ವಿಶೇಷ ವರದಿ ಕನ್ನಡಪ್ರಭ ವಾರ್ತೆ ಕುಶಾಲನಗರ
ಕಳೆದ ಎರಡು ತಿಂಗಳ ಅವಧಿಯಲ್ಲಿ ಕುಶಾಲನಗರ ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಎರಡು ಬದಿಯ ಮೀಸಲು ಅರಣ್ಯ ಸೇರಿದಂತೆ ದುಬಾರೆ, ಮೀನು ಕೊಲ್ಲಿ ಅರಣ್ಯಗಳ ವ್ಯಾಪ್ತಿಯ ಸುಮಾರು 13 ಸಾವಿರಕ್ಕೂ ಅಧಿಕ ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ವಿಶೇಷ ನಿಗಾ ವಹಿಸಿ ಯಾವುದೇ ರೀತಿಯ ಅಗ್ನಿ ಅನಾಹುತಗಳು ನಡೆದಂತೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.
ಈ ಮೂಲಕ ಅರಣ್ಯ ಸಂಪತ್ತು ಹಾಗೂ ಪ್ರಾಣಿ ಪಕ್ಷಿಗಳ ಸಂಕುಲಗಳ ರಕ್ಷಣೆ ಮಾಡುವಲ್ಲಿ ಇಲಾಖೆ ಅಧಿಕಾರಿ ಸಿಬ್ಬಂದಿ ಯಶಸ್ಸು ಕಂಡಿದ್ದಾರೆ.ಫೆಬ್ರವರಿ ಆರಂಭದಲ್ಲೇ ಕಾಡಿನ ಗಡಿ ಏಕೆ ಸ್ವಚ್ಛತೆ ಮಾಡುವ ಮೂಲಕ ಲೈನ್ ಕ್ಲಿಯರೆನ್ಸ್ ಮಾಡುವ ಕೆಲಸವನ್ನು ಸಿಬ್ಬಂದಿ ಕೈಗೆತ್ತಿಕೊಂಡಿದ್ದರು. ನಂತರ ಸೂಕ್ಷ್ಮ ಪ್ರದೇಶಗಳಲ್ಲಿ ಬೆಳಗಿನಿಂದ ಸಂಜೆ ತನಕ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿಯೇ ಠಿಕಾಣಿ ಹೂಡಿ ಯಾವುದೇ ರೀತಿಯ ಬೆಂಕಿ ಅನಾಹುತಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿತ್ತು ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ತಿಳಿಸಿದ್ದಾರೆ.
ಇಲಾಖೆಯ ಸಿಬ್ಬಂದಿ ಸೇರಿದಂತೆ ಆರ್ ಆರ್ ಟಿ ತಂಡದ ಸದಸ್ಯರು ಕೂಡ ಕಾಡ್ಗಿಚ್ಚಿನ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕಾರ್ಯದಲ್ಲಿ ನಿರತರಾಗಿದ್ದರು.
ಕಾವೇರಿ ನದಿ ಬತ್ತಿದರೂ ಅರಣ್ಯದ ಒಳಭಾಗದಲ್ಲಿದ್ದ ಕೆರೆಗಳಲ್ಲಿ ಮಾತ್ರ ನೀರಿನ ಪ್ರಮಾಣ ಮಾತ್ರ ಬತ್ತಿ ಹೋಗಿರಲಿಲ್ಲ.
ಈ ನಡುವೆ ಅರಣ್ಯ ಅಧಿಕಾರಿಗಳಿಗೆ ಹೆಚ್ಚಿನ ದಿನಗಳಲ್ಲಿ ಆನೆ ಮಾನವ ಸಂಘರ್ಷ, ಹುಲಿ ಕಾರ್ಯಾಚರಣೆ ಮುಂತಾದ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಾದ ಅನಿವಾರ್ಯತೆ ಕೂಡ ಎದುರಾಗಿತ್ತು.
ದುಬಾರೆ ಮೀಸಲು ಅರಣ್ಯ ವ್ಯಾಪ್ತಿಯ ಸುಮಾರು 5 ಸಾವಿರ ಹೆಕ್ಟೇರ್ ಅರಣ್ಯವನ್ನು ಉಪವಲಯ ಅಧಿಕಾರಿ ಕನ್ನಂಡ ರಂಜನ್ ಅವರ ಉಸ್ತುವಾರಿಯಲ್ಲಿ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಆನೆಕಾಡು ವ್ಯಾಪ್ತಿಯ ಸುಮಾರು ನಾಲ್ಕು ಸಾವಿರ ಹೆಕ್ಟೇರ್ ವ್ಯಾಪ್ತಿಯ ಪ್ರದೇಶದ ಅರಣ್ಯವನ್ನು ಉಪವಲಯ ಅರಣ್ಯ ಅಧಿಕಾರಿ ಕೆ ಎನ್ ದೇವಯ್ಯ, ಮೀನು ಕೊಲ್ಲಿ ಅರಣ್ಯ ಉಪ ವಿಭಾಗದ ಸುಮಾರು 2500 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅಲ್ಲಿನ ಅಧಿಕಾರಿ ಕೂಡಕಂಡಿ ಸುಬ್ರಾಯ ಮತ್ತು ಅತ್ತೂರು ಮೀಸಲು ಅರಣ್ಯ ವಲಯದ 2500 ಹೆಕ್ಟೇರ್ ಅಧಿಕ ಅರಣ್ಯ ಪ್ರದೇಶವನ್ನು ಉಪ ವಲಯ ಅರಣ್ಯ ಅಧಿಕಾರಿ ಅನಿಲ್ ಡಿ ಸೋಜ ಅವರ ನೇತೃತ್ವದಲ್ಲಿ ಸಿಬ್ಬಂದಿ ಸಂಪೂರ್ಣ ಮುನ್ನೆಚ್ಚರಿಕೆ ವಹಿಸುವುದರೊಂದಿಗೆ ಕಾಡ್ಗಿಚ್ಚು ಹಬ್ಬದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಇಲಾಖೆಯ ಅಧಿಕಾರಿ ಸಿಬ್ಬಂದಿ ಮಳೆ ಬಿದ್ದಿರುವ ಕಾರಣ ನಿಟ್ಟುಸಿರು ಬಿಟ್ಟಿದ್ದಾರೆ.
ಇದೀಗ ಕೆಲವೆಡೆ ಅಲ್ಲಲ್ಲಿ ಬಹುತೇಕ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಅರಣ್ಯಕ್ಕೆ ಬೆಂಕಿ ತಗಲುವ ಅಪಾಯ ತಪ್ಪಿದ್ದು ಕೆಲವೆಡೆ ಕಾವಲು ಕಾಯುವ ಕೆಲಸ ಮುಂದುವರಿದಿದೆ.