ಕನನಡಪ್ರಭ ವಾರ್ತೆ ಸಂಕೇಶ್ವರ
ಕಬ್ಬು ಬೆಲೆ ನಿಗದಿಗೆ ಸರ್ಕಾರ ತಕ್ಷಣ ಕ್ರಮಕೈಗೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಹುಕ್ಕೇರಿ ತಾಲೂಕಿನ ರೈತರು ಸಮೀಪದ ಕಮತನೂರ ಗೇಟ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.ದರ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಜಿಲ್ಲೆಯ ವಿವಿಧೆಡೆ ಪ್ರತಿಭಟನೆ ನಡೆಸುತ್ತಿದ್ದರೂ ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಚಕಾರವೆತ್ತಿಲ್ಲ. ಈ ಧೋರಣೆ ಹೀಗೆ ಮುಂದುವರಿದರೆ ಹೋರಾಟ ಯಾವ ಹಂತಕ್ಕಾದರೂ ತಲುಪಬಹುದು ಎಂದು ಎಚ್ಚರಿಕೆ ನೀಡಿದರು. ಉತ್ಪಾದನಾ ವೆಚ್ಚ ದಿನದಿಂದ ದಿನಕ್ಕೆ ಏರುತ್ತಿದೆ ಆದರೆ ಕಬ್ಬಿನ ಬೆಲೆ ಅದೆಷ್ಟೇ ವರ್ಷಗಳಾದರೂ ನ್ಯಾಯಯುತ ಮಟ್ಟಕ್ಕೇರುತ್ತಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು. ಕಬ್ಬು ಬೆಳೆಗಾರರ ಬೇಡಿಕೆ ಆಲಿಸದೆ ಹಂಗಾಮು ಆರಂಭಿಸಿರುವ ಸಕ್ಕರೆ ಕಾರ್ಖಾನೆಗಳು, ಸರ್ಕಾರದ ಮೌನದ ಬಗ್ಗೆ ಧಿಕ್ಕಾರದ ಘೋಷಣೆಗಳು ಕೇಳಿ ಬಂದವು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಸಂಜೀವ ಹಾವಣ್ಣವರ ಮಾತನಾಡಿ, ನೆರೆಯ ಮಹಾರಾಷ್ಟ್ರದಲ್ಲಿ ಕಬ್ಬಿಗೆ ಈಗಾಗಲೇ ₹3500 ದರ ಘೋಷಣೆಯಾಗಿದೆ. ನಮ್ಮ ಸರ್ಕಾರ ಮಾತ್ರ ಕಬ್ಬಿಗೆ ಯೋಗ್ಯ ಬೆಲೆ ನಿಗದಿ ಮಾಡುವಲ್ಲಿ ವಿಳಂಬ ಮಾಡುತ್ತಿದೆ. ಕಬ್ಬು ಕಟಾವಿನ ಹಂಗಾಮು ಇದ್ದು, ಖರೀದಿ ದರದ ಕುರಿತು ಸ್ಪಷ್ಟ ನಿರ್ಧಾರವಿಲ್ಲ. ರೈತರ ಬೆವರಿನ ಬೆಲೆ ಅರ್ಥವಾಗದ ನೀತಿ ಖಂಡನೀಯ ಎಂದರು. ರೈತರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರುತ್ತಿರುವ ರಾಜಕೀಯ ವ್ಯಕ್ತಿಗಳಿಗೆ ಮುಂಬರುವ ಚುನಾವಣೆಗಳಲ್ಲಿ ಬುದ್ಧಿ ಕಲಿಸಲು ರೈತರು ಸನ್ನದ್ಧರಾಗಬೇಕು ಎಂದು ಕರೆ ನೀಡಿದರು.ತಾಲೂಕು ಉಪಾಧ್ಯಕ್ಷ ನಾಗರಾಜ ಹಾದಿಮನಿ ಮಾತನಾಡಿ, ರೈತರು ನ್ಯಾಯಯುತವಾಗಿ ಕೇಳುತ್ತಿರುವ ಬೆಂಬಲ ಬೆಲೆಯ ಬೇಡಿಕೆ ಆಲಿಸಿ ಸೌಜನ್ಯಕ್ಕೂ ಸ್ಪಂದಿಸದ ಜನಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳ ಮಾಲೀಕರ ಮೇಲೆ ಹರಿಹಾಯ್ದರು. ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ರೈತರು ರೊಚ್ಚಿ ಗೆದ್ದಿದ್ದು ಮುಂದೆ ಆಗಬಹುದಾದ ಅನಾಹುತಗಳಿಗೆ ನಾವು ಹೊಣೆಯಲ್ಲ ಎಂದು ಎಚ್ಚರಿಸಿದರು.ಕಮತನೂರ ಸಿದ್ಧೇಶ್ವರ ಆಶ್ರಮದ ಕೃಪಾನಂದ ಸ್ವಾಮೀಜಿ ಮಾತನಾಡಿ, ರೈತ ಬೆಳೆದರೆ ಮಾತ್ರ ನಾಡಿಗೆ ಅನ್ನ, ಇದನ್ನು ಅರಿತು ಅವನ ಶ್ರಮಕ್ಕೆ ಸರ್ಕಾರ ಗೌರವ ಕೊಡಬೇಕು ಎಂದರು. ಕಮತನೂರ ಗೇಟ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು, ಯುವಕರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಸ್ತೆಗೆ ಅಡ್ಡಲಾಗಿ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಿ ರಸ್ತೆ ತಡೆ ನಡೆಸಿದ್ದರಿಂದ ಸಂಕೇಶ್ವರ- ಗೋಕಾಕ, ಚಿಕ್ಕೋಡಿ- ಬೆಳಗಾವಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಯಿತು.