ಮೈಷುಗರ್ ಅವ್ಯವಹಾರ ತನಿಖೆಗೆ ಸಮಿತಿ ರಚನೆ

KannadaprabhaNewsNetwork |  
Published : Jan 21, 2026, 01:30 AM IST
20ಕೆಎಂಎನ್‌ಡಿ-1ಮೈಷುಗರ್‌ ಸಕ್ಕರೆ ಕಾರ್ಖಾನೆ | Kannada Prabha

ಸಾರಾಂಶ

ಮೈಷುಗರ್ ಕಾರ್ಖಾನೆಯಲ್ಲಿ ೨೦೨೧-೨೨ನೇ ಸಾಲಿನಿಂದ ಈವರೆಗೆ ನಡೆದಿದೆ ಎನ್ನಲಾದ ಅವ್ಯವಹಾರ, ನಿಯಮಬಾಹಿರ ಚಟುವಟಿಕೆ, ಕಂಪನಿಗೆ ಉಂಟಾಗಿದೆ ಎನ್ನಲಾದ ನಷ್ಟ, ಅಕ್ರಮ ನೇಮಕಾತಿ ಆರೋಪಗಳ ಕುರಿತು ಪರಿಶೀಲನೆ ನಡೆಸಿ ವರದಿ ನಡೆಸಲು ರಾಜ್ಯ ಸರ್ಕಾರ ತನಿಖಾ ಸಮಿತಿಯೊಂದನ್ನು ರಚನೆ ಮಾಡಿ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆಯಲ್ಲಿ ೨೦೨೧-೨೨ನೇ ಸಾಲಿನಿಂದ ಈವರೆಗೆ ನಡೆದಿದೆ ಎನ್ನಲಾದ ಅವ್ಯವಹಾರ, ನಿಯಮಬಾಹಿರ ಚಟುವಟಿಕೆ, ಕಂಪನಿಗೆ ಉಂಟಾಗಿದೆ ಎನ್ನಲಾದ ನಷ್ಟ, ಅಕ್ರಮ ನೇಮಕಾತಿ ಆರೋಪಗಳ ಕುರಿತು ಪರಿಶೀಲನೆ ನಡೆಸಿ ವರದಿ ನಡೆಸಲು ರಾಜ್ಯ ಸರ್ಕಾರ ತನಿಖಾ ಸಮಿತಿಯೊಂದನ್ನು ರಚನೆ ಮಾಡಿ ಆದೇಶ ಹೊರಡಿಸಿದೆ.

ಮಹಾರಾಷ್ಟ್ರದ ನಿವೃತ್ತ ಸಕ್ಕರೆ ಆಯುಕ್ತ ಶೇಖರ್ ಗಾಯಕ್‌ವಾಡ್ ನೇತೃತ್ವದಲ್ಲಿ ಸದಸ್ಯರಾದ ಮಹಾರಾಷ್ಟ್ರದ ಪುಣೆಯಲ್ಲಿರುವ ವಸಂತದಾದ ಷುಗರ್ ಇನ್‌ಸ್ಟಿಟ್ಯೂಟ್‌ನ ಷುಗರ್ಸ್‌ ಎಂಜಿನಿಯರಿಂಗ್ ಮತ್ತು ರಿನೀವೆಬಲ್ ಎನರ್ಜಿ ಡಿಪಾರ್ಟ್‌ಮೆಂಟ್ ಮುಖ್ಯಸ್ಥ ರಾಜೇಂದ್ರ ಚಾಂದಗುಡೆ, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಬೆಳಗಾವಿ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರ್ದೇಶಕ ಬಿ.ಎಸ್.ರಾಜಗೋಪಾಲ್, ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ತಾಂತ್ರಿಕ ಸಲಹೆಗಾರ ಸಿ.ಬಿ.ಪಾಟೀಲ್‌, ಲಾತೂರ್‌ನ ಮುಜಾವರ ಬಹದೂರಲಿ ಇಬ್ರಾಹಿಂ ಅವರ ತಂಡವನ್ನು ರಚಿಸಿದೆ.

ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಅಪ್ಪಾಸಾಹೇಬ್ ಪಾಟೀಲ್, ಎಂ.ಆರ್.ರವಿಕುಮಾರ್, ಡಾ.ಎಚ್.ಎಲ್. ನಾಗರಾಜು ಹಾಗೂ ಪ್ರಸ್ತುತ ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್, ವ್ಯವಸ್ಥಾಪಕ (ತಾಂತ್ರಿಕ) ಅಪ್ಪಾಸಾಹೇಬ್‌ ಪಾಟೀಲ್‌, ಕಬ್ಬು ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್, ಸಿಬ್ಬಂದಿ ತೇಜಸ್ವಿನಿ, ರಮೇಶ್ ಚೆಲ್ಲಾಪುರ್ ಅವರ ಅಧಿಕಾರವಧಿಗಳಲ್ಲಿ ನಡೆದಿರುವ ಅವ್ಯವಹಾರಗಳ ಕುರಿತಂತೆ ಸಮಿತಿ ತನಿಖೆ ನಡೆಸಲಿದೆ.

