ಫಾರಂ ನಂ. 3 ವಿತರಣೆಗೆ ಕ್ರಮ: ಸಂಸದ ರಾಜಶೇಖರ ಹಿಟ್ನಾಳ

KannadaprabhaNewsNetwork |  
Published : May 06, 2025, 12:20 AM IST
5ಉಳಉ10 | Kannada Prabha

ಸಾರಾಂಶ

ನೈರ್ಮಲೀಕರಣ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕಿದ್ದು. ಯೋಜನೆ ಅನುದಾನ ಸಮರ್ಪಕ ಬಳಸಿಕೊಳ್ಳಬೇಕು.

ಗಂಗಾವತಿ:

ನನೆಗುದಿಗೆ ಬಿದ್ದಿರುವ ನಗರ ವ್ಯಾಪ್ತಿಯ ಫಾರಂ ನಂ.3 ವಿತರಣೆಗೆ ಕ್ರಮಕೈಗೊಳ್ಳಲಾಗುತ್ತಿದ್ದು, ಪ್ರಾದೇಶಿಕ ಕಚೇರಿ ಆಯುಕ್ತರ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಸಂಸದ ರಾಜಶೇಖರ್ ಹಿಟ್ನಾಳ ಹೇಳಿದರು.

ನಗರದ ತಾಲೂಕು ಪಂಚಾಯಿತಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೇಂದ್ರ ಮತ್ತು ರಾಜ್ಯಮಟ್ಟದ ಯೋಜನೆಗಳ ಹೋಬಳಿ ಮಟ್ಟದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರದ ಹಕ್ಕುಪತ್ರ ವಂಚಿತರಾದವರ ಮಾಲೀಕತ್ವ ಸಮಸ್ಯೆಯಿಂದ ಫಾರಂ ನಂ. 3 ವಿತರಣೆಯಲ್ಲಿ ವಿಳಂಬವಾಗಿದೆ. ಈ ಬಗ್ಗೆ ಪ್ರಾದೇಶಿಕ ಆಯುಕ್ತರಿಂದ ಮಾಹಿತಿ ಪಡೆಯಲಾಗುವುದು ಎಂದ ಸಂಸದರು, ನೈರ್ಮಲೀಕರಣ ಮತ್ತು ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರಕ್ಕೆ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕಿದ್ದು. ಯೋಜನೆ ಅನುದಾನ ಸಮರ್ಪಕ ಬಳಸಿಕೊಳ್ಳಬೇಕು. ಅನುದಾನ ಬಿಡುಗಡೆಯಲ್ಲಿ ವಿಳಂಬವಾದರೆ ತಕ್ಷಣವೇ ಮಾಹಿತಿ ನೀಡಿದರೆ ರಾಜ್ಯ ಸರ್ಕಾರದೊಂದಿಗೆ ಸಂಪರ್ಕಿಸಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತರಿಗೆ ತಿಳಿಸಿದರು.

ನಗರದ ತೆರಿಗೆ ಪ್ರಮಾಣವನ್ನು ₹ 20 ಕೋಟಿಗೆ ಹೆಚ್ಚಿಸಬೇಕಿದ್ದು, ಬಾಕಿ ತೆರಿಗೆ ವಸೂಲಿಗೆ ನಗರಸಭೆ ಸದಸ್ಯರು ಸಹಕರಿಸಬೇಕು. ತೆರಿಗೆ ಹೆಚ್ಚಳಕ್ಕಿಂತ ವಸೂಲಿ ಪ್ರಮಾಣದ ಹೆಚ್ಚಳಕ್ಕೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ನಗರಸಭೆ ತೆರಿಗೆ ವಸೂಲಿ ₹12 ಕೋಟಿಗೆ ಹೆಚ್ಚಿಸಿದ್ದು, ಕುಡಿಯುವ ನೀರು ಮತ್ತು ನೈರ್ಮಲೀಕರಣಕ್ಕಾಗಿ ಬಿಡುಗಡೆಯಾದ ₹ 12.35 ಕೋಟಿ ಪೈಕಿ ₹ 8.65 ಕೋಟಿ ಬಳಸಿಕೊಳ್ಳಲಾಗಿದೆ. ಉಳಿದ ಅನುದಾನ ಬಳಕೆಗೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದ ಅವರು, ಬಾಕಿ ಉಳಿದಿರುವ ಒಳಚರಂಡಿ ಯೋಜನೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಂಸದರಿಗೆ ಭರವಸೆ ನೀಡಿದರು.

