ಕಿಚ್ಚು ಪಡೆದ ಕಬ್ಬು ಬೆಳೆಗಾರರ ಹೋರಾಟ

KannadaprabhaNewsNetwork |  
Published : Nov 05, 2025, 03:30 AM ISTUpdated : Nov 05, 2025, 06:22 AM IST
sugar cane farmers

ಸಾರಾಂಶ

 ಕಬ್ಬಿಗೆ ₹ 3500 ಬೆಲೆ ಘೋಷಣೆ ಮಾಡುವಂತೆ ಹಾಗೂ ರೈತರ ವಿವಿಧ ಸಮಸ್ಯೆಗಳಿಗೆ ನ್ಯಾಯ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರರು ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಸಹಯೋಗದಲ್ಲಿ ಅನಿರ್ದಿಷ್ಟ ಹಾಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ

 ವಿಜಯಪುರ :  ಪ್ರತಿ ಟನ್‌ ಕಬ್ಬಿಗೆ ₹ 3500 ಬೆಲೆ ಘೋಷಣೆ ಮಾಡುವಂತೆ ಹಾಗೂ ರೈತರ ವಿವಿಧ ಸಮಸ್ಯೆಗಳಿಗೆ ಸೂಕ್ತ ನ್ಯಾಯ ನೀಡುವಂತೆ ಆಗ್ರಹಿಸಿ  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕಬ್ಬು ಬೆಳೆಗಾರರು ಮತ್ತು ಪ್ರಗತಿಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳ ಸಹಯೋಗದಲ್ಲಿ ಅನಿರ್ದಿಷ್ಟ ಹಾಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ.

ನಗರದ ಗಾಂಧಿ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಗಗನ್‌ಮಹಲ್ ಎದುರು ಧರಣಿ ಪ್ರಾರಂಭಿಸಲಾಯಿತು. ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ರೈತರು ಗಗನಮಹಲ್‌ವರೆಗೆ ಬೃಹತ್ ರೈತ ಮೆರವಣಿಗೆ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ವಿವಿಧ ರೈತ ಮುಖಂಡರು, ವಿವಿಧ ಸಂಘಟನೆಯ ಮುಖಂಡರು ಮಹಿಳಾ ಮುಖಂಡರು, ಕಬ್ಬು ಬೆಳೆಗಾರರ ಕುರಿತು ವಿಸ್ತಾರವಾಗಿ ಸಮಸ್ಯೆಗಳ ಬಗ್ಗೆ ಹಾಗೂ ಜನಪ್ರತಿನಿಧಿಗಳ ಬಗ್ಗೆ ಕೆಂಡಾಮಂಡಲರಾದರು. ಚುನಾವಣೆಯ ಸಂದರ್ಭದಲ್ಲಿ ಮಾತ್ರ ಇವರಿಗೆ ರೈತರ ಕಷ್ಟ ಗೊತ್ತಾಗುತ್ತೆ. ಈ ರೀತಿ ಪ್ರಕೃತಿ ವಿಕೋಪದ ನಡುವೆಯೂ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ಸಾಕಷ್ಟು ನಷ್ಟ ಅನುಭವಿಸಿ ಪ್ರತಿ ಅರ್ಧ ಗಂಟೆಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಯಾವ ಜನಪ್ರತಿನಿಧಿಗಳು ಈ ಕುರಿತು ಧ್ವನಿ ಎತ್ತುತ್ತಿಲ್ಲ. ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ಕಾರ್ಮಿಕರ ವೇತನ ದಿನೇದಿನೇ ಹೆಚ್ಚಾಗಿ ಕೃಷಿ ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿದೆ. ಇದರಿಂದ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಪ್ರತಿ ಟನ್ ಕಬ್ಬಿಗೆ ₹ 3500 ಘೋಷಣೆ ಮಾಡಿ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭಮಾಡಬೇಕೆಂದು ಆಗ್ರಹಿಸಿದರು.

