- ನಿಮ್ಮ ಆರೋಗ್ಯ ರಕ್ಷಣೆಗೆ ಎಸ್‌ಎಸ್ ಕೇರ್ ಟ್ರಸ್ಟ್ ಬದ್ಧ: ಸಂಸದೆ ಡಾ.ಪ್ರಭಾ ಅಭಯ - - -
ಸರ್ಕಾರದಿಂದ ಮಾಜಿ ದೇವದಾಸಿಯರ ಪುನರ್ವಸತಿಗಾಗಿ, ಮಾಜಿ ದೇವದಾಸಿಯರು, ಅಂತಹವರ ಅವಲಂಬಿತರಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ನಗರದ ಬಾಪೂಜಿ ಸಭಾಂಗಣದಲ್ಲಿ ಶನಿವಾರ ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಮಾಜಿ ದೇವದಾಸಿಯರಿಗಾಗಿ ಹಮ್ಮಿಕೊಂಡಿದ್ದ ಸ್ಪಂದನೆ ಉಚಿತ ಆರೋಗ್ಯ ತಪಾಸಣೆ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರವು ದೇವದಾಸಿಯರ ಪುನರ್ವಸತಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿಕೊಂಡು ಬಂದಿದ್ದು, ಅಂತಹವನ್ನು ಸದ್ಬಳಕೆ ಮಾಡಿಕೊಂಡು, ಮುಖ್ಯವಾಹಿನಿಗೆ ಬರಬೇಕು ಎಂದರು.ಹರಪನಹಳ್ಳಿ ಸೇರಿದಂತೆ ವಿವಿಧ ತಾಲೂಕಿನಿಂದ ಬಂದ ನಿಮ್ಮೆಲ್ಲರಿಗೂ ಎಸ್.ಎಸ್. ಕೇರ್ ಟ್ರಸ್ಟ್ ಆರೋಗ್ಯ ಕಾರ್ಡ್ ನೀಡಲಾಗುವುದು. ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ, ಆರೋಗ್ಯದಲ್ಲಿ ತೊಂದರೆಯಾದರೆ ಟ್ರಸ್ಟ್‌ನ ಮಾಜಿ ದೇವದಾಸಿಯರ ಆರೋಗ್ಯ ಕಾರ್ಡ್ ತಂದು, ಬಾಪೂಜಿ ವಿದ್ಯಾಸಂಸ್ಥೆ ಆಸ್ಪತ್ರೆಗಳಲ್ಲಿ ಆರೋಗ್ಯ ತಪಾಸಣೆ, ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿದರು.
ಸರ್ಕಾರದ ಸಾಲ, ಸಬ್ಸಿಡಿ ಸದ್ಬಳಕೆ ಮಾಡಿಕೊಳ್ಳಿ. ಹಲವಾರು ಕೌಶಲ್ಯ ತರಬೇತಿ ನೀಡುತ್ತಿದ್ದು, ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಸದ್ಭಳಕೆ ಮಾಡಿಕೊಳ್ಳಿ. ನಿಮ್ಮ ಭಾಗದಲ್ಲಿ ಯಾರು ಯಾರು ಮಾಜಿ ದೇವದಾಸಿಯರಿದ್ದಾರೆ, ಅಂತಹವರಿಗೆ ನಿವೇಶನ ಇದೆಯೇ, ಮನೆ ಕಟ್ಟಿಕೊಂಡಿದ್ದಾರಾ? ಅಂತಹವರ ಮಕ್ಕಳ ವಿದ್ಯಾಭ್ಯಾಸ, ಯಾರ ರೀತಿ ಕೌಶಲ್ಯ ಹೊಂದಿದ್ದಾರೆಂಬ ಬಗ್ಗೆ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ವರದಿ ಮಾಡಿ, ನಮ್ಮ ಗಮನಕ್ಕೆ ತನ್ನಿ. ಸ್ವಸಹಾಯ ಸಂಘದಲ್ಲಿದ್ದು, ಅಲ್ಲಿಯೂ ಸಾಲ ಪಡೆದು, ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಾ ನಾಯ್ಕ ಮಾತನಾಡಿ, 2007-08ನೇ ಸಾಲಿನ ಮಾಜಿ ದೇವದಾಸಿಯರ ಸಮೀಕ್ಷೆ ಪ್ರಕಾರ 1604 ಮಾಜಿ ದೇವದಾಸಿಯರನ್ನು ಗುರುತಿಸಿ, ಸರ್ಕಾರಿ ಸೌಲಭ್ಯ ಕಲ್ಪಿಸಲಾಗಿತ್ತು. ಆಗ ಬಿಟ್ಟು ಹೋಗಿದ್ದವರನ್ನು ಸರ್ಕಾರ 2025-26ನೇ ಸಾಲಿನಲ್ಲಿ ಮತ್ತೆ ಸಮೀಕ್ಷೆ ನಡೆಸಿ, ಸೌಲಭ್ಯ ಕಲ್ಪಿಸಲು ಅವಕಾಶ ನೀಡಿತ್ತು. ಡಿಸಿ ಅಧ್ಯಕ್ಷತೆಯಲ್ಲಿ ಅಂತಿಮ ಪಟ್ಟಿ ಸಲ್ಲಿಸಿ 209 ಮಾಜಿ ದೇವದಾಸಿಯರನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. 209ರಲ್ಲಿ ದಾವಣಗೆರೆ ದಕ್ಷಿಣ-ಉತ್ತರ, ಮಾಯಕೊಂಡ ಕ್ಷೇತ್ರ ವ್ಯಾಪ್ತಿಯಲ್ಲಿ 127 ಮಾಜಿ ದೇವದಾಸಿಯರನ್ನು ಆಯ್ಕೆ ಮಾಡಿ ಮಾಶಾಸನಕ್ಕೆ ಕಳಿಸಲಾಗಿದೆ ಎಂದು ಎಂದರು.
ಎಸ್‌ಎಸ್ ಕೇರ್ ಟ್ರಸ್ಟಿನ ಮಕ್ಕಳ ವಿಭಾಗ ಮುಖ್ಯಸ್ಥ ಡಾ.ಮೂಗನಗೌಡ ಪಾಟೀಲ್, ಜೆಜೆಎಂ ವೈದ್ಯಕೀಯ ಕಾಲೇಜು ಪ್ರಾಚಾರ್ಯರಾದ ಡಾ.ಶುಕ್ಲಾ ಶೆಟ್ಟಿ, ಎಸ್‌ಎಸ್ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎಸ್. ಪ್ರಸಾದ, ಬಾಪೂಜಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಕುಮಾರ, ಎಸ್‌ಎಸ್ ವೈದ್ಯಕೀಯ ಕಾಲೇಜಿನ ವೈದ್ಯಕೀಯ ನಿರ್ದೇಶಕ ಅರುಣ್ ಅಜ್ಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
- - -
- - -
ದಾವಣಗೆರೆಯಲ್ಲಿ ಶನಿವಾರ ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಮಾಜಿ ದೇವದಾಸಿಯರಿಗಾಗಿ ಹಮ್ಮಿಕೊಂಡಿದ್ದ ಸ್ಪಂದನೆ ಉಚಿತ ಆರೋಗ್ಯ ತಪಾಸಣೆ ಹಾಗೂ ಅರಿವು ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿದರು.