ಗೋವಾ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೇಲೆ ಆಟೋ ಚಾಲಕನಿಂದ ಮಾರಣಾಂತಿಕ ಹಲ್ಲೆ : ಸ್ಥಳದಲ್ಲೇ ಸಾವು

KannadaprabhaNewsNetwork | Updated : Feb 16 2025, 12:48 PM IST

ಸಾರಾಂಶ

ಕ್ಷುಲ್ಲಕ ಕಾರಣಕ್ಕೆ ನಗರದಲ್ಲಿ ಆಟೋ ಚಾಲಕನೊಬ್ಬ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ನಂತರ ಲಾಡ್ಜ್‌ನ ಮೆಟ್ಟಿಲು ಹತ್ತುತ್ತಿದ್ದ ಮಾಜಿ ಶಾಸಕ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

 ಬೆಳಗಾವಿ : ಕ್ಷುಲ್ಲಕ ಕಾರಣಕ್ಕೆ ನಗರದಲ್ಲಿ ಆಟೋ ಚಾಲಕನೊಬ್ಬ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ನಂತರ ಲಾಡ್ಜ್‌ನ ಮೆಟ್ಟಿಲು ಹತ್ತುತ್ತಿದ್ದ ಮಾಜಿ ಶಾಸಕ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.

ಗೋವಾದ ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೋ ಮಾಮಲೇದಾರ್ (69) ಮೃತ ದುರ್ದೈವಿ. ಬೆಳಗ್ಗೆ ಖಡೇಬಜಾರ್ ಬಳಿ ತೆರಳುತ್ತಿದ್ದ ವೇಳೆ ಲಾವೋ ಮಾಮಲೇದಾರ್ ಅವರ ಕಾರು ಆಟೋಗೆ ಟಚ್ ಆಗಿತ್ತು. ಇದಾದ ಬಳಿಕ ಬೆಳಗಾವಿ ನಗರದ ಶ್ರೀನಿವಾಸ್ ಲಾಡ್ಜ್‌ಗೆ ಬಂದಿದ್ದರು. ಲಾಡ್ಜ್ ಬಳಿ ಬಂದ ಆಟೋ ಚಾಲಕ ಲಾವೋ ಅವರಿಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿರುವುದು ಸಿಸಿ ಟಿವಿಯಲ್ಲಿ ಸೆರೆಯಲಾಗಿದೆ. ಹಲ್ಲೆಯ ನಂತರ ಲಾಡ್ಜ್ ಮೆಟ್ಟಿಲು ಹತ್ತುವ ವೇಳೆ ಏಕಾಏಕಿ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದು ಕೊಲೆಯೋ ಅಥವಾ ಹೃದಯಾಘಾತದಿಂದ ಸಾವೋ ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾವೋ ಮಾಮಲೇದಾರ್ ಮೃತದೇಹವನ್ನು ಬಿಮ್ಸ್ ಆಸ್ಪತ್ರೆಗೆ ತರಲಾಗಿದೆ.

ಬೆಳಗಾವಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕ್ಷುಲ್ಲಕ ಕಾರಣಕ್ಕೆ ಗೋವಾ ಮಾಜಿ ಶಾಸಕ ಲಾವೋ ಮಾಮಲೇದಾರ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಒಂದು ಕೋಮಿಗೆ ಸೇರಿದ 8-10 ಜನರ ಗುಂಪು ಹಲ್ಲೆ ನಡೆಸಿದ್ದು, ಲಾಡ್ಜ್‌ಗೆ ಹೋಗುತ್ತಿದ್ದ ವೇಳೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಬೆಳಗಾವಿಯಲ್ಲಿ ಜನ ಸಾಮಾನ್ಯರ ರಕ್ಷಣೆ ಇಲ್ಲದಂತಾಗಿದೆ. ಬೆಳಗಾವಿ ತಾಲೂಕಿನಲ್ಲಿ ಮಟ್ಕಾ ದಂಧೆ ನಡೆಯುತ್ತಿದೆ. ಅಪರಾಧ ಚಟುವಟಿಕೆಗಳು ನಡೆಯುತ್ತಿವೆ. ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕ್ಷುಲ್ಲಕ ಕಾರಣಕ್ಕೆ ಗೋವಾ ಮಾಜಿ ಶಾಸಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.

-ಅಭಯ ಪಾಟೀಲ, ಬೆಳಗಾವಿ ದಕ್ಷಿಣ ಶಾಸಕ.

ಮಾಜಿ ಶಾಸಕ ಲಾವೋ ಮಾಮಲೇದಾರ್ ಸಾವು ದುಃಖಕರ: ಸಚಿವ ಸತೀಶ

ಬೆಳಗಾವಿ: ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನೊಬ್ಬನಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ಸಾವಿಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ವಿಷಾದ ವ್ಯಕ್ತಪಡಿಸಿದ್ದಾರೆ.ಈ ಕುರಿತು ಮಾಹಿತಿ ತಿಳಿಸಿದ ಸಚಿವರು, ಜಿಲ್ಲಾಧಿಕಾರಿ, ಬೆಳಗಾವಿ ಪೊಲೀಸ್‌ ಕಮಿಷನರ್‌ ಅವರೊಂದಿಗೆ ಮಾತನಾಡಿದ್ದು, ಈ ಘಟನೆ ಬಗ್ಗೆ ವಿವರ ಪಡೆಯಲಾಗಿದೆ. ಮಾಜಿ ಶಾಸಕ ಲಾವೋ ಮಾಮಲೇದಾರ್ ಅವರ ಪಾರ್ಥಿವ ಶರೀರವನ್ನು ಅವರ ಸ್ವಗ್ರಾಮಕ್ಕೆ ಕಳಿಸಲು ಸಕಲ ವ್ಯವಸ್ಥೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.ಇನ್ನು ಬೆಳಗಾವಿಯ ಬಿಮ್ಸ್‌ನಲ್ಲಿ ಮಾಜಿ ಶಾಸಕ ಲಾವೂ ಮಾಮಲೇದಾರ್ ಅವರ ಮೃತದೇಹ ಇರಿಸಲಾಗಿದ್ದು, ಬಿಮ್ಸ್‌ಗೆ ಸಚಿವ ಸತೀಶ್‌ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಆಪ್ತ ಸಹಾಯಕರಾದ ಮಲಗೌಡ ಪಾಟೀಲ ಭೇಟಿ ನೀಡಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಗೋವಾದ ಮಾಜಿ ಶಾಸಕ ಲಾವೋ ಮಾಮಲೇದಾರ್ ಸಾವಿನ ಘಟನೆ ನಡೆದಿರುವುದು ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ, ಅವರ ಕುಟುಂಬ ವರ್ಗಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲೆಂದು ಪ್ರಾರ್ಥಿಸುತ್ತೇನೆ.

-ಸತೀಶ್‌ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವರು.

Share this article