ನಾಲಾ ಏರಿ, ಸಾರ್ವಜನಿಕ ರಸ್ತೆ ಒತ್ತುವರಿ ತೆರವಿಗಾಗಿ ರೈತನ ಧರಣಿಗೆ ರೈತ, ಕನ್ನಡಪರ ಸಂಘಟನೆಗಳ ಬೆಂಬಲ

KannadaprabhaNewsNetwork | Published : Mar 19, 2025 12:35 AM

ಸಾರಾಂಶ

ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ಕೇಳದ ಅಧಿಕಾರಿಗಳ ವೈಪಲ್ಯ ಎದ್ದು ತೋರುತ್ತಿದೆ. ಕೂಡಲೇ ತಹಸೀಲ್ದಾರ್ ಅವರು ಸ್ಥಳ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ಹೋರಾಟವನ್ನು ಉಗ್ರಪಡಿಸುವ ಕಾರ್ಯಕ್ಕೆ ನಿಲ್ಲಬೇಕಾಗುತ್ತದೆ .

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕಿರಂಗೂರು ಗ್ರಾಮದ ಬಳಿಯ ನಾಲಾ ಏರಿ, ಸಾರ್ವಜನಿಕ ರಸ್ತೆ ಒತ್ತುವರಿ ತೆರವಿಗಾಗಿ ನಡೆಸುತ್ತಿರುವ ದಸರಗುಪ್ಪೆ ಗ್ರಾಮದ ರೈತ ಡಿ.ಪ್ರಭಾಕರ್ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ವಿವಿಧ ರೈತ ಹಾಗೂ ಕನ್ನಡ ಪರ ಸಂಘಟನೆಗಳ ಮುಖಂಡರು ಪಾಲ್ಗೊಂಡು ಬೆಂಬಲಿಸಿದರು.

ರೈತ ನಾಯಕಿ ಸುನಂದ ಜಯರಾಂ, ರೈತ ಸಂಘದ ಅಧ್ಯಕ್ಷ ಕೆ.ಬೋರಯ್ಯ, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ರೈತ ಸಂಘದ ಕಿರಂಗೂರು ಪಾಪು , ಜಗದೀಶ್ ಸೇರಿದಂತೆ ಇತರರು ಕೆಲ ಕಾಲ ಧರಣಿ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ರೈತ ಸತ್ಯಾಗ್ರಹ ಧರಣಿ ನಡೆಸುತ್ತಿದ್ದರೂ ಸ್ಥಳೀಯ ಶಾಸಕರು ಹಾಗೂ ತಾಲೂಕು ಆಡಳಿತ ಅವರ ಸಮಸ್ಯೆ ಕುರಿತು ಕೇಳದೆ ಇರುವುದು ತಾಲೂಕು ಆಡಳಿತಕ್ಕೆ ಶೋಭೆಯಲ್ಲ ಎಂದು ಕಿಡಿಕಾರಿದರು.

ರೈತ ನಾಯಕಿ ಸುನಂದ ಜಯರಾಂ ಮಾತನಾಡಿ,ಸಾರ್ವಜನಿಕ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ಕೇಳದ ಅಧಿಕಾರಿಗಳ ವೈಪಲ್ಯ ಎದ್ದು ತೋರುತ್ತಿದೆ. ಕೂಡಲೇ ತಹಸೀಲ್ದಾರ್ ಅವರು ಸ್ಥಳ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳ ಮೂಲಕ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ಹೋರಾಟವನ್ನು ಉಗ್ರಪಡಿಸುವ ಕಾರ್ಯಕ್ಕೆ ನಿಲ್ಲಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಂತರ ತಹಸೀಲ್ದಾರ್ ಅವರೊಂದಿಗೆ ಚರ್ಚೆ ನಡೆಸಿ, ರೈತ ಪ್ರಭಾಕರ್ ಅವರ ಬಳಿ ಇರುವ ದಾಖಲೆ ನೋಡಿದ್ದೇವೆ. ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿದೆ. ಶೀಘ್ರ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಿದರು.

ನೀರಾವರಿ, ಕೃಷಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಬಳಿ ಚರ್ಚಿಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ತಹಸೀಲ್ದಾರ್ ಧರಣಿ ಕುಳಿತ ರೈತನಿಗೆ ಭರವಸೆ ನೀಡಿದರು.

ಕಳೆದ 20 ವರ್ಷಗಳಿಂದ ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ ವಿನಃ ಸಮಸ್ಯೆ ಬಗೆಹರಿಸಿಲ್ಲ. ಹಾಗಾಗಿ ಶಾಶ್ವತ ಪರಿಹಾರ ಈಡೇರಿಸುವರೆಗೆ ಧರಣಿ ಸತ್ಯಾಗ್ರಹ ಮುಂದುವರಿಸಲಾಗಿದೆ ಎಂದು ರೈತ ಡಿ.ಪ್ರಭಾಕರ್ ತಿಳಿಸಿದರು.

Share this article