ಕೂಡ್ಲಿಗಿ: ಅರಣ್ಯ ಕೃಷಿಯಿಂದ ರೈತರಿಗೂ ಕಡಿಮೆ ಖಚಿನಲ್ಲಿ ಹೆಚ್ಚು ಆದಾಯ ಕಡಿಮೆ ಶ್ರಮದಲ್ಲಿ ಪಡೆಯಬಹದು. ವಾಯುಮಾಲಿನ್ಯ ಅಳಿಸಿ ಉತ್ತಮ ಪರಿಸರವನ್ನು ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ಎಂದು ಕೂಡ್ಲಿಗಿ ಸಾಮಾಜಿಕ ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಕೆ.ಎಂ. ಮಧುಸೂದನ್ ತಿಳಿಸಿದರು.
ತೇಗ, ಗಂಧ, ನೇರಳೆ, ಬೆಟ್ಟದ ನೆಲ್ಲಿ, ಮಹಾಗನಿ, ಕರಿಬೇವು, ನಿಂಬೆ ಸೇರಿದಂತೆ ಹತ್ತು ಹಲವು ಅರಣ್ಯ ಆಧಾರಿತ ಸಸಿಗಳನ್ನು ಅರಣ್ಯ ಇಲಾಖೆ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತಿದೆ. ರೈತರು ಇದರ ಸದುಪಯೋಗಪಡೆದುಕೊಂಡು ಆರ್ಥಿಕವಾಗಿ ಸಬಲವಾಗುವುದರ ಮೂಲಕ ಪರಿಸರವನ್ನು ಉಳಿಸುವ ಕಾರ್ಯ ಮಾಡಬೇಕಿದೆ ಎಂದರು.
ಮಕ್ಕಳು ಸಹ ಶಾಲಾ ಅಂಗಳದಲ್ಲಿ ಮನೆಯಂಗಳದಲ್ಲಿ ತಮ್ಮ ಹುಟ್ಟುಹಬ್ಬಕ್ಕೆ ಸಸಿ ನೆಡುವುದರ ಮೂಲಕ ಆಚರಿಸಿಕೊಂಡರೆ ಬದುಕು ಅರ್ಥಪೂರ್ಣವಾಗುತ್ತದೆ. ಸಸಿ ನೆಡುವುದಷ್ಟೇ ಅಲ್ಲ ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಪರಿಸರ ಪಾಠ ಮಾಡಿದರು. 1 ಸಸಿಗೆ ಸಾಮಾಜಿಕ ಅರಣ್ಯ ಇಲಾಖೆಯಿಂದ ಕೇವಲ ₹6 ರೂಪಾಯಿ ಇದ್ದು, 1 ಎಕರೆಗೆ 40 ಸಸಿಗಳು ಕೂರುತ್ತವೆ. ಅರಣ್ಯ ಕೖಷಿ ಮಾಡಿದ 4 ವರ್ಷಗಳ ನಂತರ ಕಾರ್ಬನ್ ಕ್ರೆಡಿಟ್ 1 ಎಕರೆಗೆ ₹40 ಸಾವಿರ ಸರ್ಕಾರ ಪ್ರೋತ್ಸಾಹಧನವನ್ನು ರೈತರಿಗೆ ನೀಡುತ್ತದೆ. ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.ಬಯಲು ತುಂಬರಗುದ್ದಿ ಸರ್ಕಾರಿ ಪ್ರೌಡಶಾಲೆಯ ಮುಖ್ಯಗುರು ಕೆ.ವೀರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳು ಎಂತಹ ಕಷ್ಟ ಬಂದರೂ ಎದೆಗುಂದದೇ ಛಲದಂಕ ಮಲ್ಲನಂತೆ ಜೀವನ ಮಾಡಬೇಕು. ಹದಿಹರೆಯದ ವಯಸ್ಸಿನಲ್ಲಿ ದಾರಿ ತಪ್ಪದೇ ನಮ್ಮ ಗುರಿಯ ಕಡೆಗೆ ಮನಸ್ಸು ಕೇಂದ್ರಿಕೃತವಾಗಬೇಕು. ಮನೆಗೆ, ಸಮಾಜಕ್ಕೆ ಹೊರೆಯಾಗದೇ ಮನೆಯಲ್ಲಿ ಬಡತನ ಇದೆ ಎಂದು ನೊಂದುಕೊಳ್ಳದೇ ದಿಟ್ಟತನದಿಂದ ಓದಿ ಮುಂದೆ ಬಂದರೆ ಜಗತ್ತೇ ನಿಮ್ಮ ಕಡೆ ನೋಡುತ್ತದೆ. ವಿದ್ಯೆ, ಸಾಧನೆ ಸಾಧಕರ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ವಿದ್ಯಾರ್ಥಿಗಳು ಸದಾ ಕ್ರಿಯಾಶೀಲವಾಗಿರಬೇಕೆಂದು ಕಿವಿಮಾತು ಹೇಳಿದರು.
ಎಸ್.ಡಿಎಂಸಿ ಅಧ್ಯಕ್ಷ ಬಿ.ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಮತ್ತಿಹಳ್ಳಿ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಯು.ಜಿ. ಕೊಟ್ರೇಶ್ ನಿರೂಪಿಸಿದರು. ಎಸ್.ಎನ್. ಪ್ರಸನ್ನ ಸ್ವಾಗತಿಸಿದರು. ಎಚ್.ಕೆ. ನಾಗರಾಜ್ ವಂದಿಸಿದರು. ಗ್ರಾಮದ ಮುಖಂಡರಾದ ಮಹದೇವಪ್ಪ, ದೊಡ್ಡವೀರಪ್ಪ, ಶಿಕ್ಷಕರಾದ ಜೆ.ಮಂಜುನಾಥ, ವೈ.ನಾಗರಾಜ, ಸಿಬ್ಬಂದಿ ಬಿ.ಪಾರ್ವಪತಿ, ಆರ್. ಕರಿಬಸಮ್ಮ ಉಪಸ್ಥಿತರಿದ್ದರು.