ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯನಗರಸಭೆ ಹಾಗೂ ಗ್ರಾಮ ಪಂಚಾಯತ್ ಗೆಜೆಟ್ ನೋಟಿಫಿಕೇಶನ್ ಪ್ರಕಾರ ಗಡಿ ಗುರುತಿಸಲು ಜಂಟಿ ಸರ್ವೇ ಮಾಡಿ ನಗರಸಭೆ ಹಾಗೂ ಗ್ರಾಪಂ ವ್ಯಾಪ್ತಿಗೆ ಸೇರಿರುವ ಸ್ವತ್ತುಗಳನ್ನು ಹಸ್ತಾಂತರ ಮಾಡುವ ಸಂಬಂಧ ಪರಿಶೀಲನಾ ತಂಡವನ್ನು ರಚಿಸಲಾಗಿದೆ.
ಈ ಸಂಬಂಧ ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಅವರು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದು, ಈ ಪರಿಶೀಲನಾ ತಂಡಕ್ಕೆ ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರನ್ನು ಅಧ್ಯಕ್ಷರನ್ನಾಗಿ ನೇಮಿಸಿದೆ. ನಗರಸಭೆ ಪೌರಾಯುಕ್ತರು ಸದಸ್ಯ ಕಾರ್ಯದರ್ಶಿಗಳಾಗಿದ್ದಾರೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ತಹಸೀಲ್ದಾರ್, ವಿವಿಧ ಗ್ರಾಮ ಪಂಚಾಯ್ತಿಗಳ ಪಿಡಿಒಗಳು ಸದಸ್ಯರಾಗಿರುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.ಈ ಸಂಬಂಧ ಜೂನ್ 24ರಂದು ನಡೆದ ಸಭೆಯಲ್ಲಿ ನಗರಸಭೆ ಹಾಗೂ ಗ್ರಾಮ ಪಂಚಾಯ್ತಿಗಳ ಗಡಿ ಗುರುತಿಸಲು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ, ಪೌರಾಯುಕ್ತರು, ತಹಸೀಲ್ದಾರ್ ಹಾಗೂ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ಜಂಟಿ ಸರ್ವೇ ಮಾಡಿ ಗೆಜೆಟ್ ನೋಟಿಫಿಕೇಶನ್ ಪ್ರಕಾರ ಗ್ರಾಪಂ ಹಾಗೂ ನಗರಸಭೆಯ ಗಡಿಗಳನ್ನು ಗುರುತಿಸಿ ಪಂಚಾಯ್ತಿಗಳಿಗೆ ಸೇರಿದ ನಗರಸಭೆಯಲ್ಲಿ ಖಾತೆ ದಾಖಲಿಸಿರುವ ಸ್ವತ್ತುಗಳನ್ನು ಗ್ರಾಪಂಗಳಿಗೆ ಹಾಗೂ ಗ್ರಾಮ ಪಂಚಾಯ್ತಿಯಲ್ಲಿ ಖಾತೆ ದಾಖಲಿಸಿರುವ ನಗರಸಭಾ ಸ್ವತ್ತುಗಳನ್ನು ನಗರಸಭೆಗೆ ಹಸ್ತಾಂತರ ಮಾಡಲು ನಿರ್ಣಯ ಕೈಗೊಂಡಿರುತ್ತದೆ. ಜೊತೆಗೆ ನಗರಸಭೆಯ ಸ್ವತ್ತುಗಳನ್ನು ಹಸ್ತಾಂತರ ಮಾಡಲು ಜುಲೈ 30ರೊಳಗೆ ಪರಿಶೀಲಿಸಿ ವರದಿ ನೀಡುವಂತೆ ಈ ಸಮಿತಿ ರಚಿಸಲಾಗಿದೆ.
