ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಹಳೇ ಬಸ್ ಸಿದ್ಧಿ ವಿನಾಯಕ ಸೇವಾ ಸಮಿತಿ ವತಿಯಿಂದ ಕಳೆದ 45 ದಿನಗಳಿಂದ ಪ್ರತಿಷ್ಠಾಪನೆ ಮಾಡಲಾಗಿದ್ದ ಬೃಹತ್ ಗಣೇಶ ಮೂರ್ತಿಯನ್ನು ಭಾನುವಾರ ವಿವಿಧ ಜಾನಪದ ಕಲಾತಂಡಗಳ ಅದ್ಧೂರಿ ಮೆರವಣಿಗೆ ಮೂಲಕ ವಿಜೃಂಭಣೆಯಿಂದ ವಿಸರ್ಜನೆ ಮಾಡಲಾಯಿತು.ಮೆರವಣಿಗೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಗಣೇಶಮೂರ್ತಿಗೆ ಪುಷ್ಪಾರ್ಚನೆ ಮಾಡಿ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಮಧ್ಯಾಹ್ನ ಆರಂಭಗೊಂಡ ಗಣೇಶಮೂರ್ತಿ ಉತ್ಸವದಲ್ಲಿ ಈಶ್ವರ, ಭದ್ರಕಾಳಿ ಮೂರ್ತಿಗಳನ್ನು ಸಹ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ವಿಶೇಷವಾಗಿ ಇದೇ ಮೊದಲ ಬಾರಿ ಮಹಾರಾಷ್ಟ್ರದ ನಾಸಿಕ್ ಡೋಲು ತಂಡದ ಕಲಾವಿದರ ಪ್ರದರ್ಶನ ಗಮನ ಸೆಳೆದರು. ನಾಸಿಕ್ ಡೋಲು ತಂಡದ ಜತೆಗೆ ಹುಲಿವೇಷ, ವೀರಗಾಸೆ ಕುಣಿತ, ಕೋಳಿಕುಣಿತ, ಮಹಿಳೆಯರು ವೀರಗಾಸೆ ಕುಣಿತ, ಮಂಗಳವಾಧ್ಯ, ಡೋಲು, ಕಾಳಿಕುಣಿತ ಜತೆಗೆ ವಿಶೇಷವಾಗಿ ಹಳ್ಳಿಕಾರ್ ತಳಿಯ ಜೋಡೆತ್ತುಗಳು ಭಾಗವಹಿಸುವ ಮೂಲಕ ಪ್ರೇಕ್ಷಕರ ಮನಸೊರೆಗೊಂಡರು. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಕಲಾತಂಡಗಳ ಜತೆ ಭಾಗವಹಿಸಿ ಕಲಾವಿಧರಿಗೆ ಶುಭ ಹಾರೈಸಿದರು.ಹಳೇಬಸ್ ನಿಲ್ದಾಣದ ಗಣಪತಿ ಪೆಂಡಾಲ್‌ನಿಂದ ಆರಂಭಗೊಂಡ ಮೆರವಣಿಗೆ ಪೇಟೆಬೀದಿ ಮಾರ್ಗವಾಗಿ ಪೊಲೀಸ್ ಠಾಣೆ ರಸ್ತೆ, ಹಿರೇಮರಳಿ ವೃತ್ತ, ಬೀರಶೇಟ್ಟಹಳ್ಳಿ ರಸ್ತೆ, ಬಸ್ ಡಿಫೋವೃತ್ತ, ನಾಗಮಂಗಲ ಮುಖ್ಯರಸ್ತೆ ಮಾರ್ಗವಾಗಿ ಕೆರೆಕೋಡಿ ವೃತ್ತದ ಮೂಲಕ ಮಂಡ್ಯ ಸರ್ಕಲ್, ಐದುದೀಪದ ವೃತ್ತ, ಕೆಆರ್‌ಎಸ್ ರಸ್ತೆ, ಶಿಕ್ಷಕರ ಭವನ ರಸ್ತೆ, ವಿಜಯ ಬ್ಯಾಂಕ್ ರಸ್ತೆ, ಬಾಲಕೀಯರ ಪದವಿಪೂರ್ವ ಕಾಲೇಜು ವೃತ್ತದ ಮಾರ್ಗವಾಗಿ ಚಲಿಸಿ ಅಂತಿಮವಾಗಿ ವಿಸಿ ನಾಲೆಯಲ್ಲಿ ಕ್ರೇನ್‌ಮೂಲಕ ಬೃಹತ್ ಗಣೇಶಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.
ನಾಲೆಗೆ ನೀರು ಬಿಡಿಸಿದ ಸಿಎಸ್‌ಪಿ: ತಾಲೂಕಿನಲ್ಲಿ ಅತಿಯಾದ ಮಳೆಯಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಸಿ ನಾಲೆಯಲ್ಲಿ ನೀರನ್ನು ನಿಲ್ಲಿಸಿದ್ದರು. ಇದರಿಂದ ಗಣಪತಿ ವಿಸರ್ಜನೆಗೆ ತೊಂದರೆ ಎದುರಾಗಿತ್ತು. ನಂತರ ಸಮಿತಿ ಸದಸ್ಯರು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ವಿಸಿ ನಾಲೆಗೆ ನೀರು ಹರಿಸುವ ಮೂಲಕ ಗಣಪತಿ ವಿಸರ್ಜನೆಗೆ ಸಹಕಾರಿಯಾಗಿದ್ದಾರೆ ಎಂದು ಸಮಿತಿಯ ಸದಸ್ಯರು ಧನ್ಯವಾದ ಹೇಳಿದರು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಸಮಿತಿ ಸದಸ್ಯರು ವಿವಿಧ ಕಲಾತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಸಿ ವಿಸರ್ಜಿಸಿದ್ದಾರೆ. ಉತ್ಸವಕ್ಕೆ ಚಾಲನೆ ನೀಡಿ ದೇವರ ಕೃಪೆಗೆ ಪಾತ್ರನಾಗಿದ್ದೇನೆ. ಪೊಲೀಸ್ ಭದ್ರತೆಯಲ್ಲಿ ಶಾಂತಿಯುತ ಮೆರವಣಿಗೆ ನಡೆಸಲಾಗಿದೆ ಎಂದು ತಿಳಿಸಿದರು. ಈ ವೇಳೆ ಸುಬ್ರಹ್ಮಣ್ಯ, ಮನೋಜ್ ಸೇರಿದಂತೆ ಸಮಿತಿ ಎಲ್ಲಾ ಸದಸ್ಯರು ಭಾಗವಹಿಸಿದ್ದರು.