ಹಾವೇರಿ: ಹಿಂದೂ ಯುವತಿಯರನ್ನು ಹತ್ಯೆ ಮಾಡುವ ಆರೋಪಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಯಾಗಬೇಕು. ರಟ್ಟಿಹಳ್ಳಿ ತಾಲೂಕು ಮಾಸೂರಿನಲ್ಲಿ ಹತ್ಯೆಯಾದ ಯುವತಿ ಸ್ವಾತಿ ಕುಟುಂಬಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ಬೇಜವಾಬ್ದಾರಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಮಾಸೂರಿನ ಯುವತಿ ಸ್ವಾತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದುವರೆಗೂ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸರ್ಕಾರದ ಯಾವೊಬ್ಬರೂ ಬಂದು ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಮುಸ್ಲಿಮರ ಗುಲಾಮಗಿರಿಯಲ್ಲಿರುವ ಸರ್ಕಾರಕ್ಕೆ ಬಡ ಕುಟುಂಬಕ್ಕೆ ಸಾಂತ್ವನ ಹೇಳಲು ಪುರುಸೊತ್ತಿಲ್ಲ. ಯುವತಿ ಹಿಂದೂ ಆಗಿದ್ದಕ್ಕೆ ಯಾರೂ ಬರುತ್ತಿಲ್ಲ. ಅದೇ ಮುಸ್ಲಿಂ ಯುವತಿ ಆಗಿದ್ದರೆ ಬಿಡುತ್ತಿದ್ದಾರಾ? ಇಡೀ ಸರ್ಕಾರವೇ ಅವರ ಮನೆಯಲ್ಲಿ ಇರುತ್ತಿತ್ತು. ರಾಜ್ಯ ಸರ್ಕಾರ ಮುಸ್ಲಿಮರ ಗುಲಾಮರು ಎಂದು ಘೋಷಣೆ ಮಾಡಿಕೊಳ್ಳುವುದು ಒಳಿತು ಎಂದರು.ರಾಜ್ಯ ಸರ್ಕಾರ ಮುಸ್ಲಿಂರ ಗುಲಾಮಗಿರಿಯಲ್ಲಿದೆ. ಅದಕ್ಕಾಗಿಯೇ ಬಜೆಟ್‌ನಲ್ಲಿ ಬಹುಪಾಲು ಅನುದಾನ ಮೀಸಲಿಟ್ಟಿದೆ. ಶೇ. 4ರಷ್ಟು ಮೀಸಲಾತಿ ಕೊಟ್ಟಿದೆ. ತಂದೆ ಇಲ್ಲದ ಯುವತಿಯ ತಾಯಿ ಅಕ್ಷರಶಃ ನೊಂದಿದ್ದಾರೆ. ನಮಗೆ ಯಾವ ಪರಿಹಾರವೂ ಬೇಕಾಗಿಲ್ಲ. ತಪ್ಪಿತಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಮಗಳಿಗೆ ನ್ಯಾಯ ಸಿಗಬೇಕೆಂದು ಅಳಲು ತೊಡಕೊಂಡಿದ್ದಾಳೆ. ಯಾವಾಗಲೂ ಹಿಂದುಳಿದವರ ಪರ ಎನ್ನುವ ಸಿಎಂ ಈಗ ಎಲ್ಲಿದ್ದಾರೆ. ಸಿಎಂಗೆ ಹಿಂದುಳಿದವರ ಬಗ್ಗೆ ನಿಜವಾದ ಕಳಕಳಿ ಇದ್ದರೆ ತುರ್ತಾಗಿ ಬಂದು ಕುಟುಂಬಕ್ಕೆ ಸಾಂತ್ವನ ಹೇಳಬೇಕೆಂದು ಆಗ್ರಹಿಸಿದರು.
ಬಿಜೆಪಿಯಲ್ಲಿ ಶುದ್ದೀಕರಣ ಆಗಬೇಕು: ಬಿಜೆಪಿ ಘರ್ ವಾಪಸಿ ಬಗ್ಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸಂಪೂರ್ಣವಾಗಿ ಶುದ್ಧಿಕರಣ ಆಗಬೇಕು. ಹೊಂದಾಣಿಕೆ ರಾಜಕಾರಣ ಕೈಬಿಡಬೇಕು. ಸಾಮೂಹಿಕ ನಾಯಕತ್ವ ಮತ್ತೆ ಬಂದಾಗ ಬಿಜೆಪಿ ಮನೆಗೆ ಸೇರ್ಪಡೆಯಾಗುತ್ತೇನೆ. ನಾನು ರಾಷ್ಟ್ರೀಯತೆ ಸಿದ್ಧಾಂತದಿಂದ ಬಂದವನು. ಬಿಜೆಪಿ ಶುದ್ಧಿಕರಣ ಆದಮೆಲೆ ಬಿಜೆಪಿ ಬಿಟ್ಟು ಎಲ್ಲಿಯೂ ಹೋಗಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿಳಿಸಿದರು.ಸ್ವಾತಿ ಮನೆಗೆ ಈಶ್ವರಪ್ಪ ಭೇಟಿ
ರಟ್ಟಿಹಳ್ಳಿ: ಇತ್ತೀಚೆಗೆ ಹತ್ಯೆಗೀಡಾದ ತಾಲೂಕಿನ ಮಾಸೂರು ಗ್ರಾಮದ ಸ್ವಾತಿ ಬ್ಯಾಡಗಿ ಮನೆಗೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮಿಗಳು, ಶಂಕರಗೌಡ ಚನ್ನಗೌಡ್ರ, ಬಸವರಾಜ ಆಡಿನವರ, ರಾಘವೇಂದ್ರ ಹರವಿಶೆಟ್ಟರ್, ವೀರನಗೌಡ ಮಕರಿ, ಉಜನೆಪ್ಪ ಕೊಡಿಹಳ್ಳಿ, ಬಸವರಾಜ ಗಬ್ಬೂರ,ಬಸನಗೌಡ ಗಂಟೆಪ್ಪಗೌಡ್ರ, ಪ್ರಭು ಮುದಿವೀರಣ್ಣನವರ, ರಾಜು ಮಳಗೊಂಡರ, ಪರಮೇಶಪ್ಪ ಹಲಗೇರಿ ಮುಂತಾದವರು ಇದ್ದರು.