ಜೂನ್ 24ರಂದು ನಡೆದ ಸಭೆಯಲ್ಲಿ ನಗರಸಭೆ ಹಾಗೂ ಗ್ರಾಪಂಗಳ ವ್ಯಾಪ್ತಿಯ ಗಡಿಗಳಿಗೆ ಸಂಬಂಧಿಸಿದ ಹಿಂದಿನ ಹಾಗೂ ಪರಿಷ್ಕೃತ ಸರ್ಕಾರದ ಅಧಿ ಸೂಚನೆಗಳನ್ನು ಮುಂದಿನ ಸಭೆಗೆ ಹಾಜರುಪಡಿಸುವುದು. ಸರ್ಕಾರದ ಅಧಿಸೂಚನೆ ಪ್ರಕಾರ ಮಂಡ್ಯ ನಗರಸಭಾ ವ್ಯಾಪ್ತಿಗೆ ಒಳಪಡುವ ಮತ್ತು ಗ್ರಾಪಂಗೆ ಒಳಪಡುವ ಸರ್ವೇ ನಂಬರ್ ಗಳ ಸ್ವತ್ತುಗಳನ್ನು ಭೂ ಪರಿವರ್ತನೆಯಾಗದೆ ಹಾಗೂ ಸಕ್ಸಮ ಪ್ರಾಧಿಕಾರದ ಅನುಮೋದಿತ ನಕ್ಷೆ ಇಲ್ಲದೆ ಖಾತೆಗಳನ್ನು ದಾಖಲಿಸುವುದು ಹಾಗೂ ವರ್ಗಾಯಿಸಿರುವುದು ನಿಯಮ ಬಾಹಿರವಾಗಿರುತ್ತದೆ ಎಂದು ಅಪಾರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ತಿಳಿಸಿದ್ದರು.ಬೇವಿನಹಳ್ಳಿ ಪಿಡಿಒ ಅವರು ನಗರಸಭೆಯ 1962ರ ಗೆಜೆಟ್ ಪ್ರಕಾರ ಪಿವಿಎಸ್ ಬಡಾವಣೆ, ಚಾಮುಂಡೇಶ್ವರಿ ನಗರ, ಕುವೆಂಪು ನಗರದಲ್ಲಿ ಗ್ರಾಪಂಗೆ ಸೇರಿರುವ ಆಸ್ತಿಗಳನ್ನು ನಗರಸಭೆಯಲ್ಲಿ ಖಾತೆ ದಾಖಲಿಸಿರುವ ಬಗ್ಗೆ ಸಭೆಗೆ ತಿಳಿಸಿದ್ದಾರೆ.
ಅದೇ ರೀತಿ ನಗರಸಭೆ ಕಂದಾಯ ಅಧಿಕಾರಿ ರಾಜಶೇಖರ್ ಮಾತನಾಡಿ, ನಗರಸಭೆಗೆ ಹೊಂದಿಕೊಂಡಿರುವ ಗ್ರಾಪಂಗಳು ಪ್ರಸ್ತುತ ಸಹ ನಗರಸಭಾ ವ್ಯಾಪ್ತಿಗೆ ಸೇರಿದ ಸ್ವತ್ತುಗಳಿಗೆ ಗ್ರಾಪಂಗಳಲ್ಲಿ ಖಾತೆ ದಾಖಲು ಮಾಡಿಕೊಡಲಾಗುತ್ತಿದೆ ಎಂಬ ವಿಷಯವನ್ನು ಸಭೆ ಗಮನಕ್ಕೆ ತಂದಿದ್ದಾರೆ. ಸಂತೆಕಸಲಗೆರೆ ಪಿಡಿಒ ಅವರು ಪಂಚಾಯ್ತಿಗೆ ಸೇರಿದ ಸ್ವತ್ತುಗಳಿಗೆ ನಗರಸಭೆಯಿಂದ ಹಕ್ಕುಪತ್ರ ವಿತರಣೆ ಮಾಡಿರುವ ಬಗ್ಗೆಯೂ ಸಭೆಗೆ ವಿವರಿಸಿದ್ದಾರೆ.ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು, ನಗರಸಭೆಯ ಅಧಿಸೂಚನೆಯಲ್ಲಿ ಸೇರದ ಪ್ರದೇಶಗಳನ್ನು ಕೌನ್ಸಿಲ್ ಸಭೆಯ ಅನುಮೋದನೆ ಪಡೆದು ಜಿಲ್ಲಾಧಿಕಾರಿ ಮುಖಾಂತರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅಧಿಸೂಚನೆ ಹೊರಡಿಸಿ ಅನುಮೋದನೆ ಪಡೆಯಬೇಕು. ಇಲ್ಲವಾದಲ್ಲಿ ಕೌನ್ಸಿಲ್ ನಡವಳಿ ಮಾಡಿ ಸಂಬಂಧಿತ ಗ್ರಾಪಂಗಳಿಗೆ ಹಸ್ತಾಂತರ ಮಾಡಲು ಕ್ರಮ ವಹಿಸುವಂತೆ ತಿಳಿಸಿದ್ದಾರೆ.
ಅಧಿಸೂಚನೆಯಲ್ಲಿ ಸೇರದ ಹಾಗೂ ನಗರಸಭೆಗೆ ಸೇರಿದ ಸ್ವತ್ತುಗಳನ್ನು ಗ್ರಾಪಂನಲ್ಲಿ ಖಾತಾ ದಾಖಲಿಸಿದ್ದಲ್ಲಿ ಆಸ್ತಿಗಳನ್ನು ಸಾಮಾನ್ಯ ಸಭೆಯ ಅನುಮೋದನೆ ಪಡೆದು ನಗರಸಭೆಗೆ ಹಸ್ತಾಂತರ ಮಾಡುವಂತೆ ಸಭೆಯಲ್ಲಿ ನಿರ್ದೇಶನ ನೀಡಿದ್ದಾರೆ.