ಹಾವೇರಿ: ನಿರಂತರವಾಗಿ ಸುರಿದ ಮಳೆಯಿಂದ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಈಗಿನ ಪರಿಸ್ಥಿತಿ ನೋಡಿದರೆ ಸಮೀಕ್ಷೆ ಮಾಡುವ ಅಗತ್ಯವಿಲ್ಲ. ಅದಕ್ಕಾಗಿ ರಾಜ್ಯ ಸರ್ಕಾರ ಕನಿಷ್ಠ ₹5 ಸಾವಿರ ಕೋಟಿ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆಗ್ರಹಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳೆಹಾನಿ ₹500 ಕೋಟಿ ಆಗಿದೆ ಎಂದು ಹೇಳಿದ್ದಾರೆ. ಇದು ರೈತರ ಬಗ್ಗೆ ಅವರ ಬೇಜವಾಬ್ದಾರಿಯನ್ನು ತೋರಿಸುತ್ತದೆ. ಮೇ ತಿಂಗಳಿಂದ ಕಳೆದ ವಾರದವರೆಗೂ ನಿರಂತರವಾಗಿ ಮಳೆ ಸುರಿದಿದೆ. ಇದರಿಂದ ಮುಂಗಾರು ಹಂಗಾಮಿನ ಸಂಪೂರ್ಣ ಬೆಳೆಹಾನಿಯಾಗಿದೆ ಎಂದರು.
ಬಿಜೆಪಿ ಸರ್ಕಾರವಿದ್ದಾಗ 2022ರಲ್ಲಿ ರಾಜ್ಯದ 11.54 ಲಕ್ಷ ರೈತರಿಗೆ ₹1187 ಕೋಟಿ ಬೆಳೆನಷ್ಟ ಪರಿಹಾರ ನೀಡಿದ್ದೇವೆ. ಆಗ ಹಾವೇರಿ ಜಿಲ್ಲೆಯ 1.30 ಲಕ್ಷ ರೈತರಿಗೆ ₹446 ಕೋಟಿ ಪರಿಹಾರ ನೀಡಿದ್ದೇವೆ. 2023ರ ಮುಂಗಾರು ಹಂಗಾಮಿನಲ್ಲಿ ರಾಜ್ಯದ 17.02 ಲಕ್ಷ ರೈತರಿಗೆ ₹1862 ಕೋಟಿ ಬಿಡುಗಡೆ ಮಾಡಿದ್ದೇವೆ. ಅದೇ ರೀತಿಯ ಜಿಲ್ಲೆಯ 3.14 ಲಕ್ಷ ರೈತರಿಗೆ ₹186.90 ಕೋಟಿ ಪರಿಹಾರ ನೀಡಲಾಗಿದೆ. ಈಗಿನ ಬೆಳೆ ಪರಿಸ್ಥಿತಿ ನೋಡಿದರೆ ಬೆಳೆ ಸಮೀಕ್ಷೆಯ ಅಗತ್ಯವೇ ಇಲ್ಲ. ಸಂಪೂರ್ಣ ಬೆಳೆಹಾನಿಯಾಗಿದ್ದು, ₹5 ಸಾವಿರ ಕೋಟಿ ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು.ರಾಜ್ಯ ಕಾಂಗ್ರೆಸ್ ಸರ್ಕಾರ ರೈತರ ಪರವಾಗಿಲ್ಲ. ಓಲೈಕೆ ರಾಜಕಾರಣ, ಗ್ಯಾರಂಟಿ ಎಂದು ಹೇಳಿಕೊಂಡು ಹೋಗುತ್ತಿರುವ ಕಾಂಗ್ರೆಸ್ ಸರ್ಕಾರ ರೈತರನ್ನು ಕಡೆಗಣಿಸಿದೆ. ರೈತರು ಬೆಳೆನಷ್ಟದಿಂದ ಕಂಗಾಲಾಗಿದ್ದು, ಮಧ್ಯಂತರ ಪರಿಹಾರವನ್ನೂ ನೀಡಿಲ್ಲ. ಸಮೀಕ್ಷೆಯನ್ನೂ ಸರಿಯಾಗಿ ಮಾಡುತ್ತಿಲ್ಲ. ಇದರಿಂದ ರೈತರಿಗೆ ಪರಿಹಾರ ಸಿಗುವ ಸಾಧ್ಯತೆಯೂ ಇಲ್ಲ. ಆದ್ದರಿಂದ ಈ ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಹಾಕುತ್ತೇನೆ. ಶೀಘ್ರದಲ್ಲೇ ಪಕ್ಷದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ಮತಾಂತರವಾಗಲಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣವಾಗಿ ಬದಲಾಗಿದ್ದಾರೆ. ಒಂದು ಕೋಮಿನ ಅತಿಯಾದ ಓಲೈಕೆಯಲ್ಲಿ ತೊಡಗಿದ್ದಾರೆ. ಚಾಮುಂಡಿ ಬೆಟ್ಟ ವಕ್ಫ್ ಆಸ್ತಿ ಎಂದು ನೋಂದಣಿಯಾದರೂ ಅಚ್ಚರಿಯಿಲ್ಲ. ಮದ್ದೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ, ಪಾಕಿಸ್ತಾನ ಜಿಂದಾಬಾದ್, ಧರ್ಮಸ್ಥಳ ಪ್ರಕರಣ ಸೇರಿದಂತೆ ಹಲವು ಘಟನೆಗಳ ಹಿಂದೆ ಕಾಂಗ್ರೆಸ್ ಕುಮ್ಮಕ್ಕಿನಿಂದಲೇ ಆಗುತ್ತಿದೆ. ಭದ್ರಾವತಿ ಶಾಸಕರು ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಿ ಹುಟ್ಟುವೆ ಎಂದು ಹೇಳಿದ್ದಾರೆ. ಅವರು ಮುಂದಿನ ಜನ್ಮದವರೆಗೆ ಕಾಯುವ ಅಗತ್ಯವಿಲ್ಲ. ಈಗಲೇ ಮುಸಲ್ಮಾನನಾಗಿ ಮತಾಂತರಗೊಳ್ಳಲಿ. ಜತೆಗೆ ಹಿಂದೂಗಳ ಒಂದು ವೋಟ್ ಬೇಡ ಎಂದು ಹೇಳಲಿ ಎಂದು ಸವಾಲು ಹಾಕಿದ ಅವರು, ಈ ರೀತಿ ಒಂದು ಕೋಮಿನ ಓಲೈಕೆ ಮಾಡುವವರಿಗೆ ನಾಚಿಕೆಯಾಗಬೇಕು. ಹಿಂದೂಗಳು ಇವರಿಗೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದರು.ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ಸಂಪೂರ್ಣವಾಗಿ ದಿವಾಳಿಯಾಗಿದೆ. 5 ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ. ಗ್ರೇಟರ್ ಬೆಂಗಳೂರು ಮಾಡಲು ಹೊರಟಿರುವ ಇವರಿಂದ ಅಲ್ಲಿಯ ರಸ್ತೆ ಗುಂಡಿ ಮುಚ್ಚಲು ಆಗುತ್ತಿಲ್ಲ. ಇನ್ನು ಹಳ್ಳಿ ರಸ್ತೆಗಳ ಸ್ಥಿತಿಯಂತೂ ಓಡಾಡಲು ಸಾಧ್ಯವಿಲ್ಲದಂತಾಗಿದೆ. ನಮ್ಮ ಸರ್ಕಾರದ ವಿರುದ್ಧ 40 ಪರ್ಸೆಂಟ್ ಎಂದು ಆರೋಪಿಸಿದ್ದರು. ಈಗ 60 ಪರ್ಸೆಂಟ್ ಆಗಿದೆ ಎಂದು ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ.ಗುತ್ತಿಗೆದಾರರು ಮನೆ, ಆಸ್ತಿ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವು ಆರಂಭಿಸಿದ ಯೋಜನೆಯನ್ನು ತಾವು ಮಾಡಿದ್ದೆಂದು ಈಗ ಉದ್ಘಾಟಿಸುತ್ತಿದ್ದಾರೆ. ಅವರೇ ಆರಂಭಿಸಿ ಮುಗಿಸಿದ ಯಾವುದಾದರೂ ಕಾಮಗಾರಿ ಇದೆಯಾ ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಎಂದು ಆರೋಪಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ, ಮಾಜಿ ಅಧ್ಯಕ್ಷ ಸಿದ್ದರಾಜ ಕಲಕೋಟಿ, ಪ್ರಮುಖರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಶೋಭಾ ನಿಸ್ಸೀಮಗೌಡ್ರ, ಪರಮೇಶಪ್ಪ ಮೇಗಳಮನಿ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ ಇದ್ದರು.
ಮತಗಳ್ಳತನ ಆರೋಪ ಮೂರ್ಖತನದ್ದುಮತಗಳ್ಳತನ ಎಂದು ದೆಹಲಿಯ ಒಬ್ಬ ಮೂರ್ಖ ಹೇಳುತ್ತಿದ್ದು, ಇಲ್ಲಿಯ ಮೂರ್ಖರೂ ಅದನ್ನೇ ಹೇಳುತ್ತಿದ್ದಾರೆ. ಇವರು ಸೋತಾಗ ಮತಗಳ್ಳತನ, ಇವಿಎಂ ತಿರುಚಿದ್ದು ಎಂದು ಹೇಳುತ್ತಾರೆ. ಮಲ್ಲಿಕಾರ್ಜುನ ಖರ್ಗೆ 2019ರಲ್ಲಿ ತಾವು ಸೋತಿದ್ದು ಮತಗಳ್ಳನದಿಂದ ಎಂದು ಹೇಳುತ್ತಾರೆ. ಈಗ ಅವರ ಅಳಿಯನೇ ಹೇಗೆ ಗೆದ್ದರು ಎಂದು ಪ್ರಶ್ನಿಸಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಮೋದಿಯವರ ವರ್ಚಸ್ಸು ಕುಗ್ಗಿಸಲು ಕಾಂಗ್ರೆಸ್ ಮಾಡುತ್ತಿರುವ ನಾಟಕ ಇದು ಎಂದು ಬಿ.ಸಿ. ಪಾಟೀಲ ಲೇವಡಿ ಮಾಡಿದರು.