ಕಬ್ಬು ದರದ ವಿಷಯದಲ್ಲಿ ಕೇಂದ್ರದ್ದೇ ಅಂತಿಮ ನಿರ್ಧಾರ

KannadaprabhaNewsNetwork |  
Published : Nov 05, 2025, 03:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ರಾಜ್ಯಾದ್ಯಂತ ಕಬ್ಬಿನ ಬೆಲೆ ನಿಗದಿ ಕುರಿತಾಗಿ ರೈತರು ತೋರಿಸುತ್ತಿರುವ ಆತಂಕ ಮತ್ತು ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಬ್ಬಿಗೆ ನ್ಯಾಯಸಮ್ಮತ ದರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ರೈತರ ಹಿತದೃಷ್ಟಿಯಿಂದ ಕೇಂದ್ರದಿಂದ ನಿಗದಿತ ದರ ಕೊಡಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯಾದ್ಯಂತ ಕಬ್ಬಿನ ಬೆಲೆ ನಿಗದಿ ಕುರಿತಾಗಿ ರೈತರು ತೋರಿಸುತ್ತಿರುವ ಆತಂಕ ಮತ್ತು ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಬ್ಬಿಗೆ ನ್ಯಾಯಸಮ್ಮತ ದರ ನೀಡುವ ವಿಷಯದಲ್ಲಿ ಕೇಂದ್ರ ಸರ್ಕಾರವೇ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ರೈತರ ಹಿತದೃಷ್ಟಿಯಿಂದ ಕೇಂದ್ರದಿಂದ ನಿಗದಿತ ದರ ಕೊಡಿಸಲು ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.

ನಗರದ ವಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ಜಿಲ್ಲೆಗೆ ಕಬ್ಬಿನ ಇಳುವರಿ ವ್ಯತ್ಯಾಸ ಇರುವುದರಿಂದ ದರದಲ್ಲೂ ಅಲ್ಪ ವ್ಯತ್ಯಾಸ ಉಂಟಾಗಬಹುದು. ಕೃಷ್ಣೆ ಮತ್ತು ಕಾವೇರಿ ಕಣಿವೆಯಲ್ಲಿ ಇಳುವರಿ ಹೆಚ್ಚಿರುವ ಕಾರಣ ಅಲ್ಲಿ ಕೆಲವು ಅಸಮಾನತೆಗಳು ಇವೆ. ಕಾರ್ಖಾನೆಗಳು ಸುಗಮವಾಗಿ ನಡೆಯಲು ರೈತರು ಮತ್ತು ಕಾರ್ಖಾನೆ ಮಾಲೀಕರು ಪರಸ್ಪರ ಸಹಕಾರ ನೀಡಬೇಕು. ರೈತರ ಹಿತ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಸ್ಯೆ ಬಗೆಹರಿಸುವ ಕಾರ್ಯ ನಡೆಯುತ್ತಿದೆ. ಕಬ್ಬು ಕಡಿಯುವವರು ರೈತರಿಗಿಂತಲೂ ಬಡವರು. ಅವರು ಉತ್ತರ ಕರ್ನಾಟಕಕ್ಕೆ ಬಂದು ಕೇವಲ 10 ದಿನಗಳಷ್ಟೇ ಆಗಿದೆ. ಈಗಾಗಲೇ ಕೆಲವೆಡೆ ಕಾರ್ಖಾನೆಗಳು ಕಾರ್ಯಾರಂಭ ಮಾಡಿವೆ. ಬೆಳಗಾವಿಯಲ್ಲೂ ಸಮಸ್ಯೆ ಬಗೆಹರಿಯುವ ಹಂತದಲ್ಲಿದೆ. ರಾಜೀವ ಅವರು ಹೆಚ್ಚು ದರ ನೀಡುವ ಭರವಸೆ ನೀಡಿರುವುದರಿಂದ ಹೋರಾಟ ಮುಂದುವರಿಯುತ್ತಿರುವುದು ಸಹಜ. ಆದರೆ, ಎಲ್ಲರೂ ಹೊಂದಾಣಿಕೆ ಮಾಡಿಕೊಂಡು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ರಸ್ತೆ ಮಧ್ಯ ಪ್ರತಿಭಟನೆ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಸಮಸ್ಯೆಗಳನ್ನು ಸಾಮರಸ್ಯದಿಂದ ಪರಿಹರಿಸಿಕೊಳ್ಳುವುದು ಅಗತ್ಯ. ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿರುವುದರಿಂದಲೇ ಕಬ್ಬಿಗೆ ಉತ್ತಮ ದರ ದೊರೆಯುತ್ತಿದೆ. ಇಲ್ಲದಿದ್ದರೆ ₹700, ₹ 800ಕ್ಕೆ ಕಬ್ಬು ಮಾರಾಟವಾಗುವ ಪರಿಸ್ಥಿತಿ ಉಂಟಾಗುತ್ತಿತ್ತು ಎಂದರು.

ಮಾಜಿ ಸಚಿವ ನಿರಾಣಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು, ಸಕ್ಕರೆ ರಫ್ತು ಸಮಸ್ಯೆ, ಎಥೆನಾಲ್ ಉತ್ಪಾದನೆ ಕುಸಿತ ಹಾಗೂ ಸಕ್ಕರೆ ದರ ಏರಿಕೆ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಸಕ್ಕರೆ ಉತ್ಪಾದನೆಯೊಂದಿಗೆ ಸಂಬಂಧಿಸಿದ ಅನೇಕ ಅಂಶಗಳ ಕಾರಣದಿಂದ ಕಾರ್ಖಾನೆಗಳಿಗೆ ಹೆಚ್ಚಿನ ದರ ನೀಡುವುದು ಕಷ್ಟಕರವಾಗಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೋರಾಟದಲ್ಲಿ ಭಾಗಿಯಾಗಿದ್ದ ಕುರಿತು ಉತ್ತರಿಸಿದ ಅವರು, ವಿಜಯೇಂದ್ರ ಅವರು ಸ್ಥಳಕ್ಕೆ ಬಂದಿರುವುದರಲ್ಲಿ ತಪ್ಪಿಲ್ಲ. ಅಗತ್ಯವಿದ್ದರೆ ನಾವು ಸೇರಿ ಕೇಂದ್ರದವರನ್ನು ಭೇಟಿಯಾಗಲು ಸಿದ್ಧ. ಡಿಸಿಯವರೂ ಸ್ಥಳಕ್ಕೆ ತೆರಳಿ ರೈತರ ಮನವಿ ಸ್ವೀಕರಿಸಿದ್ದಾರೆ. ಈಗ ಈ ವಿಷಯ ಇಲ್ಲಿಯೇ ಮುಗಿಯಬೇಕು. ರಾಜ್ಯ ಸರ್ಕಾರ ಕೇಂದ್ರದ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಭ್ರಮದ ಕ್ರಿಸ್‌ಮಸ್‌ ಆಚರಣೆಗೆ ಕ್ಷಣಗಣನೆ
ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಶ್ರಮಿಸಲಿ: ಮಂಜುನಾಥ ಕಂಬಳಿ