ಕನ್ನಡಪ್ರಭ ವಾರ್ತೆ ನಾಗಮಂಗಲಜಾನುವಾರುಗಳಿಗೆ ಕಾಲುಬಾಯಿ ಜ್ವರ ತಡೆಯುವ ಲಸಿಕೆ ಹಾಕಿಸಿದರೆ ಹಾಲಿನ ಇಳುವರಿ ಪ್ರಮಾಣ ಕಡಿಮೆಯಾಗುತ್ತದೆಂಬ ಮೂಢನಂಬಿಕೆಯಿಂದ ರೈತರು ಹೊರಬಂದಾಗ ಮಾತ್ರ ರೋಗವನ್ನು ತಡೆಗಟ್ಟಲು ಸಾಧ್ಯ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಪಂ ಆವರಣದಲ್ಲಿ ಜಿಲ್ಲಾ ಪಂಚಾಯತ್ ಮತ್ತು ಪಶುಪಾಲನ, ಪಶುವೈದ್ಯಕೀಯ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿ 7ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಹೈನುಗಾರಿಕೆ ಅವಲಂಬಿಸಿಕೊಂಡಿರುವ ರೈತರು ತಮ್ಮ ಜಾನುವಾರುಗಳ ಆರೋಗ್ಯ ಸುರಕ್ಷತೆ ಕಾಪಾಡಿಕೊಳ್ಳುವುದು ಬಹುಮುಖ್ಯ. ಪ್ರತಿ ಆರು ತಿಂಗಳಿಗೊಮ್ಮೆ ಜಾನುವಾರುಗಳಿಗೆ ಉಚಿತವಾಗಿ ಕಾಲುಬಾಯಿ ಜ್ವರದ ಲಸಿಕೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ, ಗ್ರಾಮೀಣ ಪ್ರದೇಶದ ಕೆಲ ರೈತರು ಲಸಿಕೆ ಹಾಕಿಸಿದರೆ ಹಾಲು ಕರೆಯುವ ಹಸುಗಳಿಗೆ ಜ್ವರ ಕಾಣಿಸಿಕೊಂಡು ಹಾಲಿನ ಇಳುವರಿ ಪ್ರಮಾಣ ಕಡಿಮೆಯಾಗುತ್ತದೆಂಬ ಮೂಢನಂಬಿಕೆಯಿಂದ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸದೆ ರೋಗ ಕಾಣಿಸಿಕೊಂಡ ನಂತರ ಔಷಧೋಪಚಾರ ಮಾಡಿಸಲು ಮುಂದಾಗುತ್ತಾರೆ ಎಂದರು.ಜಾನುವಾರುಗಳಿಗೆ ಕಾಲು ಬಾಯಿ ರೋಗ ಬರುವ ಮುನ್ನ ಲಸಿಕೆ ಹಾಕಿಸಿದರೆ ಯಾವುದೇ ರೀತಿಯ ಸೋಂಕು ಹರಡುವುದಿಲ್ಲ. ಲಸಿಕೆ ಹಾಕಿಸದೆ ನಿರ್ಲಕ್ಷ್ಯವಹಿಸಿದರೆ ಕಾಲುಬಾಯಿ ಜ್ವರಕ್ಕೀಡಾಗುವ ಜಾನುವಾರುಗಳು ಚೇತರಿಸಿಕೊಂಡು ಬದುಕಿದ್ದರೂ ಕೂಡ ನಂತರದಲ್ಲಿ ಗರ್ಭಧರಿಸುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ಎಚ್ಚರಿಸಿದರು.
ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಪಂ ಆವರಣದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡಿದರು.