ಗ್ರಾಪಂನಲ್ಲಿ ಸಾಮಾನ್ಯ, ಗ್ರಾಮಸಭೆಗಳು ಕಡ್ಡಾಯ

KannadaprabhaNewsNetwork | Published : Mar 19, 2025 12:35 AM

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸಿ ಗ್ರಾಮೀಣ ಭಾಗದ ಮೂಲ ಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಜಿಪಂ ಸಿಇಒ ರಿಷಿ ಆನಂದ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ಗ್ರಾಮ ಪಂಚಾಯತಿಗಳಲ್ಲಿ ಸಾಮಾನ್ಯ ಸಭೆ ಹಾಗೂ ಗ್ರಾಮ ಸಭೆಗಳನ್ನು ಕಡ್ಡಾಯವಾಗಿ ನಡೆಸಿ ಗ್ರಾಮೀಣ ಭಾಗದ ಮೂಲ ಸೌಕರ್ಯ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಜಿಪಂ ಸಿಇಒ ರಿಷಿ ಆನಂದ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಿಡಿಒಗಳ ಸಭೆ ನಡೆಸಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು. ವಿವಿಧ ಯೋಜನೆಗಳ ಪ್ರಗತಿಗೆ ಸ್ಥಳೀಯ ಮಟ್ಟದ ಅಧಿಕಾರಿ, ಸಿಬ್ಬಂದಿ ಪಾತ್ರ ಮುಖ್ಯವಾಗಿದೆ. ಯಾವುದೇ ಕಾಮಗಾರಿಗಳು ವಿಳಂಬವಾಗಬಾರದು ಸೂಚಿಸಿದರು.

ಬಬಲೇಶ್ವರ, ಚಡಚಣ ರಾಜ್ಯಕ್ಕೆ ಪ್ರಥಮ:

ಬಬಲೇಶ್ವರ ಹಾಗೂ ಚಡಚಣ ತಾಲೂಕುಗಳು ಗ್ರಾಮ ಪಂಚಾಯತಿ ತೆರಿಗೆ ಸಂಗ್ರಹದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದ್ದು ಶೇ.೧೦೦ ಪ್ರಗತಿ ಸಾಧಿಸಿವೆ. ಪ್ರಸ್ತುತ ಜಿಲ್ಲೆಯ ತೆರಿಗೆ ಸಂಗ್ರಹ ಪ್ರಗತಿಯು ಶೇ.೬೯ ರಷ್ಟಿದೆ. ಮಾರ್ಚ್ ಅಂತ್ಯದವರೆಗೆ ಎಲ್ಲ ತಾಲೂಕುಗಳಲ್ಲಿ ಕಡ್ಡಾಯವಾಗಿ ಶೇ.೧೦೦ ತೆರಿಗೆ ಸಂಗ್ರಹಿಸುವಂತೆ ಸೂಚಿಸಿದರು.

ಅಂಗನವಾಡಿಗಳಿಗೆ ಸೌಲಭ್ಯ:ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಚಿತ್ರ (ಬಾಲ ಪೇಂಟಿಂಗ್)ಗಳನ್ನು ಬಿಡಿಸುವುದು. ಬೆಂಚ್‌ಗಳು, ವಿನೂತನ ಆಟಿಕೆ ಸಾಮಗ್ರಿಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ಪೂರೈಸುವುದು. ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವುದು, ಸದರಿ ಕೇಂದ್ರಗಳಲ್ಲಿ ಸ್ಥಳಾವಕಾಶ ಇದ್ದಲ್ಲಿ ಬಯೋ ಫೆನ್ಸಿಂಗ್ ಮಾಡಲು ಕ್ರಮ ಕೈಗೊಳ್ಳುವುದು. ಅಡುಗೆ ಕೋಣೆ ಮತ್ತು ದಾಸ್ತಾನು ಕೋಣೆಗಳನ್ನು ವ್ಯವಸ್ಥಿತವಾಗಿಡಬೇಕು. ಬಳಿಕ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಪ್ರಸ್ತುತ ವಿಜಯಪುರ ಜಿಲ್ಲೆಗೆ ೪೨ ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದೆ.

ಈಗಾಗಲೇ ೪೦ ಲಕ್ಷಕ್ಕಿಂತ ಹೆಚ್ಚು ಮಾನವ ದಿನಗಳ ಸೃಜನೆಯಾಗಿದೆ. ಪ್ರಸ್ತುತ ವರ್ಷ ಮುಕ್ತಾಯ ಹಂತದಲ್ಲಿರುವುದರಿಂದ ಬಾಕಿ ಉಳಿದ ಮಾನವ ದಿನಗಳನ್ನು ನಿಗದಿತ ಅವಧಿಯಲ್ಲಿ ಸೃಜನೆ ಮಾಡಬೇಕು. ಪೂರ್ಣಗೊಳ್ಳದಿರುವ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ನರೇಗಾ ಯೋಜನೆಯಡಿ ಮಹಿಳೆಯರು ಭಾಗವಹಿಸುವಿಕೆ ಪ್ರಮಾಣವನ್ನು ಶೇ.೬೦ರಷ್ಟು ಹೆಚ್ಚಳಕ್ಕೆ ಕ್ರಮ ವಹಿಸಬೇಕು. ಮಹಿಳಾ ಕೂಲಿಕಾರರು ಮತ್ತು ವಿಶೇಷಚೇತನರಿಗೆ ನಿರಂತರ ಉದ್ಯೋಗ ಒದಗಿಸಲು ಕ್ರಮ ವಹಿಸುವಂತೆ ಸೂಚನೆ ನೀಡಿದರು.

