ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್‌ ನಿಧನ

KannadaprabhaNewsNetwork | Updated : Apr 26 2025, 08:15 AM IST

ಸಾರಾಂಶ

ವಿಶ್ವದ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಉನ್ನತ ಸ್ಥಾನಕ್ಕೇರಲು ಸೇವೆ ಸಲ್ಲಿಸಿದ್ದ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್‌ ಶುಕ್ರವಾರ ತಮ್ಮ ನಿವಾಸದಲ್ಲಿ ನಿಧನರಾದರು.

  ಬೆಂಗಳೂರು : ವಿಶ್ವದ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಉನ್ನತ ಸ್ಥಾನಕ್ಕೇರಲು ಸೇವೆ ಸಲ್ಲಿಸಿದ್ದ ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್‌ ಶುಕ್ರವಾರ ತಮ್ಮ ನಿವಾಸದಲ್ಲಿ ನಿಧನರಾದರು.

ಕಳೆದೆರಡು ವರ್ಷಗಳ ಹಿಂದೆ ಹೃದಯಾಘಾತಕ್ಕೊಳಗಾಗಿ ಚೇತರಿಸಿಕೊಂಡಿದ್ದರು. ಅದಾದ ನಂತರದಿಂದ ಅನಾರೋಗ್ಯಕ್ಕೊಳಗಾಗಿದ್ದ ಕಸ್ತೂರಿ ರಂಗನ್‌, ಶುಕ್ರವಾರ ಬೆಳಗ್ಗೆ 10.43ಕ್ಕೆ ಕೊಡಿಗೇಹಳ್ಳಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಕಸ್ತೂರಿ ರಂಗನ್‌ ಅವರು ಇಬ್ಬರು ಪುತ್ರರನ್ನು ಹೊಂದಿದ್ದು, ಅವರು ಸದ್ಯ ವಿದೇಶದಲ್ಲಿದ್ದಾರೆ. ಅವರು ಭಾರತಕ್ಕೆ ಆಗಮಿಸಬೇಕಿರುವ ಕಾರಣ ಏ.27ರಂದು ಭಾನುವಾರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಮತ್ತು ಸ್ನೇಹಿತರು ನಿರ್ಧರಿಸಿದ್ದಾರೆ. ಅಂತ್ಯಕ್ರಿಯೆಗೂ ಮುನ್ನ ಏ.27ರಂದು ಬೆಳಗ್ಗೆ 10ರಿಂದ 12ರವರೆಗೆ ಸದಾಶಿವನಗರದಲ್ಲಿನ ರಾಮನ್‌ ಸಂಶೋಧನಾ ಸಂಸ್ಥೆ (ಆರ್‌ಆರ್‌ಐ)ನಲ್ಲಿ ಕಸ್ತೂರಿ ರಂಗನ್‌ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇಸ್ರೋ ಸಂಸ್ಥೆ ತಿಳಿಸಿದೆ.

ಕಸ್ತೂರಿ ರಂಗನ್‌ ನಿಧನಕ್ಕೆ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಕಸ್ತೂರಿ ರಂಗನ್‌ ಕೊಡುಗೆ:

ಡಾ.ಕಸ್ತೂರಿ ರಂಗನ್‌ ಅವರು 1940ರ ಅಕ್ಟೋಬರ್‌ 24ರಂದು ಕೇರಳದ ಎರ್ನಾಕುಲಂನಲ್ಲಿ ಜನಿಸಿದ್ದರು. ಬಾಂಬೆ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ವಿಜ್ಞಾನ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದರು. 1963ರಲ್ಲಿ ಅಹಮದಾಬಾದ್‌ನ ಭೌತಿಕ ಸಂಶೋಧನಾ ಪ್ರಯೋಗಾಲಯದ ಸಂಶೋಧನಾ ಸ್ಕಾಲರ್‌ ಆಗಿ ತಮ್ಮ ಸೇವೆ ಆರಂಭಿಸಿ, 1971ರಲ್ಲಿ ಇಸ್ರೋ ಉಪಗ್ರಹ ಕೇಂದ್ರದಲ್ಲಿ ಭೌತಶಾಸ್ತ್ರಜ್ಞರಾಗಿ ಸೇರ್ಪಡೆಗೊಂಡಿದ್ದರು.

ಭಾರತದ ಮೊದಲ ಎರಡು ಪ್ರಾಯೋಗಿಕ ಭೂ ವೀಕ್ಷಣಾ ಉಪಗ್ರಹಗಳಾದ ಭಾಸ್ಕರ-I ಮತ್ತು IIರ ಉಪಗ್ರಹ ನಿರ್ಮಾಣದ ಯೋಜನಾ ನಿರ್ದೇಶಕರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಉಪಗ್ರಹ ಉಡಾವಣೆ ಸೇರಿ ವಿವಿಧ ಯೋಜನೆಗಳಲ್ಲಿ ಸೇವೆ ಸಲ್ಲಿಸಿದ ನಂತರ 1994ರಲ್ಲಿ ಇಸ್ರೋ ಅಧ್ಯಕ್ಷರಾಗಿ ನೇಮಕಗೊಂಡು, 2003ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ತಮ್ಮ ಅವಧಿಯಲ್ಲಿ ವರ್ಧಿತ ಉಪಗ್ರಹ ಉಡಾವಣಾ ವಾಹನ (ಎಎಸ್‌ಎಲ್‌ವಿ) ನಿರ್ಮಾಣ, ಎಸ್‌ಆರ್‌ಒಎಸ್‌ಎಸ್‌-ಸಿ2 ಎಂಬ ವೈಜ್ಞಾನಿಕ ಉಪಗ್ರಹ ಉಡಾವಣೆ ಸೇರಿದಂತೆ ಇಸ್ರೋದ ಹಲವು ಸಾಧನೆಗಳ ಮುಂದಾಳತ್ವವಹಿಸಿದ್ದರು. ತಮ್ಮ ಅವಧಿಯಲ್ಲಿ ಉಪಗ್ರಹ, ಉಡಾವಣಾ ವಾಹನಗಳು ಸೇರಿ 29 ಯೋಜನೆಗಳನ್ನು ಯಶಸ್ವಿಗೊಳಿಸಿದ್ದರು.

ಇಸ್ರೋ ಜತೆಗೆ ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯ, ಕರ್ನಾಟಕ ಜ್ಞಾನ ಆಯೋಗ, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿ, ಐಐಟಿ ಮದ್ರಾಸ್‌ನ ಬೋರ್ಡ್‌ ಆಫ್‌ ಗವರ್ನರ್ಸ್‌, ಐಐಎಸ್ಸಿ ಅಧ್ಯಕ್ಷರಾಗಿ, ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಕುಲಪತಿಯಾಗಿ, ಯೋಜನಾ ಆಯೋಗದ ಸದಸ್ಯರಾಗಿಯೂ ಕಸ್ತೂರಿ ರಂಗನ್‌ ಸೇವೆ ಸಲ್ಲಿಸಿದ್ದರು.

ಅದರ ಜತೆಗೆ ಪಶ್ಚಿಮಘಟ್ಟ ಪರಿಸರದ ಕುರಿತು ಉನ್ನತ ಮಟ್ಟದ ಕಾರ್ಯನಿರತ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಕಸ್ತೂರಿ ರಂಗನ್‌, ಪಶ್ಚಿಮಘಟ್ಟದಲ್ಲಿ 59,940 ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಗುರುತಿಸಿ ವರದಿ ನೀಡಿದ್ದರು.

ಹಲವು ಪ್ರಶಸ್ತಿಗಳು:

ಕಸ್ತೂರಿ ರಂಗನ್‌ ಅವರ ಸೇವೆಗೆ ಕೇಂದ್ರ ಸರ್ಕಾರ 1982ರಲ್ಲಿ ಪದ್ಮಶ್ರೀ, 1992ರಲ್ಲಿ ಪದ್ಮಭೂಷಣ ಹಾಗೂ 2000ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಜತೆಗೆ 2014ರಲ್ಲಿ ಕರ್ನಾಟಕ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿತ್ತು.

ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಆಗಸದೆತ್ತಕ್ಕೆ ಹಾರಿಸಿದ್ದ ವಿಜ್ಞಾನಿ ಡಾ. ಕೆ.ಕಸ್ತೂರಿರಂಗನ್‌ ನಿಧನ ಅಘಾತ ತಂದಿದೆ. ಇಸ್ರೋ ಸಂಸ್ಥೆಗೆ ದೀರ್ಘಕಾಲ ಅಧ್ಯಕ್ಷರಾಗಿ, ಕೇಂದ್ರದ ಬಾಹ್ಯಾಕಾಶ ಮಂಡಳಿ ನಿರ್ದೇಶಕರಾಗಿ ಡಾ.ಕಸ್ತೂರಿ ರಂಗನ್‌ ಸಲ್ಲಿಸಿದ ಸೇವೆಯಿಂದ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವಂತಾಯಿತು. ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

Share this article