ಹೊಸಪೇಟೆ: ಬುಡ್ಗ ಜಂಗಮ ಕಾಲನಿಗೆ ಮಾಜಿ ಸಚಿವ ಎಚ್. ಆಂಜನೇಯ ಭೇಟಿ

KannadaprabhaNewsNetwork |  
Published : Jun 09, 2025, 12:15 AM IST
8ಎಚ್‌ಪಿಟಿ3- ಹೊಸಪೇಟೆಯ ಬುಡ್ಗ ಜಂಗಮ ಕಾಲನಿಗೆ ಮಾಜಿ ಸಚಿವ ಎಚ್. ಆಂಜನೇಯ ಅವರು ಭೇಟಿ ನೀಡಿ, ಜನರೊಂದಿಗೆ ಸಂವಾದ ನಡೆಸಿದರು. | Kannada Prabha

ಸಾರಾಂಶ

ನಗರದ ಬುಡ್ಗ ಜಂಗಮ ಕಾಲನಿಗೆ ಮಾಜಿ ಸಚಿವ ಎಚ್. ಆಂಜನೇಯ ಭೇಟಿ ನೀಡಿ, ಜನರೊಂದಿಗೆ ಸಂವಾದ ನಡೆಸಿದರು.

ಬುಡ್ಗ ಜಂಗಮರ ಹೆಸರಿನಲ್ಲಿ ಬೇರೆಯವರ ನಕಲಿ ಜಾತಿ ಪ್ರಮಾಣಪತ್ರ ಸಲ್ಲದು

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಗರದ ಬುಡ್ಗ ಜಂಗಮ ಕಾಲನಿಗೆ ಮಾಜಿ ಸಚಿವ ಎಚ್. ಆಂಜನೇಯ ಭೇಟಿ ನೀಡಿ, ಜನರೊಂದಿಗೆ ಸಂವಾದ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಬೇಡ, ಬುಡ್ಗ ಜಂಗಮ ಜಾತಿ ಜನಸಂಖ್ಯೆಯ ಹಿಂದುಳಿಯುವಿಕೆಯ ಆಧಾರದ ಮೇಲೆ ಸಿಗಬೇಕಾದ ಮೀಸಲಾತಿಯ ಪ್ರಮಾಣ ತುಂಬಾ ಕಡಿಮೆ ಇದೆ. ಪರಿಶಿಷ್ಟ ಜಾತಿಗೆ ಮೀಸಲು ಪ್ರಮಾಣ ಶೇ. 15ರಷ್ಟಿದೆ. ನಮಗೆ ಒಳ ಮೀಸಲಾತಿ ಕೊಡಿ, ವರ್ಗೀಕರಣ ಮಾಡಿ ಆ ಮೀಸಲಾತಿ ಒಳಗೆ ಬರುವ 101 ಜಾತಿಗಳಿವೆ. ಅದರಲ್ಲಿ ಪ್ರಬಲವಾಗಿ 5ರಿಂದ 6 ಸಮುದಾಯಗಳಿವೆ. ಆ ಸಮುದಾಯ ಜತೆಗೆ ನಾವು ಸ್ಪರ್ಧೆ ಮಾಡುವುದಕ್ಕೆ ಆಗುವುದಿಲ್ಲ. ಈ ಕಾರಣದಿಂದಾಗಿ ನಮಗೆ ಪ್ರತ್ಯೇಕವಾಗಿ ಒಳ ಮೀಸಲಾತಿ ವರ್ಗೀಕರಣ ಮಾಡಬೇಕು ಎಂದು ಹೇಳಿದೆವು. ನಾವು 35 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ ಎಂದರು.

ಬೇಡ ಜಂಗಮರು ನರಿ, ಬೆಕ್ಕು, ಇಲಿ ತಿನ್ನುತ್ತಾರೆ:

ವೀರಶೈವ ಲಿಂಗಾಯತ ಜಂಗಮರು ಬೇಡ ಜಂಗಮ ಜಾತಿ ಎಂದು ಜಾತಿ ಸಮೀಕ್ಷೆಯಲ್ಲಿ ಬರೆಸುತ್ತಿದ್ದಾರೆ. ಈ ವಿಷಯ ನಮ್ಮ ಗಮನಕ್ಕೆ ಬಂದಿದೆ. ಬೇಡ ಜಂಗಮ ಜನಾಂಗದವರ ಆಹಾರ ಪದ್ಧತಿಯೇ ಬೇರೆ. ಅವರು ನರಿ, ಬೆಕ್ಕು, ಇಲಿ ಇತ್ಯಾದಿ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಾರೆ. ಬೇಡ ಎಂದರೆ ಬೇಟೆ ಮಾಡುವುದು. ಹಾಗಾಗಿ ಬೇಡ ಜಂಗಮ ಎಂದಾಗಿದೆ. ಆ ಬೇಡ ಜಂಗಮ ಜತೆಗೆ ಬುಡ್ಗ ಜಂಗಮ ಎಂದು ಬಂದಿತ್ತು, ಈಗ ಬೇಡ ಜಂಗಮ ಎನ್ನುವವರು ನಶಿಸಿ ಹೋದರು. ಆಗ ಅವರು ಮಾದಿಗರ ಮನೆಯಲ್ಲಿ ಬೇಡಿ ತಿನ್ನುತ್ತಿದ್ದರು. ಕಾಡು, ಮೇಡುಗಳಲ್ಲಿ, ಬೇರೆ ಊರಿಗೆ ಹೋದಾಗ ಅಲ್ಲಿನ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುವುದು. ಅಲ್ಲಿ ಸಾರಾಯಿ ಭಟ್ಟಿಯಿಂದ ಸಾರಾಯಿ ಮಾಡಿಕೊಂಡು, ಕುಡುಕೊಂಡು ಆರಾಮಾಗಿ ಇರುತ್ತಾರೆ. ಅಲ್ಲಿ ಇವರದ್ದೇ ಆದಂತಹ ಒಂದು ಲೋಕವಾಗಿತ್ತು. ಅವರು ಮಾತಾನಾಡುವ ಭಾಷೆ ತೆಲುಗು, ಅವರು ಅಲೆಮಾರಿಗಳು, ಅವರು ಯಾವುದೇ ಆದಂತಹ ಪ್ರಾಣಿಗಳನ್ನು ಬಿಟ್ಟಿಲ್ಲ. ಇವರು ಎಲ್ಲವನ್ನು ಬೇಟೆಯಾಡಿ ತಿನ್ನುತ್ತಾರೆ ಎಂದರು.

