‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ವಿಧೇಯಕವನ್ನು ಪರಾಮರ್ಶಿಸಲು ಸದನ ಸಮಿತಿ ರಚನೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ವಿಧಾನಸಭೆ : ಬೆಂಗಳೂರು ಜನಪ್ರತಿನಿಧಿಗಳೊಂದಿಗೆ ಚರ್ಚಿಸದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ವಿಧೇಯಕ್ಕೆ ಒಪ್ಪಿಗೆ ಪಡೆಯುವುದಕ್ಕೆ ಪ್ರತಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ವಿಧೇಯಕವನ್ನು ಪರಾಮರ್ಶಿಸಲು ಸದನ ಸಮಿತಿ ರಚನೆಗೆ ನಮ್ಮ ಒಪ್ಪಿಗೆ ಇದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಮುಡಾ ಗಲಾಟೆಯ ನಡುವೆಯೇ ಗ್ರೇಟರ್ ಬೆಂಗಳೂರು ವಿಧೇಯಕವನ್ನು ಡಿ.ಕೆ. ಶಿವಕುಮಾರ್ ಅವರು ಪರ್ಯಾಲೋಚನೆ ಮಂಡಿಸಿದರು.
ಈ ವೇಳೆ ಮಾತನಾಡಿ, ಬೆಂಗಳೂರು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದು, ನಗರದ ಜನಸಂಖ್ಯೆ 1.40 ಕೋಟಿಗೆ ಏರಿದೆ. ಬೆಂಗಳೂರನ್ನು ಅತ್ಯುತ್ತಮ ನಗರವಾಗಿ ಮಾಡಬೇಕು. ಅಂತಾರಾಷ್ಟೀಯ ಮಟ್ಟದಲ್ಲಿ ಬೆಂಗಳೂರು ಹೆಸರು ಮಾಡುತ್ತಿದ್ದು, ರಾಜ್ಯ ರಾಜಧಾನಿಗೆ ಹೊಸ ರೂಪ ನೀಡಲು ಗ್ರೇಟರ್ ಬೆಂಗಳೂರು ಬಿಲ್‌ಗೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸುತ್ತಿದ್ದೇನೆ. ಅಂಗೀಕಾರ ನೀಡಬೇಕು ಎಂದು ಕೋರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಈ ಬಿಲ್ ಬಗ್ಗೆ ಸದನ ಸಮಿತಿ ಮಾಡಬೇಕು. ಯಾರೋ ಒಬ್ಬ ಅಧಿಕಾರಿ ನೀಡಿರುವ ವರದಿ ಆಧರದ ಮೇಲೆ ಬೆಂಗಳೂರು ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಸದನ ಸಮಿತಿ ರಚಿಸಿ ಎಲ್ಲರೂ ಚರ್ಚಿಸಿ ನಿರ್ಧಾರ ಮಾಡಬೇಕು ಎಂದು ಹೇಳಿದರು.
ಬಿಜೆಪಿ ಸದಸ್ಯ ಎಸ್.ಟಿ.ಸೋಮಶೇಖರ್ ಮಾತನಾಡಿ, ಉಪಮುಖ್ಯಮಂತ್ರಿಗಳು ಐತಿಹಾಸಿಕ ತೀರ್ಮಾನಕ್ಕೆ ಮುಂದಾಗಿದ್ದಾರೆ. ಬೆಂಗಳೂರಿನ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದ ಸದನ ಸಮಿತಿ ರಚಿಸಬೇಕು. ವಿಶೇಷ ಚರ್ಚೆ ಮಾಡಬೇಕು. ಅಲ್ಲಿಯವರೆಗೆ ಬಿಲ್ ಅನ್ನು ಬಾಕಿ ಇರಿಸಬೇಕು ಎಂದು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, ‘ಅಶೋಕ್ ಹಾಗೂ ಸೋಮಶೇಖರ್ ಅವರು ಚರ್ಚೆ ನಡೆಸಬೇಕು ಎಂದು ಹೇಳಿದ್ದಾರೆ. ಬೆಂಗಳೂರಿನ ಶಾಸಕರಾದ ಸತೀಶ್ ರೆಡ್ಡಿ, ರಾಮಮೂರ್ತಿ ಅವರು ನನ್ನನ್ನು ಭೇಟಿ ಮಾಡಿ ಒಂದಷ್ಟು ವಿಚಾರಗಳನ್ನು ಚರ್ಚೆ ಮಾಡಿದ್ದಾರೆ. ನಮಗೂ ಸಹ ತರಾತುರಿಯಲ್ಲಿ ಈ ಬಿಲ್ ಅನ್ನು ತರುವ ಆಲೋಚನೆ ಇಲ್ಲ. ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್, ರಿಜ್ವಾನ್ ಅರ್ಷದ್, ಕೃಷ್ಣಬೈರೇಗೌಡ ಅವರ ಬಳಿಯೂ ಈ ವಿಚಾರವಾಗಿ ಚರ್ಚೆ ನಡೆಸಿದ್ದೇನೆ. ಈ ವಿಚಾರವಾಗಿ ಸದನ ಸಮಿತಿ ರಚನೆ ಮಾಡಲು ನಮ್ಮ ಒಪ್ಪಿಗೆಯಿದೆ’ ಎಂದು ಹೇಳಿದರು.
ಆದರೆ, ಸದನ ಸಮಿತಿ ರಚನೆಗೆ ಸ್ಪೀಕರ್ ಯಾವುದೇ ರೂಲಿಂಗ್ ನೀಡದೆ ಮುಂದಿನ ವಿಷಯಕ್ಕೆ ಹೋದರು.