರಣ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದ್ದಾರೆ. 

ಘಟನೆ ಹಿನ್ನೆಲೆ:

ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಎರಡು ಕಾಡಾನೆಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಖಾನಾಪುರ ತಾಲೂಕಿನ ಸುಳೇಗಾಳಿ ಗ್ರಾಮದಲ್ಲಿ ಭಾನುವಾರ ನಡೆದಿತ್ತು. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆನೆಗಳ ಮೃತದೇಹಗಳ ಪರೀಕ್ಷೆ ನಡೆಸಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.ದೇವರಾಯಿ ಗ್ರಾಮದ ಸಮೀಪದ ಸುಳೇಗಾಳಿಯ ರೈತ ಗಣಪತಿ ಸಾತೇರಿ ಗುರವ ಹಾಗೂ ಇತರೆ ರೈತರು ತಮ್ಮ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಸೋಲಾರ್ ಸೆನ್ಸಾರ್ ಅಳವಡಿಸಿದ್ದರು. ಖಾನಾಪುರ ತಾಲೂಕಿನ ಅನೇಕ ರೈತರು ಈ ಸೆನ್ಸಾರ್ ಬಳಸುತ್ತಿದ್ದಾರೆ. ಆದರೆ ಗದ್ದೆಯಿಂದ ಹಾದುಹೋಗುವ ವಿದ್ಯುತ್ ತಂತಿ ತುಂಡಾಗಿ ಕೆಲ ದಿನಗಳಿಂದ ಅದೇ ಸ್ಥಿತಿಯಲ್ಲಿ ಬಿದ್ದಿತ್ತು. ಇದರ ಜೊತೆಗೆ, ಮತ್ತೊಂದು ತಂತಿಯೂ ತುಂಡಾಗಿ ಬಿದ್ದಿತ್ತು. ಅದು ರೈತರು ಅಳವಡಿಸಿದ್ದ ಯಂತ್ರದ ತಂತಿಗೆ ತಾಗಿಕೊಂಡಿದೆ. ಪರಿಣಾಮ ಆ ತಂತಿಯಲ್ಲಿ ನೇರವಾಗಿ ವಿದ್ಯುತ್ ಪ್ರವಹಿಸಿದೆ. ಇದೇ ವೇಳೆ ಆಹಾರ ಅರಸಿ ಕಾಡಿನಿಂದ ಬಂದ ಆನೆಗಳು ಆ ತಂತಿ ಸ್ಪರ್ಶಿಸುತ್ತಿದ್ದಂತೆ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿವೆ. 

ಜಮೀನು ಮಾಲೀಕನ ಬಂಧನ:

ವಿದ್ಯುತ್‌ ಸ್ಪರ್ಶಿಸಿ ಆನೆಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀನು ಮಾಲೀಕನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಗಣಪತಿ ಸಾತೇರಿ ಗುರವ ಬಂಧಿತ ವ್ಯಕ್ತಿ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿಎಫ್‌ಓ ಕ್ರಾಂತಿ ಎನ್.ಡಿ. ತಿಳಿಸಿದ್ದಾರೆ.ತನ್ನ ಜಮೀನಿಗೆ ವಿದ್ಯುತ್‌ ಬೇಲಿ ಅಳವಡಿಸಿದ್ದ ರೈತ ಗಣಪತಿ ಮನೆಯಿಂದ ವಿದ್ಯುತ್‌ ಸಂಪರ್ಕ ನೀಡಿರುವ ಕುರಿತು ಮಾಹಿತಿ ಇದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ವಿದ್ಯುತ್‌ ಸ್ಪರ್ಶಿಸಿ ಒಂದು ಹೆಣ್ಣು , ಒಂದು ಗಂಡು ಆನೆ ಸಾವನ್ನಪ್ಪಿವೆ. ಗಣಪತಿ ಪುತ್ರ ಶಿವಾಜಿ ಗುರವ ಪರಾರಿಯಾಗಿದ್ದಾನೆ. ಈ ಘಟನೆ ಕುರಿತು ಅರಣ್ಯ ಸಚಿವರು ಮಾಹಿತಿ ಕೇಳಿದ್ದಾರೆ. ತನಿಖೆ ನಡೆಸಿ ವರದಿ ಸಲ್ಲಿಸಲಾಗುವುದು. ಆನೆಗಳ ಮರಣೋತ್ತರ ಪರೀಕ್ಷೆ ನಡೆಸಿ, ತಮ್ಮ ಜಾಗದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದರು.

PREV
Read more Articles on

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