ದಾಂಡೇಲಿ: ಇಲ್ಲಿಯ ಅರಣ್ಯಾಧಿಕಾರಿ ಮದನ ನಾಯಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲಿ ಒಬ್ಬನಾದ ಪ್ರಶಾಂತ ಲಮಾಣಿಗೆ ಶಿರಸಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 11 ವರ್ಷ ಜೈಲು ಶಿಕ್ಷೆ ಹಾಗೂ ₹11 ಸಾವಿರ ದಂಡ ವಿಧಿಸಿದೆ.
2012ರ ಅವಧಿಯಲ್ಲಿ ಮದನ ನಾಯಕ ಅವರು ದಾಂಡೇಲಿಯಲ್ಲಿ ಅರಣ್ಯಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಮೇ 6ರಂದು ಅವರು ಕುಟುಂಬಸಹಿತ ದಾಂಡೇಲಪ್ಪ ದೇಗುಲಕ್ಕೆ ಹೋಗಿದ್ದು, ಆ ಅವಧಿಯಲ್ಲಿ ಒಂದಷ್ಟು ಜನ ಮೊಸಳೆಗೆ ಮಾಂಸ ಎಸೆಯುತ್ತಿರುವುದನ್ನು ನೋಡಿದ್ದರು. ಮೊಸಳೆಗೆ ಮಾಂಸ ಎಸೆಯದಂತೆ ಮದನ ನಾಯಕ ಅವರು ಪ್ರವಾಸಿಗರಿಗೆ ತಡೆದಿದ್ದರು. ಅದನ್ನು ಸಹಿಸದ ಪ್ರವಾಸಿಗರು ಮದನ ನಾಯಕ ಹಾಗೂ ಅವರ ಕುಟುಂಬದ ಮೇಲೆ ದಾಳಿ ಮಾಡಿದ್ದರು. ದಾಳಿ ನಂತರ ಮದನ ನಾಯಕ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು. ಆದರೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮದನ ನಾಯಕ ಅವರು ಶೌಚಾಲಯದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿರುವುದಾಗಿ ಹೇಳಿಕೆ ನೀಡಿದ್ದರು. ಬಳಿಕ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದರು.
ಪ್ರಕರಣದ ಕುರಿತು ಸಿಐಡಿ ತನಿಖೆ ನಡೆದಿತ್ತು. ಡಿವೈಎಸ್ಪಿ ಬಿ.ಬಿ. ಅಶೋಕಕುಮಾರ ಅವರು ತನಿಖಾಧಿಕಾರಿ ಆಗಿದ್ದರು. ಹೆಡ್ ಕಾನ್‌ಸ್ಟೆಬಲ್ ಮಂಜು ಶೆಟ್ಟಿ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಮದನ ನಾಯಕ ಅವರ ಪುತ್ರಿ ಮೇಘಾ ನಾಯಕ ಅವರು ಜರ್ಮನಿಯಲ್ಲಿದ್ದು, ನ್ಯಾಯಾಧೀಶರು ವಿಡಿಯೋ ಕಾನ್ಪರೆನ್ಸ್ ಮೂಲಕ ಅವರ ಹೇಳಿಕೆ ಪಡೆದರು. 13 ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆದಿದ್ದು, ಶುಕ್ರವಾರ ನ್ಯಾಯಾಧೀಶ ಕಿರಣ ಕಿಣಿ ಆದೇಶ ಪ್ರಕಟಿಸಿದರು. ಸರ್ಕಾರಿ ಅಭಿಯೋಜಕ ರಾಜೇಶ ಮಳಗಿಕರ್ ಅವರು ಪ್ರಕರಣದಲ್ಲಿ ಸುದೀರ್ಘವಾಗಿ ವಾದ ಮಂಡಿಸಿದರು. ಕಲ್ಲಿನಿಂದ ಹೊಡೆದವರ ಪೈಕಿ ಈಗಾಗಲೇ ಒಬ್ಬರು ಸಾವನಪ್ಪಿದ್ದು, ಪ್ರಶಾಂತ ಲಮಾಣಿ ಈತನಿಗೆ ಶಿಕ್ಷೆ ಪ್ರಕಟಿಸಲಾಗಿದೆ.