ಹನಿ ನೀರು ಸಿಕ್ಕಿಲ್ಲ:

ಜಲಜೀವನ ಮಿಷನ್ ಯೋಜನೆಯಡಿ ತಾಲೂಕಿನ ಸಂಗಾಪುರ, ಮಲ್ಲಾಪುರ, ಆನೆಗೊಂದಿ, ಸಣಾಪುರ ವ್ಯಾಪ್ತಿಯಲ್ಲಿ ಕೈಗೊಂಡ ಕಾಮಗಾರಿ ಕಳಪೆಯಾಗಿದ್ದೂ, ಒಂದು ಹನಿ ನೀರು ಸಿಕ್ಕಿಲ್ಲ ಎಂದು ವಿವಿಧ ಗ್ರಾಪಂ ವ್ಯಾಪ್ತಿಯ ಸದಸ್ಯರು ಮಾಹಿತಿ ನೀಡಿದರು. ಆಗ ಸಂಸದರು, ಯೋಜನೆ ಅನುಷ್ಠಾನ ಸಂದರ್ಭದಲ್ಲಿ ಸಿದ್ಧಪಡಿಸಿದ ಕ್ರಿಯಾಯೋಜನೆ ಲೋಪದಿಂದ ಯೋಜನೆ ವಿಫಲವಾಗಿದ್ದು, ಬಾಕಿ ಕಾಮಗಾರಿಗಾಗಿ ₹ 145 ಕೋಟಿ ಬೇಕಿದೆ. ಈ ಕುರಿತು ಸರ್ಕಾರದ ಮುಂದೆ ಪ್ರಸ್ತಾವನೆ ಇದೆ. ಇನ್ನೂ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಿದರು.

ಆನೆಗೊಂದಿ ಮತ್ತು ಸಣಾಪುರ ಗ್ರಾಪಂ ವ್ಯಾಪ್ತಿಯಲ್ಲಿ ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಮಾಡಲಾಗುತ್ತಿದ್ದು, ಎನ್‌ಜಿಒ ಸಹಕಾರ ಪಡೆಯಲಾಗಿದೆ. ತ್ಯಾಜ್ಯ ವಿಲೇವಾರಿಯಿಂದ ಆದಾಯವೂ ಬರುತ್ತಿದೆ. ಉಳಿದ ಗ್ರಾಪಂ ವ್ಯಾಪ್ತಿಗೂ ಯೋಜನೆ ವಿಸ್ತರಿಸಲು ಯೋಚಿಸಲಾಗಿದೆ ಎಂದು ತಾಪಂ ಇಒ ರಾಮರೆಡ್ಡಿ ಪಾಟೀಲ್ ಮಾಹಿತಿ ನೀಡಿದರು.

ಸಭೆಯಲ್ಲಿ ವಿವಿಧ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರಲ್ಲದೇ, ಕಾಮಗಾರಿ ವಿಳಂಬಕ್ಕೆ ಅವಕಾಶ ನೀಡದಂತೆ ಅಧಿಕಾರಿಗಳಿಗೆ ಸಂಸದರು ತಾಕೀತು ಮಾಡಿದರು.

ತಹಸೀಲ್ದಾರ್ ಯು. ನಾಗರಾಜ್, ನಗರಸಭೆ ಅಧ್ಯಕ್ಷೆ ಹೀರಾಬಾಯಿಸಿಂಗ್, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಡಾ. ಕೆ. ವೆಂಕಟೇಶಬಾಬು ಇದ್ದರು.

PREV

Recommended Stories

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಡ್ಡಿ: 9ರಂದು ಬೃಹತ್ ಜನಾಗ್ರಹ ಸಭೆ
ಮೋದಿ ಸರ್ಕಾರದಿಂದ ಜಿಎಸ್‌ಟಿ ಇಳಿಕೆ ಐತಿಹಾಸಿಕ ಕೊಡುಗೆ: ಶಾಸಕ ವೇದವ್ಯಾಸ್‌ ಕಾಮತ್