ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿ ಆಯ್ಕೆ ಸಮಿತಿ ರಚನೆ

KannadaprabhaNewsNetwork |  
Published : Sep 30, 2026, 02:45 AM IST
ಫೋಟೋ: ೨೮ಪಿಟಿಆರ್-ಸಭೆ ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಫೋಟೋ: ಬಾಲನವ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರು | Kannada Prabha

ಸಾರಾಂಶ

ಪುತ್ತೂರಿನ ಪ್ರತಿಷ್ಠಿತ ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿಯನ್ನು ಈ ಬಾರಿ ಪರಿಸರ ಕ್ಷೇತ್ರದ ಸಾಧಕರಿಗೆ ನೀಡಲು ತೀರ್ಮಾನಿಸಲಾಗಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವಗೀಸ್ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧದ ಎಸಿ ಕೋರ್ಟ್ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಪುತ್ತೂರು : ಪುತ್ತೂರಿನ ಪ್ರತಿಷ್ಠಿತ ಪುತ್ತೂರಿನ ಡಾ. ಶಿವರಾಮ ಕಾರಂತ ಬಾಲವನ ಪ್ರಶಸ್ತಿಯನ್ನು ಈ ಬಾರಿ ಪರಿಸರ ಕ್ಷೇತ್ರದ ಸಾಧಕರಿಗೆ ನೀಡಲು ತೀರ್ಮಾನಿಸಲಾಗಿದೆ. ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವಗೀಸ್ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತ ಸೌಧದ ಎಸಿ ಕೋರ್ಟ್ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಕಾರಂತ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಶಾಸಕ ಅಶೋಕ್ ರೈ ಅಧ್ಯಕ್ಷತೆ ಹಾಗೂ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಕಾರ್ಯದರ್ಶಿಯಾಗಿರುವ ಸಮಿತಿ ಮೂರು ಮಂದಿ ಗೌರವ ಸದಸ್ಯರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಹಿರಿಯ ಸಾಹಿತಿ ಪ್ರೊ.ವಿ.ಬಿ.ಅರ್ತಿಕಜೆ, ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ವಿಜಯ ಹಾರ್ವಿನ್ ಮತ್ತು ಕನ್ನಡ ಸಾಹಿತಿ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಅವರನ್ನು ಆಯ್ಕೆ ಮಾಡಲಾಯಿತು.

ಕಾರಂತರ ಪುತ್ರ ಪರಿಸರ ವಿಜ್ಞಾನಿ ಪದ್ಮಶ್ರೀ ಪುರಸ್ಕೃತ ಡಾ.ಉಲ್ಲಾಸ್ ಕಾರಂತ್, ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ಸಾಹಿತಿ ಸುಬ್ರಾಯ ಚೊಕ್ಕಾಡಿ ಹೆಸರುಗಳನ್ನು ಸೂಚಿಸಲಾಯಿತು. ಆಯ್ಕೆ ಸಮಿತಿ ಈ ಹೆಸರುಗಳಲ್ಲಿ ಪರಿಸರ ಕ್ಷೇತ್ರದ ಸಾಧಕರನ್ನು ಗುರುತಿಸಿ ಒಬ್ಬರನ್ನು ಆಯ್ಕೆ ಮಾಡಲಿದೆ.

ಅ.10ರಂದು ಪುತ್ತೂರು ಬಾಲವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಿವರಾಮ ಕಾರಂತರ ಕುರಿತು ಸಂಸ್ಮರಣಾ ಉಪನ್ಯಾಸ ನೀಡಲು ಸಂಪನ್ಮೂಲ ವ್ಯಕ್ತಿಗಳನ್ನು ಆರಿಸಲು ಚರ್ಚಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್ ಪುತ್ತೂರು ಮಾತನಾಡಿ, ಡಾ.ಕಾರಂತರ 125ನೇ ವರ್ಷಾಚರಣೆಯ ಸಂದರ್ಭದಲ್ಲಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಲು ಪುತ್ತೂರಿನ ವೃತ್ತ ಒಂದಕ್ಕೆ ಡಾ.ಕಾರಂತ ವೃತ್ತ ಎಂದು ನಾಮಕರಣ ಮಾಡಬೇಕು. ಬಾಲವನವನ್ನು ಸಾಹಿತ್ಯ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಅಭಿವೃದ್ಧಿ ಪಡಿಸಬೇಕು. ಬಾಲವನ ಅಭಿವೃದ್ಧಿ ಸಮಿತಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ್ನು ಪದನಿಮಿತ್ತ ಸದಸ್ಯರನ್ನಾಗಿ ಸೇರ್ಪಡೆಗೊಳಿಸಬೇಕು. ಪುತ್ತೂರಿನಲ್ಲಿ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಸಾಹಿತ್ಯ ಸಮ್ಮೇಳನಗಳನ್ನು ನಡೆಸಲು ಮುಂದಾಗಬೇಕು ಎಂದು ಹೇಳಿದರು.

ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ವಿಜಯ ಹಾರ್ವಿನ್ ಅವರು ಮಾತನಾಡಿ, ಡಾ.ಕಾರಂತ ಅಧ್ಯಯನ ಪೀಠ ಸ್ಥಾಪಿಸಬೇಕು. ಇದು ಹಲವು ವರ್ಷಗಳ ಬೇಡಿಕೆಯಾಗಿದೆ ಎಂದರು.

ಬೆಂಗಳೂರಿನ ಬಡಾವಣೆಯೊಂದನ್ನು ಡಾ.ಶಿವರಾಮ ಕಾರಂತ ಬಡಾವಣೆ ಹೆಸರಲ್ಲಿ ರಾಜ್ಯ ಸರ್ಕಾರ ರು. 16 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಅದರಲ್ಲಿ 18399 ನಿವೇಶನಗಳ ವ್ಯವಸ್ಥೆ ಮಾಡಿರುವುದನ್ನು ಪ್ರಸ್ತಾಪಿಸಿದ ಉಮೇಶ್ ನಾಯಕ್ ಪುತ್ತೂರು ಅವರು ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸಿದರು.ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಮಾತನಾಡಿ, ಕಾರಂತ ಬಾಲವನದಲ್ಲಿ ಪ್ರತೀ ತಿಂಗಳೂ ಉತ್ತಮ ಕಾರ್ಯಕ್ರಮ ನಡೆಸಲಾಗುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಂದಿರುವ ಅನುದಾನದಲ್ಲಿ ಮಾಸ್ಟರ್ ಪ್ಲ್ಯಾನ್ ತಯಾರಿಸಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ವರ್ಷದೊಳಗೆ ಅಭಿವೃದ್ಧಿ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.ಡಾ.ಕಾರಂತರ ಹೆಸರನ್ನು ಪುತ್ತೂರು ವೃತ್ತವೊಂದಕ್ಕೆ ನಾಮಕರಣ ಮಾಡುವಂತೆ ಸಭೆಯಲ್ಲಿ ಸಲಹೆ ಬಂದಿದೆ. ಬಾಲವನದ ಅತೀ ಸಮೀಪ ಇರುವ ಪರ್ಲಡ್ಕ ವೃತ್ತವನ್ನು ಕಾರಂತರ ಹೆಸರಲ್ಲಿ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಸ್ಟೆಲ್ಲಾ ವರ್ಗೀಸ್ ತಿಳಿಸಿದರು.ತಹಸೀಲ್ದಾರ್ ಎಸ್.ಬಿ. ಕೂಡಲಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಉಪಸ್ಥಿತರಿದ್ದರು.

ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು, ಬಾಲವನ ಸಮಿತಿ ಸದಸ್ಯರಾದ ಪಾರ್ಥ ವಾರಣಾಸಿ, ಶಿವಪ್ರಸಾದ್ ರೈ ಮಠಂತಬೆಟ್ಟು, ಸ್ವಾತಿ ಜೆ. ರೈ, ಪ್ರತಿಮಾ ಹೆಗ್ಡೆ, ವಿದುಷಿ ನಯನಾ ರೈ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜೇಶ್ ರೈ, ನಗರಸಭಾ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳ ಕಾಳೆ, ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ. ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನಿತಾ ಕುಮಾರಿ ಭಾಗವಹಿಸಿದ್ದರು. ಶಿಕ್ಷಕ ಸಾಹಿತಿ ರಮೇಶ್ ಉಳಯ ನಿರೂಪಿಸಿದರು. ಕಲಾ ಶಿಕ್ಷಕ ಜಗನ್ನಾಥ್ ಅರಿಯಡ್ಕ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಎಲ್‌ಇ ಫಿಸಿಯೋಥೆರಪಿ ವಿಭಾಗಕ್ಕೆ ಪ್ರಶಸ್ತಿ ಗೌರವ
ಸರ್ಕಾರ ಮಾಡಲಾಗದ ಸಾಧನೆ ಎಕ್ಸೆಲ್ ವಿದ್ಯಾ ಸಂಸ್ಥೆ ಮಾಡಿವೆ: ಭೋಜೆ ಗೌಡ