ಪಕ್ಷಬೇಧ ಮರೆತು ಭದ್ರಾ ಮೇಲ್ಡಂಡೆಗೆ ಶ್ರಮಿಸಿ

KannadaprabhaNewsNetwork | Published : Feb 12, 2025 12:30 AM

ಸಾರಾಂಶ

ತರಳಬಾಳು ಹುಣ್ಣಿಮೆಯಲ್ಲಿ ರಾಜ್ಯದ ಸಂಸದರಿಗೆ ತರಳಬಾಳು ಶ್ರೀ ತಾಕೀತು

ಕನ್ನಡಪ್ರಭ ವಾರ್ತೆ ಸಿರಿಗೆರೆ:

ಭರಮಸಾಗರ ಮತ್ತು ಜಗಳೂರು ಏತ ನೀರಾವರಿ ಯೋಜನೆಗಳಿಗಿಂತ ಮುಂಚಿತವಾಗಿಯೇ ಮಂಜೂರಾಗಿದ್ದ ಭದ್ರಾ ಮೇಲ್ಡಂಡೆ ಯೋಜನೆ ಕಾಮಗಾರಿ ನಿಧಾನಗತಿಯಲ್ಲಿ ಮುಂದುವರೆದಿದೆ. ಇದಕ್ಕೆ ರಾಜಕೀಯ ನಾಯಕರ ನಿರಾಸಕ್ತಿ ಕಾರಣವಾಗಿದೆ. ಕೇಂದ್ರ ಸರ್ಕಾರ ಈ ಯೋಜನೆಗೆ ಮಂಜೂರು ಮಾಡಿದ್ದ 5300 ಕೋಟಿ ರು. ಕೂಡಲೇ ಒದಗಿಸುವಂತೆ ರಾಜ್ಯದ ಎಲ್ಲಾ ಸಂಸದರು ಪಕ್ಷಬೇಧ ಮರೆತು ಕೇಳಬೇಕು ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ತಾಕೀತು ಮಾಡಿದರು.

ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಮಂಗಳವಾರ ನಡೆದ ಕೃಷಿ ಮೇಳ ಮತ್ತು ರೈತ ಸಂವಾದ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಈ ವಿಚಾರದಲ್ಲಿ ರಾಜ್ಯದ ಸಂಸದರು ಒಗ್ಗಟ್ಟು ತೋರಬೇಕು ಎಂದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಫಸಲ್‌ ಭಿಮಾ ಯೋಜನೆ ಮೇಲ್ನೋಟಕ್ಕೆ ಚೆನ್ನಾಗಿದೆ. ಆದರೆ ಅದು ಹಲವು ದೋಷಗಳಿಂದ ಕೂಡಿದೆ. ಬೆಳೆ ನಷ್ಟಕ್ಕೆ ಪರಿಹಾರ ಒದಗಿಸಲು ಆ ರೈತರ ೭ ವರ್ಷಗಳ ಬೆಳೆಯ ಸರಾಸರಿ ಲೆಕ್ಕಕ್ಕೆ ತೆಗೆದುಕೊಳ್ಳುವುದು ದೊಡ್ಡ ದೋಷ. ಈ ವಿಚಾರವನ್ನು ಕೈಬಿಟ್ಟು ಪ್ರತಿ ವರ್ಷದ ಬೆಳೆಯ ನಷ್ಟವನ್ನಷ್ಟೇ ಗಣನೆಗೆ ತೆಗೆದುಕೊಳ್ಳಬೇಕು. ಇದರಿಂದ ರೈತರಿಗೆ ನೆರವಾಗುತ್ತದೆ ಎಂದರು.

ಈಗಿರುವ ಕ್ರಾಪ್‌ ಕಟಿಂಗ್‌ ಎಕ್ಸ್‌ಪೆರಿಮೆಂಟ್‌ ದೋಷಪೂರಿತವಾಗಿರುವುದರಿಂದ ಅದನ್ನು ನಿಬಂಧನೆಯಿಂದ ಕೈಬಿಡಬೇಕು. ಉಪಗ್ರಹ ಆಧಾರಿತ ತಂತ್ರಜ್ಞಾನ ಬಳಸಿಕೊಂಡು ರೈತನ ಜಮೀನಿನ ನಷ್ಟ ದಾಖಲಿಸುವ ಪದ್ಧತಿಯನ್ನು ಜಾರಿಗೊಳಿಸಬೇಕು ಎಂದು ಶ್ರೀಗಳು

ಒತ್ತಾಯಿಸಿದರು.

