- ಕಾಂಗ್ರೆಸ್ ಪ್ರತಿಭಟನೆಯಲ್ಲಿ ಸುರೇಶ್ ಹೊನ್ನಾವರ ಆರೋಪ । ದೆಹಲಿಯಲ್ಲಿ ದೌರ್ಜನ್ಯಕ್ಕೆ ಖಂಡನೆ
- - -ಕನ್ನಡಪ್ರಭ ವಾರ್ತೆ ಶಿಕಾರಿಪುರ
ದೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಎಲ್ಲ ಹೋರಾಟಗಳಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಪ್ಪು ಒಪ್ಪಿಕೊಳ್ಳದೇ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೇ ಬಿಜೆಪಿ ರಾ.ಸ್ವಂ.ಸೇ. ಸಂಘದ ಕಾರ್ಯಕರ್ತರ ಮೂಲಕ ಪರೋಕ್ಷವಾಗಿ ರಾಹುಲ್ ಗಾಂಧಿ, ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿ ಹತ್ತಿಕ್ಕುವ ಸಂಚು ರೂಪಿಸುತ್ತಿದೆ ಎಂದು ಎನ್.ಎಸ್.ಯು.ಐ. ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸುರೇಶ್ ಹೊನ್ನಾವರ ಆರೋಪಿಸಿದರು.ಗುರುವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಯುವ ಕಾಂಗ್ರೆಸ್ ವತಿಯಿಂದ ದೆಹಲಿಯಲ್ಲಿ ಶಾಂತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ನಡೆದ ಪೊಲೀಸ್ ದೌರ್ಜನ್ಯ ಹಾಗೂ ಸೋನಂ ವಾಂಗ್ಚುಕ್ ವಿರುದ್ಧ ಕೈಗೊಂಡ ಕ್ರಮ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಳೆದ 20 ದಿನಗಳಿಂದ ನ್ಯಾಯಯುತ ಬೇಡಿಕೆಗಳಿಗಾಗಿ ದೆಹಲಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿದ್ದರು. ಅವರ ವಿರುದ್ಧ ಕ್ರೂರವಾಗಿ ಲಾಠಿ ಚಾರ್ಜ್‌ನಿಂದ ರಕ್ತ ಹರಿಯುವಂತೆ ನಡೆದ ಪೊಲೀಸ್ ದೌರ್ಜನ್ಯ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಂವಿಧಾನ ನೀಡಿದ ಶಾಂತಿಯುತ ಪ್ರತಿಭಟನೆಯ ಹಕ್ಕಿನ ಮೇಲಿನ ನೇರ ದಾಳಿಯಾಗಿದೆ. ದೇಶದ ಮಹಾನ್ ವಿಜ್ಞಾನಿ, ಸಮಾಜ ಸುಧಾರಕ ಸೋನಂ ವ್ಯಾಂಗ್ಚುಕ್ ಉಪವಾಸ ಸತ್ಯಾಗ್ರಹ ಗೌರವಿಸುವ ಬದಲು ಬಲವಂತವಾಗಿ ಎಳೆದುಕೊಂಡು ಹೋದ ಕ್ರಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ಆರೋಪಿಸಿದರು.
ಮೋದಿ ಪ್ರಧಾನಿಯಾದ 2014 ರಿಂದ ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟ ಚಳವಳಿ ಹತ್ತಿಕ್ಕಲು ನಕಲಿ ವೇಷಧಾರಿ ಪೊಲೀಸರ ಬಳಕೆಯಾಗುತ್ತಿದೆ. ಸಿಐಎ, ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯಲ್ಲಿ ಕಾನೂನಿನ ಅರಿವಿಲ್ಲದ ನಕಲಿ ಪೊಲೀಸರು ಗೂಂಡಾಗಳ ರೀತಿಯಲ್ಲಿ ಪ್ರತಿಭಟನಾಕಾರರ ಮೇಲೆ ಹಲ್ಲೆ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿದರು.
ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಟಿ ಭರವಸೆ ನೀಡಿ ಅಧಿಕಾರ ಗಳಿಸಿದ ಮೋದಿ, ಸಾಮಾಜಿಕ ನ್ಯಾಯಕ್ಕಾಗಿ ನಡೆದ ಹೋರಾಟ ಒಪ್ಪಿಕೊಳ್ಳದೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೇ ಕೇವಲ ಕಾಂಗ್ರೆಸ್, ರಾಹುಲ್ ಗಾಂಧಿ ವಿರುದ್ಧ ಪ್ರತಿಭಟಿಸಿ ಹತ್ತಿಕ್ಕುತ್ತಿದ್ದಾರೆ. ಸಂಪುಟದಲ್ಲಿನ ವಿಫಲ ಸಚಿವರಿಂದ ವಿದ್ಯಾರ್ಥಿಗಳ ಬದುಕು ದುಸ್ತರವಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಆತ್ಮಹತ್ಯೆಗೆ ಶರಣಾದ 20 ವಿದ್ಯಾರ್ಥಿಗಳ ಸಾವಿಗೆ ಕೇಂದ್ರ ಸರ್ಕಾರ ಕೊಲೆ ಆರೋಪದ ಹೊಣೆ ಹೊರಬೇಕಾಗಿದೆ ಎಂದು ಆಪಾದಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ ಪಾರಿವಾಳದ ಮಾತನಾಡಿ, ಮೋದಿ ಆಡಳಿತದ 10 ವರ್ಷದಲ್ಲಿ 152 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ. ಸಂಪುಟ ಸಚಿವರ ಬಗ್ಗೆ ನಿಯಂತ್ರಣವಿಲ್ಲದ ಮೋದಿ ದೇಶದ ಪ್ರಧಾನಿ ಆಗಿರುವುದು ದೌರ್ಬಾಗ್ಯ ಎಂದು ತಿಳಿಸಿದರು.
ನಂತರದಲ್ಲಿ ಸೂಕ್ತ ಕ್ರಮಕ್ಕೆ ಆಗ್ರಹಿಸಿ ರಾಷ್ಟ್ರಪತಿ ಅವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು. ಆರಂಭದಲ್ಲಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕಿ ಮೆರವಣಿಗೆ ನಡೆಯಿತು. ಕೆಪಿಸಿಸಿ ಸದಸ್ಯ ಮಾಲತೇಶ್ ಗೋಣಿ, ಮುಖಂಡ ಉಳ್ಳಿ ದರ್ಶನ್, ಚರಣ್, ಬನ್ನೂರು ಮಂಜಪ್ಪ, ಜೀನಳ್ಳಿ ದೊಡ್ಡಪ್ಪ, ಕೃಷ್ಣೋಜಿರಾವ್, ಈಶಣ್ಣ ಕಲವತ್ತಿ, ರೋಷನ್, ಹನುಮಂತಪ್ಪ, ಶಿವು ಸಂದಿಮನೆ ಇತರರು ಹಾಜರಿದ್ದರು.- - -
-23ಕೆ.ಎಸ್.ಕೆ.ಪಿ1:ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ನಡೆದ ಶಾಂತಿಯುತ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ವಿರುದ್ದ ನಡೆದ ಪೊಲೀಸ್ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮುಖಂಡ ಸುರೇಶ್ ಹೊನ್ನಾವರ ಮಾತನಾಡಿದರು.