ಯೋಗ್ಯ ಲಾಭ ನೀಡಬೇಕು

ಸಕ್ಕರೆ ಜೊತೆಗೆ ಉಪ ಉತ್ಪನ್ನಗಳಿಂದ ಹೆಚ್ಚಿನ ಲಾಭ ಪಡೆಯುತ್ತಿರುವ ಕಾರ್ಖಾನೆಗಳು ರೈತರಿಗೆ ಅದರಲ್ಲಿಯೂ ಯೋಗ್ಯ ಲಾಭ ನೀಡಬೇಕು. ಬಾಕಿ ಉಳಿಸಿಕೊಂಡಿರುವ ರೈತರ ಬಿಲ್‌ನ್ನು ಬೇಗನೆ ಪಾವತಿ ಮಾಡಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರೆಯಲಿದೆ. ಜಿಲ್ಲೆಯಲ್ಲಿ ಅಂದಾಜು 4 ಲಕ್ಷ ಎಕರೆ ಕಬ್ಬು ಬೆಳೆಯುತ್ತಿದ್ದು, ಇದನ್ನೆ ನಂಬಿದ ನೂರಾರು ರೈತ ಕುಟುಂಬಗಳು ಬೀದಿಗೆ ಬೀಳುವಂತಾಗಿದೆ. ಜಿಲ್ಲೆಯ ಕಬ್ಬು ಬೆಳೆಗಾರರನ್ನೆ ಅವಲಂಭಿಸಿರುವ 10 ಸಕ್ಕರೆ ಕಾರ್ಖಾನೆ ಮಾಲಿಕರು ಕೂಡಲೇ ರೈತಪರ ಕಾಳಜಿ ವಹಿಸಿ ದುಡಿದ ದುಡಿತಕ್ಕಾದರೂ ಪ್ರತಿಟನ್ ಕಬ್ಬಿಗೆ ₹ 3500 ದರ ನೀಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಮನಗೂಳಿ ಹಿರೇಮಠದ ಶ್ರೀ ಸಂಗನ ಬಸವ ಸ್ವಾಮೀಜಿ, ರೈತ ಮುಖಂಡರಾದ ರಾಹುಲ ಕುಬಕಡ್ಡಿ, ಕಲ್ಲು ಸೊನ್ನದ, ಸಂಗಮೇಶ ಸಗರ, ರಾಮನಗೌಡ ಪಾಟೀಲ, ಅಭಿಷೇಕ ಹೂಗಾರ, ಪ್ರಕಾಶ ತೇಲಿ, ಜಕರಾಯ ಪೂಜಾರಿ, ವೀರಣ್ಣ ಸಜ್ಜನ, ಸಂಗಪ್ಪ ಠಕ್ಕೆ, ಅನಾಮೇಶ ಜಮಖಂಡಿ, ಸೋಮು ಬಿರಾದಾರ, ಸಾತಲಿಂಗಯ್ಯ ಸಾಲಿಮಠ, ಈರಪ್ಪ ಕೂಳೆಕುಮಟಗಿ, ಮಾಳು ಪೂಜಾರಿ, ಮಾಂತಗೌಡ ಬಿರಾದಾರ, ಸಿದ್ರಾಮಪ್ಪ ಹೊರ್ತಿ, ಸೀತಪ್ಪ ಗಣಿ, ಕರವೇಯ ಬಸವರಾಜ ತಾಳಿಕೋಟೆ, ಶ್ರೀಶೈಲ ಮುಳಜಿ, ಶ್ರೀಕಾಂತ ರಾಠೋಡ, ರವಿ ಗೊಳಸಂಗಿ. ಭಾರತ ಕಿಸಾನ್ ಸಂಘದ ಮಲ್ಲನಗೌಡ ಬಿರಾದಾರ,

ಭೀಮಸೇನ ಕೊಕರೆ, ಗುರುನಾಥ ಬಗಲಿ, ಅರುಣಗೌಡ ತೇರದಾಳ. ಉತ್ತರ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಶಂಕರಗೌಡ ಹಿರೇಗೌಡರ, ಜಿಲ್ಲಾ ಗೌರವಾಧ್ಯಕ್ಷ ಬಾಪೂಗೌಡ ಬಿರಾದಾರ, ರಾಜ್ಯ ಕಾರ್ಯದರ್ಶಿ ಪಿರು ಕೆರೂರ, ದದಾಪಿರ ಮುಜಾವರ, ರಾಮು ದೇಸಾಯಿ. ಡಿಎಸ್ಎಸ್

ಮುಖಂಡರಾದ ಮಾಂತೇಶ ಸಾಸಾಬಾಳ, ಅರವಿಂದ ಕೊಪ್ಪ, ಜಗದೀಶ ಸುನಗದ, ಸುಜಾತಾ ಅವಟಿ, ಸಂಗೀತಾ ರಾಠೋಡ, ಲಕ್ಷ್ಮೀ ಬಿರಾದಾರ ಸೇರಿದಂತೆ ಅನೇಕರು ಇದ್ದರು. ಬೋರಮ್ಮ ಕುಂಬಾರ, ಚನ್ನಮ್ಮ ಮೈತ್ರಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಮೆರವಣಿಗೆ ವೇಳೆ ರೈತ ಅಸ್ವಸ್ಥ

ಪ್ರತಿಭಟನಾ ಮೆರವಣಿಗೆ ವೇಳೆ ಸಾಯಬಣ್ಣ ಅಂಗಡಿ ಎಂಬ ರೈತ ಅಸ್ವಸ್ಥಗೊಂಡು ಕುಸಿದು ಬಿದ್ದರು. ರೈತ ಸಂಘದ ನಿಡಗುಂದಿ ತಾಲೂಕಾ ಅಧ್ಯಕ್ಷ ಸಾಯಬಣ್ಣ, ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆದ ಪ್ರತಿಭಟನಾ ರ್‍ಯಾಲಿಯಲ್ಲಿ ಅಂಬೇಡ್ಕರ ಸರ್ಕಲ್ ಬಳಿ ಕುಸಿದು ಬಿದ್ದಿದ್ದರು. ಸ್ಥಳಕ್ಕೆ ವೈದ್ಯರು ಭೇಟಿ ನೀಡಿ, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ರೈತ ಸಾಯಬಣ್ಣ ಸುಧಾರಿಸಿಕೊಂಡರು.

PREV
Read more Articles on

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