ಶಿರಸಿ ಜಿಲ್ಲೆಗಾಗಿ ನಾವು ಸಮಾಲೋಚನಾ ಸಭೆಯಲ್ಲಿ ನಿರ್ಣಯ । ಹೋರಾಟದ ವಿಚಾರದಲ್ಲಿ ರಾಜಕೀಯ ಬೇಡ
ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟದಲ್ಲಿ ರಾಜಕೀಯ ಇರಬಾರದು. ಎಲ್ಲರೂ ಒಗ್ಗಟ್ಟಾಗಿ ಪಕ್ಷ ಭೇದ ಬದಿಗಿಟ್ಟು ಒಮ್ಮತದ ಹೋರಾಟದಿಂದ ಗೆಲುವು ಸಾಧ್ಯ ಎಂಬ ನಿರ್ಣಯವನ್ನು ನಗರದ ನೆಮ್ಮದಿ ರಂಗಧಾಮದಲ್ಲಿ ಗುರುವಾರ ಆಯೋಜಿಸಿದ್ದ ಶಿರಸಿ ಜಿಲ್ಲೆಗಾಗಿ ನಾವು ಸಮಾಲೋಚನಾ ಸಭೆಯಲ್ಲಿ ಕೈಗೊಳ್ಳಲಾಯಿತು.
ಸಾಮಾಜಿಕ ಕಾರ್ಯಕರ್ತ ವೆಂಕಟೇಶ ಹೆಗಡೆ ಹೊಸಬಾಳೆ ಮಾತನಾಡಿ, ಶಿರಸಿ ಜಿಲ್ಲೆ ಅತಿ ಅವಶ್ಯಕವಾಗಿದೆ. ಜಿಲ್ಲಾ ಹೋರಾಟದ ವಿಚಾರದಲ್ಲಿ ರಾಜಕೀಯ ಬೇಡ. ರಾಜಕೀಯದ ಹೊರತಾಗಿ ಹೋರಾಟ ಮಾಡಬೇಕಿದೆ. ಪಕ್ಷಾತೀತವಾದ ಸಂಘಟನೆ ರಚನೆಯಾಗಬೇಕು. ಆ ಸಂಘಟನೆಯಲ್ಲಿ ಎಲ್ಲ ಪಕ್ಷಗಳ ಶಾಸಕರು, ಜನಪ್ರತಿನಿಧಿಗಳು ಇರಬೇಕು. ಚರ್ಚೆಗಳು ನಡೆಯಬೇಕು. ಜಿಲ್ಲಾ ಹೋರಾಟದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ, ಒಮ್ಮತದ ನಿರ್ಧಾರಕ್ಕೆ ಬರಬೇಕು. ನಾವೆಲ್ಲರೂ ಒಟ್ಟಾಗಿ ಸರ್ಕಾರದ ಗಮನಕ್ಕೆ ತರಬೇಕು ಎಂದರು.ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಮುಖಂಡರಾದ ಪ್ರಭಾಕರ ಜೋಗಳೇಕರ್, ಆರ್.ವಿ. ಹೆಗಡೆ ಬಾಳೆಗದ್ದೆ, ರಾಜು ಉಗ್ರಾಣಕರ್, ಚಿದಾನಂದ ಹರಿಜನ ಮುಂಡಗೋಡ, ರವಿ ಹೆಗಡೆ ಗಡಿಹಳ್ಳಿ ಮಾತನಾಡಿದರು. ಜಿಲ್ಲಾ ಹೋರಾಟದ ಪ್ರಮುಖರು ಸೇರಿದಂತೆ ಹಲವರು ಇದ್ದರು.