ಕ್ಷೇತ್ರ ಸಹಾಯಕ ಆಯ್ಕೆ, ಕಬ್ಬು ಕಟಾವಿಗೆ ಮುಂಗಡ ಹಣ ಪಾವತಿ, ಕಬ್ಬು ಕಟಾವು ಮತ್ತು ಸಾಗಣೆ, ಕಬ್ಬಿನ ತೂಕ ಮತ್ತು ಹಣ ಪಾವತಿ, ಹೊರಗುತ್ತಿಗೆ ನೌಕರರ ನೇಮಕಾತಿ, ಸಕ್ಕರೆ ಮಾರಾಟ, ಕಾರ್ಖಾನೆ ಆವರಣದಲ್ಲಿನ ಮರಗಳ ಕಟಾವು, ಕಾಮಗಾರಿಗಳ ನಿರ್ವಹಣೆ, ನಿವೃತ್ತ ಮತ್ತು ಸ್ವಯಂ ನಿವೃತ್ತಿ ಪಡೆದ ನೌಕರರ ನೇಮಕ, ಕರ್ತವ್ಯನಿರ್ಲಕ್ಷ್ಯತೆ, ಕಂಪನಿಯ ಖಾಲಿ ಜಾಗದ ಗುತ್ತಿಗೆಯಂತಹ ನಿಯಮಬಾಹಿರ ಚಟುವಟಿಕೆಗಳಿಂದ ಕಂಪನಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದ್ದು, ಈ ಆರೋಪಗಳ ಕುರಿತಂತೆ ಮತ್ತು ನಿಯಮಬಾಹೀರವಾಗಿ ಸಭಾ ನಡವಳಿಗೆ ಸಹಿ ಹಾಕಿರುವುದು, ತನಿಖಾ ಸಮಿತಿ ರಚಿಸಿರುವ ಆರೋಪಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು ಕಂಪನಿಗೆ ಆಗಿರುವ ನಷ್ಟವನ್ನು ವಸೂಲು ಮಾಡುವಂತೆ ಸರ್ಕಾರಕ್ಕೆ ಅನೇಕ ದೂರುಗಳುಬಂದಿರುವ ಹಿನ್ನೆಲೆಯಲ್ಲಿ ಸರ್ಕಾರ ತನಿಖಾ ಸಮಿತಿಯನ್ನು ರಚಿಸಿದೆ.

ಮೈಷುಗರ್ ಕಾರ್ಖಾನೆಗೆ ಹೊರಗುತ್ತಿಗೆ ನೇಮಕಾತಿ ಮಾಡುವಾಗ ಮೀಸಲಾತಿ ನಿಯಮಗಳ ಉಲ್ಲಂಘನೆ, ೨೦೨೩-೨೪ನೇ ಸಾಲಿನಲ್ಲಿ ಕಾರ್ಖಾನೆಯ ಸಕ್ಕರೆಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿರುವುದು, ಕೋಣನಹಳ್ಳಿ ಕೆರೆಯಿಂದ ಕಾರ್ಖಾನೆಗೆ ನೀರು ಸರಬರಾಜು ಮಾಡಲು ಪೈಪ್‌ಲೈನ್ ಅಳವಡಿಸಿರುವ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು, ಮೈಷುಗರ್ ಕಂಪನಿಗೆ ಸೇರಿದ ಜಾಗವನ್ನು ಅಕ್ರಮವಾಗಿ ಗುತ್ತಿಗೆ ನೀಡಿ ಕಾರ್ಖಾನೆಗೆ ತುಂಬಲಾರದ ನಷ್ಟ ಉಂಟುಮಾಡಿರುವುದು ಸೇರಿದಂತೆ ಇತರ ಅವ್ಯವಹಾರ ಮತ್ತು ನಿಯಮಬಾಹೀರ ಚಟುವಟಿಕೆಗಳಿಂದ ಕಾರ್ಖಾನೆಗೆ ಉಂಟಾಗಿರುವ ನಷ್ಟದ ಕುರಿತಂತೆ ಪರಿಶೀಲಿಸಿ ವರದಿ ನೀಡುವಂತೆ ಸಮಿತಿಗೆ ಸೂಚಿಸಲಾಗಿದೆ.

ಸಮಿತಿಯು ಕಾರ್ಖಾನೆಗೆ ಭೇಟಿ ನೀಡಿ ಪ್ರತಿಯೊಂದು ದೂರುಗಳ ಕುರಿತು ಪರಿಶೀಲನೆ ನಡೆಸಿ ೧೫ ದಿನಗಳ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಸಮಿತಿಗೆ ಅಗತ್ಯ ದಾಖಲೆ, ಮಾಹಿತಿಗಳನ್ನು ಒದಗಿಸಿ ಸ್ಥಳಾವಕಾಶ ಹಾಗೂ ಅಗತ್ಯ ಸಿಬ್ಬಂದಿ ಒದಗಿಸುವುದು. ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರ ಪ್ರಯಾಣ, ವಸತಿಗೆ ಕಂಪನಿಯಿಂದಲೇ ವ್ಯವಸ್ಥೆ ಮಾಡುವಂತೆ ವಾಣಿಜ್ಯ ಮತ್ತು ಕೈಗಾರಿಕೆಲಾಖೆ (ಸಕ್ಕರೆ) ಸರ್ಕಾರದ ಅಧೀನ ಕಾರ್ಯದರ್ಶಿ ಶಾಂತಾರಾಮ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ಅಹಿಂದ ಸಮಾವೇಶ
ಕೈ ಆಡಳಿತ ವೈಫಲ್ಯ ವಿರುದ್ಧ ಬಿಜೆಪಿಯಿಂದ ಪ್ರತಿಭಟನೆ