ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಬೊಕ್ಕಸ ಭರ್ತಿ ಮಾಡುವ ಅತಿ ಹೆಚ್ಚು ತೆರಿಗೆದಾರರನ್ನು ಹೊಂದಿರುವ ಬೆಂಗಳೂರು ನಗರದಲ್ಲಿನ ತೆರಿಗೆದಾರರಿಗೆ ಉತ್ತಮ ಸೇವೆ ಕಲ್ಪಿಸಲು ನೂತನವಾಗಿ ‘ಅತ್ಯಧಿಕ ತೆರಿಗೆ ಪಾವತಿದಾರರ ವಿಭಾಗ’ ರಚಿಸಲಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಆಯವ್ಯಯದಲ್ಲಿ ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿರುವ ವಾಣಿಜ್ಯೋದ್ಯಮಿಗಳಿಗೆ ಉತ್ತಮ ಸಂಪರ್ಕ ನೀಡಲು ಹೊಸ ವಿಭಾಗ ಹಾಗೂ ಬೃಹತ್ ತೆರಿಗೆದಾರರ ಒಂದು ಪ್ರತ್ಯೇಕ ವಿಭಾಗವನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸುವುದಾಗಿ ಘೋಷಿಸಿದ್ದರು. ಅದರಂತೆ ಈಗ ಅತ್ಯಧಿಕ ತೆರಿಗೆ ಪಾವತಿದಾರರ ವಿಭಾಗವನ್ನು ರಚಿಸಿ ವಿವಿಧ ವೃಂದದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹುದ್ದೆಗಳಿಗೆ ಮರು ನಾಮಕರಣ ಮಾಡಿ ಸರ್ಕಾರ ಆದೇಶಿಸಿದೆ.
ಬೆಂಗಳೂರು ನಗರ ಬೃಹತ್ ಪ್ರಮಾಣದ ತೆರಿಗೆ ಪಾವತಿದಾರರನ್ನು ಹೊಂದಿದ್ದು, ತೆರಿಗೆ ಪಾವತಿಯಲ್ಲೂ ಅತ್ಯಧಿಕ ಪಾಲನ್ನು ನೀಡುತ್ತಿದೆ. ರಾಜ್ಯದ 9.50 ಲಕ್ಷ ನೋಂದಾಯಿತ ತೆರಿಗೆದಾರರ ಪೈಕಿ ಬೆಂಗಳೂರು ನಗರದಲ್ಲಿ 5 ಲಕ್ಷ ಪಾವತಿದಾರರಿದ್ದಾರೆ. ಕಲಬುರಗಿ ವಿಭಾಗದಲ್ಲಿ ಸಿಮೆಂಟ್, ಮಂಗಳೂರು ವಿಭಾಗದಲ್ಲಿ ಕೆಲವು ಪೆಟ್ರೋಲ್ ಕೆಮಿಕಲ್ ಕೈಗಾರಿಕೆ ಹಾಗೂ ಬಳ್ಳಾರಿ ವಿಭಾಗದಲ್ಲಿ ಉಕ್ಕು ಮತ್ತು ಅದಿರು ಉದ್ಯಮಗಳನ್ನು ಹೊರತುಪಡಿಸಿದರೆ ಉಳಿದೆಲ್ಲ ಪ್ರಮುಖ ತೆರಿಗೆದಾರರು ಬೆಂಗಳೂರು ನಗರದ ವಿವಿಧ ವಿಭಾಗಗಳಲ್ಲಿ ಅಸ್ತಿತ್ವದಲ್ಲಿರುವ ಜಿಎಸ್‌ಟಿ ಕಚೇರಿಗಳಲ್ಲಿ ನೋಂದಾಯಿಸಿ ಕೊಂಡಿದ್ದಾರೆ. ಹೀಗಾಗಿ ಬೆಂಗಳೂರು ಕೇಂದ್ರ ಸ್ಥಾನದಲ್ಲಿ ಅತ್ಯಧಿಕ ತೆರಿಗೆದಾರರ ಪಾವತಿದಾರರ ವಿಭಾಗವನ್ನು ಸ್ಥಾಪಿಸಲಾಗಿದೆ.ಆಡಳಿತಾತ್ಮಕ ಅನುಮೋದನೆ
ಈಗಾಗಲೇ ಬೃಹತ್ ತೆರಿಗೆದಾರರ ಘಟಕ ಪ್ರಾರಂಭಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಅತ್ಯಧಿಕ ತೆರಿಗೆ ಪಾವತಿದಾರರ ವಿಭಾಗಕ್ಕೆ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು ಮುಖ್ಯಸ್ಥರಾಗಿರುತ್ತಾರೆ. ಇವರು ಲೆಕ್ಕ ಪರಿಶೋಧನೆ ಪ್ರಕರಣಗಳ ಮತ್ತು ನ್ಯಾಯ ನಿರ್ಣಯ ಆದೇಶಗಳು, ರಾಜ್ಯ ಮತ್ತು ಕೇಂದ್ರ ಪ್ರಕರಣಗಳಲ್ಲಿ ಮೊದಲ ಮನವಿ ಪ್ರಾಧಿಕಾರದ ಆದೇಶಗಳ ಪರಿಶೀಲನೆ ಮತ್ತು ರಾಜ್ಯ ಮತ್ತು ಕೇಂದ್ರ ಪ್ರಕರಣಗಳ ಮರುಪಾವತಿ ಆದೇಶಗಳ ಪರಿಶೀಲನೆ. ಮೇಲ್ಮನವಿ ನಿವೇದನಾ ಪತ್ರ ಸಿದ್ಧಪಡಿಸುವಿಕೆ ಪರಿಷ್ಕರಣೆಯ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.ಮರುನಾಮಕರಣಇನ್ನು ಮುಂದೆ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು (ಕಿರಿಯ ಕಾಯ್ದೆಗಳು) ಬೆಂಗಳೂರು ಈ ಹುದ್ದೆಯನ್ನು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತರು, ಅತ್ಯಧಿಕ ತೆರಿಗೆ ಪಾವತಿದಾರರ ವಿಭಾಗ ಬೆಂಗಳೂರು ಎಂದು ಮರು ನಾಮಕರಣಗೊಳಿಸಿ ಸರ್ಕಾರ ಆದೇಶಿಸಿದೆ. ಇದರ ಜೊತೆಗೆ ಹೊಸ ವಿಭಾಗಕ್ಕೆ ಬೇಕಾದ ಅಧಿಕಾರಿ/ನೌಕರರನ್ನು ನಿಯೋಜಿಸಲು ವಾಣಿಜ್ಯ ತೆರಿಗೆಗಳ ಉಪ ಆಯುಕ್ತರ ವೃಂದ, ಸಹಾಯಕ ಆಯುಕ್ತರ ವೃಂದ, ವಾಣಿಜ್ಯ ತೆರಿಗೆ ಅಧಿಕಾರಿ ವೃಂದದ ಆಯ್ದ ಅಧಿಕಾರಿ ಹಾಗೂ ಇತರ ಅಧಿಕಾರಿಗಳನ್ನು ನೂತನ ವಿಭಾಗಕ್ಕೆ ಸ್ಥಳಾಂತರಿಸಿ ಆದೇಶಿಸಲಾಗಿದೆ.