ಸವಣೂರು: ಒಬ್ಬ ಜಂಗಮ ನೂರು ಜನರಿಗೆ ಸಮ. ನನ್ನ ಕ್ಷೇತ್ರದಲ್ಲಿ ಇಂತಹ ಜಂಗಮರ ಋಣ ನನ್ನ ಮೇಲಿದೆ. ಅದನ್ನು ತೀರಿಸಲು ಕ್ಷೇತ್ರದ ಎಲ್ಲ ಮಠಮಾನ್ಯಗಳ ಅಭಿವೃದ್ಧಿಗೆ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವ ಮೂಲಕ ಋಣವನ್ನು ತೀರಿಸುತ್ತೇನೆ ಎಂದು ಶಾಸಕ ಯಾಸೀರ ಅಹ್ಮದಖಾನ್ ಪಠಾಣ ಭರವಸೆ ನೀಡಿದರು.
ಮಠಗಳು ಹೆಚ್ಚಾದಂತೆ ಸಂಸ್ಕಾರವನ್ನು ಬೆಳೆಸಿದಂತೆ. ಬಸವಾದಿ ಶರಣರ ನುಡಿಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂದಾಗ ಜೀವನ ಸಾರ್ಥಕತೆಯನ್ನು ಕಾಣಲು ಸಾಧ್ಯ. ಜಂಗಮ ಸಮಾಜ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಲು ಸಾಧ್ಯ. ಅದಕ್ಕೆ ಉತ್ತಮ ಉದಾಹರಣೆ ನನ್ನ ಚುನಾವಣೆ ಸಾಕ್ಷಿ. ಜಂಗಮ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಅಭಿವೃದ್ಧಿಯನ್ನು ಹೊಂದಲು ಅವಕಾಶ ಸಿಕ್ಕ ಸಂದರ್ಭದಲ್ಲಿ ಪ್ರಾಮಾಣಿಕವಾಗಿ ಅವಕಾಶವನ್ನು ನೀಡಿ ಬೆನ್ನೆಲುಬಾಗಿ ನಿಲ್ಲುವಂತ ಕೆಲಸವನ್ನು ಮಾಡುತ್ತೇನೆ. ಜಂಗಮ ಸಮಾಜದ ಸಭಾ ಭವನಕ್ಕಾಗಿ ₹೧ ಕೋಟಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ಜಂಗಮ ಶಿವಸ್ವರೂಪಿ ಸಮಾಜದ ಕೆಟ್ಟದ್ದನ್ನು ಹಾಕಿಸಿಕೊಳ್ಳಲು ಶಿವನಿತ್ತ ಜೋಳಿಗೆ, ಸಮಾಜದಲ್ಲಿರುವ ಕೆಟ್ಟದ್ದನ್ನು ಹೊಡೆದೋಡಿಸಲು ಶಿವನಿತ್ತ ಬೆತ್ತ. ಹೀಗಾಗಿ ಜಂಗಮರನ್ನು ಎದುರು ಹಾಕಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದರು.ನಿವೃತ್ತ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಸ್.ಬಿ. ವಸ್ತ್ರದಮಠ ಮಾತನಾಡಿ, ಧೂಮಪಾನ, ಮದ್ಯಪಾನ ದುಶ್ಚಟಗಳ ದಾಸರಾಗುತ್ತಿರುವುದರಿಂದ ಸಮಾಜ ಅಡ್ಡ ದಾರಿಯಿಂದ ನಡೆಯುತ್ತಿದೆ. ದುಶ್ಚಟಗಳ ದಾರಿಯನ್ನು ಹಿಡಿದರೆ ನಮ್ಮ ವ್ಯಕ್ತಿತ್ವಕ್ಕೆ ಅಲ್ಲದೆ ನಮಗೆ ಸಂಸ್ಕಾರ ನೀಡಿದ ವ್ಯಕ್ತಿಗಳ ಹೆಸರಿಗೆ ಧಕ್ಕೆ ಬರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಉತ್ತಮ ವ್ಯಕ್ತಿಗಳಾಗಿ ಸಮಾಜವನ್ನು ಆದರ್ಶವನ್ನಾಗಿ ಮಾಡಬೇಕು ಎಂದರು.
ಬೀದರ ಜಿಲ್ಲೆಯ ಸರಿಗಮಪ ಸೀಸನ್ ೨೧ ವಿಜೇತೆ ಶಿವಾನಿ ಶಿವದಾಸಸ್ವಾಮಿ ಹಾಗೂ ಕುಟುಂಬಸ್ಥರಿಂದ ಸಂಗೀತ ಸೇವೆ ಜರುಗಿತು.