ಸ್ವಚ್ಛ ಭಾರತ್‌ ಮಿಷನ್(ಗ್ರಾಮೀಣ) ಯೋಜನೆಯಡಿ ಫಲಾನುಭವಿಗಳ ಶೌಚಾಲಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವುದು. ಈಗಾಗಲೇ ಮುಕ್ತಾಯವಾದ ಶೌಚಾಲಯಗಳ ಜಿಯೋ ಟ್ಯಾಗಿಂಗ್ ಮಾಡುವುದು, ಪ್ರಗತಿ ಹಂತದಲ್ಲಿರುವ ವೈಯಕ್ತಿಕ ಶೌಚಾಲಯಗಳನ್ನು ತುರ್ತಾಗಿ ಪೂರ್ಣಗೊಳಿಸುವುದು, ಬೂದು ನೀರು ನಿರ್ವಹಣೆ ಕಾಮಗಾರಿಗಳ ಗ್ರಾಮವಾರು ವಿಸ್ತೃತ ಯೋಜನಾ ವರದಿಯನ್ನು ತಯಾರಿಸಿ ಜಿಲ್ಲಾ ಪಂಚಾಯತಿಗೆ ಸಲ್ಲಿಸುವಂತೆ ಪಿಡಿಒಗಳಿಗೆ ನಿರ್ದೇಶನ ನೀಡಿದರು.

ಬೇಸಿಗೆಯಲ್ಲಿ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ಸಮರ್ಪಕ ನಿರ್ವಹಣೆ ಮಾಡಬೇಕು. ಜನ-ಜಾನುವಾರುಗಳಿಗೆ ಸಾಕಷ್ಟು ನೀರನ್ನು ಪೂರೈಕೆ ಮಾಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಪ್ರಧಾನ ಮಂತ್ರಿ ಆವಾಸ ಯೋಜನೆ (ಗ್ರಾಮೀಣ)ಯ ವಸತಿ ರಹಿತರು ಸೌಲಭ್ಯಗಳನ್ನು ಪಡೆಯಲು ಸ್ವಯಂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಮಾಹಿತಿಯುಳ್ಳ ವಿವಿಧ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದರು. ಈ ಪೋಸ್ಟರ್‌ಗಳನ್ನು ಗ್ರಾಪಂಗಳಲ್ಲಿ ಅಳವಡಿಸಿ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪಕಾರ್ಯರ್ಶಿ ಡಾ.ವಿಜಯಕುಮಾರ ಆಜೂರ, ಯೋಜನಾ ನಿರ್ದೇಶಕ ಬಿ.ಎಸ್ ರಾಠೋಡ, ಜಿಪಂನ ಹಿರಿಯ ಅಧಿಕಾರಿಗಳು ಇಒಗಳು, ಸಹಾಯಕ ನಿರ್ದೇಶಕರು (ಗ್ರಾ.ಉ ಮತ್ತು ಪಂ.ರಾ), ಎಲ್ಲ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳು, ಎಲ್ಲ ತಾಲೂಕು ಪಂಚಾಯತಿಗಳ ಅಧಿಕಾರಿ, ಸಿಬ್ಬಂದಿ ಇದ್ದರು.

----------

ಕೋಟ್‌

ಗ್ರಾಪಂನ ಸಾಮಾನ್ಯಸಭೆ ಮತ್ತು ಮಹಿಳಾ ಗ್ರಾಮಸಭೆ ದಿನಾಂಕಗಳನ್ನು ಕಡ್ಡಾಯ ನಿಗದಿಪಡಿಸಬೇಕು. ಬಾಕಿ ಉಳಿದ ಗ್ರಾಮಸಭೆಗಳ ದಿನಾಂಕಗಳನ್ನು ಹಾಗೂ ಸಭೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಪೂರ್ಣಗೊಳಿಸದಿದ್ದಲ್ಲಿ ಪಿಡಿಒಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಂದ ಸ್ವೀಕೃತವಾದ ಇ-ಸ್ವತ್ತು ಸಕಾಲ ಅರ್ಜಿಗಳು ಮತ್ತು ಜನಸ್ಪಂದನ ಕುಂದುಕೊರತೆ ನಿವಾರಣಾ ವ್ಯವಸ್ಥೆಯಡಿ ಸ್ವೀಕೃತಗೊಂಡ ಅರ್ಜಿಗಳನ್ನು ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಬೇಕು. ತಿಂಗಳ ೩ ದಿನಗಳಂದು ಗ್ರಾಪಂನ ಸಾಮಾನ್ಯಸಭೆ ಮತ್ತು ಮಹಿಳಾ ಗ್ರಾಮಸಭೆಗಳನ್ನು ಪೂರ್ಣಗೊಳಿಸಬೇಕು.

- ರಿಷಿ ಆನಂದ್‌, ಜಿಪಂ ಸಿಇಒ

Share this article