ಈ ಜನರ ಹಕ್ಕು ಕಿತ್ತುಕೊಳ್ಳುತ್ತಾರೆ:

ಈ ಜನರ ಹಕ್ಕನ್ನು ಕಿತ್ತುಕೊಳ್ಳಲು, ಬೇಡ ಎನ್ನುವ ಜಾತಿಯನ್ನು ಇಟ್ಟುಕೊಂಡು ನಕಲಿ ಜಾತಿ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗ ಬೇಡ ಜಂಗಮರು ಎನ್ನುವವರು ಇಲ್ಲ. ಈಗ ಬೇಡ ಜಂಗಮರು ಹಾಗೂ ಬುಡ್ಗ ಜಂಗಮರು ಎನ್ನುವುದು ಸಮಾನ ಪದವಾಗಿದೆ. ಬುಡ್ಗ ಜಂಗಮರು ಆಂಧ್ರಪ್ರದೇಶದಿಂದ ಬಂದವರು. ಆದರೆ ವೀರಶೈವ ಲಿಂಗಾಯತ ಅವರು ಈ ರೀತಿಯಾದ ಮಾಂಸಹಾರ ತಿನ್ನುತ್ತಾರಾ ಎಂದು ಪ್ರಶ್ನಿಸಿದರು.

ನಕಲಿ ಜಾತಿ ಪ್ರಮಾಣಪತ್ರವನ್ನು ಪಡೆದು ನೌಕರಿ ಪಡೆಯುತ್ತಾರೆ. ಅದು ಕಾನೂನು ಬಾಹಿರ, ಇದು ಬೇರೆಯವರ ತಟ್ಟೆಗೆ ಕನ್ನ ಹಾಕಿದಂತೆ. ಇವರು ಮಾಂಸವನ್ನು ತಿನ್ನುತ್ತಾರೆ. ನೀವು ತಿನ್ನುವುದಾದರೆ ಬಂದು ತಿನ್ನಿ. ಒಂದೊಂದು ಜಾತಿಗೆ ಒಂದೊಂದು ಕುಲಶಾಸ್ತ್ರ ಅಧ್ಯಯನ ಇದೆ ಎಂದರು.

ಬುಡ್ಗಜಂಗಮ ಅನ್ನುವುದಕ್ಕೆ ಅವರದ್ದೆ ಆದ ಗುಣ ಲಕ್ಷಣಗಳು ಇವೆ. ಬೇಡ/ ಬುಡ್ಗ ಜಂಗಮ ಸಂಪ್ರದಾಯ ಪ್ರಕಾರ ಮದುವೆಯಾದ ದಿವಸ ಬೇಟೆಯನ್ನು ಕೊಯ್ಯುತ್ತಾರೆ. ರಕ್ತದ ತಿಲಕವನ್ನು ಮೊದಲಿಗೆ ಮದಲಿಂಗ ಮತ್ತು ಮದಲಗಿತ್ತಿ ಇವರಿಗೆ ಹಚ್ಚುತ್ತಾರೆ ಮತ್ತು ಮಗು ಹುಟ್ಟಿದ ಮೂರು ದಿವಸಕ್ಕೆ ಕೋಳಿ ಕೊಯ್ಯುತ್ತಾರೆ. ಅದೇ ರೀತಿಯಾಗಿ ಸಾವನ್ನಪ್ಪಿದಾಗ ಸತ್ತ ಮೂರು ದಿವಸಕ್ಕೆ ಪಿಂಡ ಪ್ರದಾನ ಮಾಡಿ, ಎಲ್ಲ ತರಹದ ಮಾಂಸದ ಅಡುಗೆ ಮಾಡಿ ಕೂಳು, ನೀರು ಹಾಕುತ್ತಾರೆ ಎಂದರು.

ಅಲೆಮಾರಿ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಣ್ಣ ಮಾರೆಪ್ಪ, ಮುಖಂಡರಾದ ಯರ‍್ರಿಸ್ವಾಮಿ, ನಿಂಬಗಲ್ ರಾಮಕೃಷ್ಣ, ಸಿ.ಆರ್. ಭರತ್, ಶೇಷು, ಬಸವರಾಜ, ಕರಿಯಪ್ಪ, ಸಂತೋಷ್ ಕೂಡ್ಲಿಗಿ, ಮಾರೆಪ್ಪ, ಜಂಬಣ್ಣ, ಜಂಬಕ್ಕ, ಯಲ್ಲಮ್ಮ, ಲಕ್ಷ್ಮಮ್ಮ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