ರಾಣಿಬೆನ್ನೂರು: ಗ್ಯಾರಂಟಿ ಯೋಜನೆಗಳ ವ್ಯವಸ್ಥಿತ ಮತ್ತು ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ 28 ಗ್ರಾಮಪಂಚಾಯತಿಗಳಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ತಲಾ ಆರು ಜನರನ್ನು ಒಳಗೊಂಡ ತಂಡ ರಚಿಸಲು ನಗರದ ತಾಪಂ ಸಭಾ ಭವನದಲ್ಲಿ ಮಂಗಳವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ಕೈಗೊಳ್ಳಲಾಯಿತು.
ಸಭೆಯ ಆರಂಭದಲ್ಲಿಯೇ ಗೃಹ ಲಕ್ಷ್ಮಿ ಯೋಜನೆ ಕುರಿತು ಬಹುತೇಕ ಸದಸ್ಯರು ಪ್ರಸ್ತಾಪ ಮಾಡಿದರು. ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಸಿಡಿಪಿಒ ವೈ.ಟಿ. ಪೂಜಾರ, ಏನುಮರೇಟರ್ ಮೂಲಕ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಸಮೀಕ್ಷೆ ಕೈಗೊಳ್ಳಲಾಗುತ್ತದೆ. ಗ್ಯಾರಂಟಿ ಸಮಿತಿ ಸದಸ್ಯರುಗಳಿಗೆ ತರಬೇತಿ ನೀಡಲಾಗುತ್ತದೆ. ಸಮೀಕ್ಷೆಗೆ ಸಂಬಂಧಿಸಿದಂತೆ ಹೊಸ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.
ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಂಜಪ್ಪ ಹಲವಾಗಲ ಮಾತನಾಡಿ, ಗ್ಯಾರಂಟಿ ಅನುಷ್ಕಾನ ಸಮಿತಿಯನ್ನು ಇನ್ನಷ್ಟು ಸುಧಾರಣೆ ಸಲುವಾಗಿ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪರಿಣಾಮವಾಗಿ ಜನರಿಗೆ ಮುಟ್ಟಿಸಲು ಸಮಿತಿ ಶ್ರಮಿಸಲಿದೆ. ಯೋಜನೆಯ ಫಲ ಅರ್ಹ ಫಲಾನುಭವಿಗಳಿಗೆ ಸರಿಯಾಗಿ ಮುಟ್ಟಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.ಚಂದ್ರಪ್ಪ ಬೇಡರ ಮಾತನಾಡಿ, ಐಟಿ, ಜಿಎಸ್‌ಟಿ ಹಿನ್ನೆಲೆ ಅರ್ಹ ಫಲಾನುಭವಿಗಳನ್ನು ಕೈ ಬಿಡಲಾಗಿದೆ ಎಂದು ಆರೋಪಿಸಿದರು.
ನಗರದ ಬಸ್ ನಿಲ್ದಾಣದಲ್ಲಿನ ಮಹಿಳಾ ಶೌಚಾಲಯದಲ್ಲಿ ಸ್ವಚ್ಛತೆ ಇಲ್ಲದಿರುವ ಕುರಿತು ಹಿಂದಿನ ಸಭೆಯಲ್ಲಿಯೇ ಪ್ರಸ್ತಾಪ ಮಾಡಿದ್ದರೂ ಇಂದಿಗೂ ವ್ಯವಸ್ಥೆಯಲ್ಲಿ ಸುಧಾರಣೆಯಾಗಿಲ್ಲ ಹಾಗೂ ಮೂತ್ರ ವಿಸರ್ಜನೆಗೂ ಹಣ ವಸೂಲಿ ಮಾಡುತ್ತಾರೆ ಎಂದು ಮಹಿಳಾ ಸದಸ್ಯರು ಆರೋಪಿಸಿದರು.
ಅನ್ನ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಬಹುತೇಕ ಸದಸ್ಯರು, ಪಡಿತರ ಅಂಗಡಿಗಳವರು ಜನರ ಜೊತೆ ಸರಿಯಾಗಿ ವರ್ತನೆ ಮಾಡುವುದಿಲ್ಲ ಎಂದು ಆರೋಪ ಮಾಡಿದರು.
ಸೋಲಾರ್ ಫಲಾನುಭವಿಗಳಿಗೆ ಗೃಹ ಜ್ಯೋತಿ ಸೌಲಭ್ಯ ಸಿಗುವುದಿಲ್ಲ ಎಂದು ಹೆಸ್ಕಾಂ ಅಧಿಕಾರಿ ನೀರಲಗಿ ತಿಳಿಸಿದರು.