- ಶೃಂಗೇರಿ ಕ್ಷೇತ್ರದ ನೂತನ ರೈತ ಒಕ್ಕೂಟ ಅಸ್ತಿತ್ವಕ್ಕೆ । 3 ತಾಲೂಕಿನ 254 ಗ್ರಾಮದಲ್ಲೂ ಒಬ್ಬೊಬ್ಬ ಪ್ರತಿನಿಧಿ ಆಯ್ಕೆ। ಕಾನೂನು ಬದ್ದ ಹೋರಾಟಕ್ಕೆ ವಕೀಲರ ನೇಮಕ
ರೈತರ ಸಮಸ್ಯೆ ಪರಿಹಾರಕ್ಕಾಗಿ ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ತಾಲೂಕು ಸೇರಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ರಚನೆ ಮಾಡಿದ್ದೇವೆ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಅಧ್ಯಕ್ಷ ವಕೀಲ ಗದ್ದೇಮನೆ ವಿಶ್ವನಾಥ್ ತಿಳಿಸಿದರು.
ಭಾನುವಾರ ಗದ್ದೇಮನೆ ತಮ್ಮ ನಿವಾಸದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದು ಶೃಂಗೇರಿ ಕ್ಷೇತ್ರದ 3 ತಾಲೂಕುಗಳ ರೈತ ಪ್ರತಿನಿಧಿಗಳ ಪೂರ್ವ ಭಾವಿ ಸಭೆ ನಡೆಸಲಾಗಿದೆ. ರೈತರ ಸಮಸ್ಯೆಗಳ ಪರಿಹಾರಕ್ಕೆ ಕಾನೂನು ಬದ್ಧ ಹೋರಾಟ ಮಾಡಬೇಕು ಎಂಬ ಅಭಿಪ್ರಾಯ ಬಂದಿದೆ. ಕ್ಷೇತ್ರ ಮಟ್ಟದ ರೈತರ ಒಕ್ಕೂಟ ಅಗತ್ಯ ಎಂಬ ಅಭಿಪ್ರಾಯದಂತೆ ಇಂದು ನೂತನವಾಗಿ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟ ಪ್ರಾರಂಭಿಸಿದ್ದೇವೆ. ನಾಳೆಯೇ ಸಂಘ ರಿಜಿಸ್ಟರ್ ಮಾಡುತ್ತೇವೆ. ಶೃಂಗೇರಿ ಕ್ಷೇತ್ರದಲ್ಲಿ 254 ಗ್ರಾಮ ಬರಲಿದ್ದು ಪ್ರತಿ ಗ್ರಾಮದಲ್ಲೂ ಕ್ಷೇತ್ರ ರೈತ ಒಕ್ಕೂಟಕ್ಕೆ ಒಬ್ಬ ಸದಸ್ಯರಿರುತ್ತಾರೆ. 8 ಹೋಬಳಿ ಇದ್ದು ಪ್ರತಿ ಹೋಬಳಿಗೂ ಒಬ್ಬ ಉಪಾಧ್ಯಕ್ಷ, ಒಬ್ಬ ಸಹ ಕಾರ್ಯದರ್ಶಿ ಇರುತ್ತಾರೆ. ಸಮಸ್ಯೆ ನೈಜ ಸ್ವರೂಪದ ಬಗ್ಗೆ ಆಯಾ ಗ್ರಾಮದ ಪ್ರತಿನಿಧಿಗೆ ಹಾಗೂ ಹೋಬಳಿ ಉಪಾಧ್ಯಕ್ಷರಿಗೆ ಗೊತ್ತಿರುತ್ತದೆ. ಬಹುತೇಕ ರೈತರ ಸಮಸ್ಯೆಯಲ್ಲಿ ಇದುವರೆಗೆ ಕಾನೂನು ಬದ್ಧ ಹೋರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಮುಂದೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದಿಂದ ಒಬ್ಬ ವಕೀಲರನ್ನು ನೇಮಕ ಮಾಡುತ್ತೇವೆ. ಆ ವಕೀಲರಿಗೆ ಒಕ್ಕೂಟವೇ ಫೀಸು ನೀಡಲಿದೆ. ವಕೀಲರ ಓಡಾಟ, ಇತರೆ ಖರ್ಚನ್ನು ಒಕ್ಕೂಟವೇ ನೀಡುತ್ತದೆ ಎಂದರು.ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಅರಣ್ಯ ಸಮಸ್ಯೆ, ಕಾಡು ಪ್ರಾಣಿ ಉಪಟಳ, ಮೆಸ್ಕಾಂ ಸಮಸ್ಯೆ, ಅಡಕೆ ರೋಗ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ರೈತ ಒಕ್ಕೂಟದ ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡುತ್ತೇವೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆಯಲ್ಲಿ ಕಾಡಾನೆ ತುಳಿತಕ್ಕೆ ಇಬ್ಬರು ಬಲಿಯಾಗಿದ್ದಾರೆ. ನಿನ್ನೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ ಎಂದರು.
-- ಬಾಕ್ಸ್--
ಈ ಹಿಂದೆಯೇ ರೈತರ ಹೋರಾಟಕ್ಕಾಗಿ ಶೃಂಗೇರಿ ಕ್ಷೇತ್ರ ಮಟ್ಟದ ಮಲೆನಾಡು ರೈತ ನಾಗರಿಕ ಹಿತ ರಕ್ಷಣಾ ಸಮಿತಿ ರಚಿಸಲಾಗಿತ್ತು ಎಂದು ಮಲೆನಾಡು ರೈತ ನಾಗರಿಕ ಹಿತ ರಕ್ಷಣಾ ಸಮಿತಿ ಹಿರಿಯ ಸದಸ್ಯ ತುಪ್ಪೂರು ಮಂಜುನಾಥ್ ತಿಳಿಸಿದರು.
-- ಬಾಕ್ಸ್--
ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ರಾಜಕೀಯದಿಂದ ಹೊರತಾದ ಸಂಘಟನೆ ಎಂದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ನೂತನ ಅಧ್ಯಕ್ಷ ಗದ್ದೇಮನೆ ವಿಶ್ವನಾಥ್ ಸೃಷ್ಟಪಡಿಸಿದರು.