ರೈತರ ಬೇಡಿಕೆಗಳ ವಿಚಾರವಾಗಿ ನಡೆಯುವ ಚಳುವಳಿಗಳಿಂದ ಯಾವುದೇ ಉಪಯೋಗವಾಗುವುದಿಲ್ಲ. ಮಾಹಿತಿಯನ್ನು ಸರಿಯಾಗಿ ಸಂಗ್ರಹಿಸಿ ಅದನ್ನು ಅಧಿಕಾರಿಗಳು ಮತ್ತು ಸರ್ಕಾರದ ಮುಂದೆ ಮಂಡಿಸಿ ಕೆಲಸ ಮಾಡಿಸಿಕೊಳ್ಳಬೇಕು. ನಾವು ಯಾವುದೇ ರಾಜಕೀಯ ಪಕ್ಷವನ್ನು ವಹಿಸಿಕೊಳ್ಳದೇ ಇರುವುದರಿಂದ ಎಲ್ಲ ಸರ್ಕಾರಗಳು ಜನಹಿತದ ದೃಷ್ಟಿಯಿಂದ ನಾವು ಕೇಳುವ ಯೋಜನೆಗಳನ್ನು ಮಂಜೂರು ಮಾಡುತ್ತಾ ಬಂದಿದ್ದಾರೆ ಎಂದರು.

ವಿಧಾನಸಭೆಯಲ್ಲಿ ಜನನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗದೆ ಜನರ ಹಿತವನ್ನು ನೋಡಬೇಕು. ವಿಧಾನಸಭೆಯನ್ನು ನಡೆಸಲು ಖರ್ಚಾಗುವ ಹಣದ ಕಡೆಗೆ ಅವರ ಗಮನ ಇರಬೇಕು. ಒಬ್ಬರು ಮತ್ತೊಬ್ಬರ ಚಾರಿತ್ರ್ಯವಧೆ ಮಾಡದಂತೆ ಶಾಸನವನ್ನು ತರಬೇಕೆಂದು ಸಲಹೆ ಮಾಡಿದರು.

ಸಂಕಷ್ಟದ ಸ್ಥಿತಿಯಲ್ಲಿ ಅಮೃತ ರೈತ ಉತ್ಪಾದಕ ಕಂಪನಿಗಳು

ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಗಳು ಸಾಕಷ್ಟು ಸಂಕಷ್ಟದಲ್ಲಿವೆ. ಇವು ಆರಂಭವಾದಾಗ ಕೇವಲ ಒಂದು ವರ್ಷದ ಅನುದಾನ ಮಾತ್ರ ಬಿಡುಗಡೆಯಾಗಿದ್ದು, ಕಳೆದ ಎರಡು ವರ್ಷಗಳಿಂದ ಕಂಪನಿಗಳ ಸಿಇಒ ಮತ್ತು ಸಿಬ್ಬಂದಿಗಳಿಗೂ ವೇತನ ಬಿಡುಗಡೆಯ ಭಾಗ್ಯ ದೊರೆತಿಲ್ಲ. ಜಿಎಸ್‌ಟಿ ವ್ಯಾಪ್ತಿಯಿಂದ ಎಫ್‌ಪಿಒ ಕಂಪನಿಗಳಿಗೆ ವಿನಾಯಿತಿ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳು ಕಂಪನಿಯ ನಿರ್ದೇಶಕರ ಸಿಬಿಲ್‌ ಸ್ಕೋರ್‌ ಆಧಾರದ ಮೇಲೆ ಮಾತ್ರ ಸಾಲ ನೀಡುವ ನಿಬಂದನೆಗಳನ್ನು ಹಾಕಿದ್ದು ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡದೇ ಸಾಕಷ್ಟು ಉತ್ಪಾದಕತೆಗೆ ಆರ್ಥಿಕ ಮುಗ್ಗಟ್ಟು ಸೃಷ್ಟಿಯಾಗಿದೆ ಎಂದು ಜಗಳೂರು ತಾಲೂಕಿನ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಮೆದಗಿನಕೆರೆ ಮಂಜುನಾಥ್‌, ಉಪಾಧ್ಯಕ್ಷ ಎಸ್‌.ಎಂ.ಸೋಮನಗೌಡ, ಸಿಇಒ ಸುರೇಶ್‌, ರೈತ ಮುಖಂಡ ಎಚ್‌.ಆರ್‌.ಬಸವರಾಜಪ್ಪ ಅವರಿಗೆ ಮನವರಿಕೆ ಮಾಡಿ ಸಚಿವ ಚಲುವರಾಯಸ್ವಾಮಿ ಗಮನಕ್ಕೆ ತಂದು ರೈತ ಉತ್ಪಾದಕ ಸಂಸ್ಥೆಗಳಿಗೆ ನೆರವಾಗಲು ಕೋರಿದರು.

Share this article