ಹಂಪಿಗೆ ಮೂರು ದಿನದಲ್ಲಿ ಹರಿದು ಬಂದ ಒಂದು ಲಕ್ಷ ಪ್ರವಾಸಿಗರು!

KannadaprabhaNewsNetwork |  
Published : Jun 09, 2025, 12:13 AM IST
8ಎಚ್‌ಪಿಟಿ1- ಹಂಪಿಯ ಉಗ್ರ ನರಸಿಂಹ ಸ್ಮಾರಕದ ಬಳಿ ಕಂಡು ಬಂದ ಪ್ರವಾಸಿಗರು. | Kannada Prabha

ಸಾರಾಂಶ

ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, 3 ದಿನಗಳಲ್ಲಿ ಹಂಪಿಗೆ ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ.

ಪ್ರವಾಸೋದ್ಯಮ ನೆಚ್ಚಿಕೊಂಡವರಿಗೆ ಅನುಕೂಲ

ವಾರಾಂತ್ಯದಲ್ಲಿ ಹೆಚ್ಚು ಪ್ರವಾಸಿಗರುಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಶ್ವವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, 3 ದಿನಗಳಲ್ಲಿ ಹಂಪಿಗೆ ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆ ಪ್ರವಾಸೋದ್ಯಮ ನೆಚ್ಚಿಕೊಂಡಿರುವವರಿಗೂ ಅನುಕೂಲವಾಗಿದೆ.

ಹಂಪಿಗೆ ಶುಕ್ರವಾರ 20 ಸಾವಿರ ಪ್ರವಾಸಿಗರು ಬಂದರೆ, ಶನಿವಾರ 40 ಸಾವಿರ ಮತ್ತು ಭಾನುವಾರ 40 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಮೂರು ದಿನಕ್ಕೆ ಒಂದು ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸಿದ ಹಿನ್ನೆಲೆ ಹಂಪಿ ಪ್ರವಾಸೋದ್ಯಮ ಕೂಡ ಭಾರೀ ಚೇತರಿಸಿಕೊಂಡಿದೆ. ಹಂಪಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿರುವುದರಿಂದ ಪ್ರವಾಸಿ ಮಾರ್ಗದರ್ಶಿಗಳು, ಹೋಟೆಲ್‌, ರೆಸಾರ್ಟ್‌ ಮಾಲೀಕರು ಮತ್ತು ಸಿಬ್ಬಂದಿಗೂ ಅನುಕೂಲ ಆಗಿದೆ. ಅಲ್ಲದೇ, ಆಟೋ, ಕಾರು ಚಾಲಕರು ಮತ್ತು ಅಂಗಡಿಕಾರರಿಗೂ ಬದುಕಿನ ಬಂಡಿ ನಡೆಸಲು ಉದ್ಯೋಗ ದೊರೆಯುತ್ತಿದೆ. ಹಂಪಿಗೆ ಪ್ರವಾಸಿಗರು ಭಾರೀ ಪ್ರಮಾಣದಲ್ಲಿ ಬರುತ್ತಿರುವುದರಿಂದ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ. ಈಗ ಮಳೆಗಾಲ ಆರಂಭವಾಗಿದ್ದು, ಹಂಪಿ ಸ್ಮಾರಕಗಳನ್ನು ನೋಡುವ ಸೊಬಗವೇ ವಿಶಿಷ್ಟವಾಗಿರುತ್ತದೆ. ಹಾಗಾಗಿ ಪ್ರವಾಸಿಗರ ದಂಡು ಹಂಪಿಯತ್ತ ಧಾವಿಸುತ್ತಿದೆ.

ಹಂಪಿಗೆ ಪ್ರವಾಸಿಗರ ದಂಡು:

ಜಿ- 20 ಶೃಂಗಸಭೆ ಬಳಿಕ ಹಂಪಿ ಸ್ಮಾರಕಗಳ ವೀಕ್ಷಣೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಅದರಲ್ಲೂ ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಬೆಂಗಳೂರಿನಿಂದ ಟೆಕ್ಕಿಗಳ ದಂಡೇ ಹರಿದು ಬರುತ್ತಿದ್ದು, ಹಂಪಿಯ ಐತಿಹಾಸಿಕ ಸ್ಮಾರಕಗಳನ್ನು ಕಂಡು ಸಂತಸಗೊಳ್ಳುತ್ತಿದ್ದಾರೆ.

ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ವಿಜಯ ವಿಠ್ಠಲ ದೇವಾಲಯ, ಕಲ್ಲಿನತೇರು, ಪುರಂದರದಾಸರ ಮಂಟಪ, ಕಮಲ ಮಹಲ್‌, ಮಹಾನವಮಿ ದಿಬ್ಬ, ಹಜಾರರಾಮ ದೇವಾಲಯ, ಕಡಲೆ ಕಾಳು, ಸಾಸಿವೆ ಕಾಳು ಗಣಪತಿ ಮಂಟಪಗಳು, ಶ್ರೀಕೃಷ್ಣ ದೇವಾಲಯ, ಅಚ್ಯುತರಾಯ ದೇವಾಲಯ, ಸೀತೆ ಸೆರಗು, ವಾಲಿ, ಸುಗ್ರೀವ ಗುಹೆ, ಉಗ್ರ ನರಸಿಂಹ, ಬಡವಿ ಲಿಂಗ, ಕೋದಂಡರಾಮ ದೇವಾಲಯ, ಮಾಲ್ಯವಂತ ರಘುನಾಥ ದೇವಾಲಯ, ನೆಲಸ್ತರದ ಶಿವ ದೇವಾಲಯ, ಕಮಲಾಪುರದ ಪ್ರಾಚ್ಯವಸ್ತು ಸಂಗ್ರಹಾಲಯ, ಪಟ್ಟಾಭಿರಾಮ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳು ಹಾಗು ಬಜಾರ್‌ಗಳನ್ನು ಪ್ರವಾಸಿಗರು ವೀಕ್ಷಿಸಿದರು.

ರಾಜ್ಯ ಸೇರಿದಂತೆ ತೆಲಂಗಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ದಿಲ್ಲಿ, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಿಂದಲೂ ಪ್ರವಾಸಿಗರು ಹಂಪಿ ವೀಕ್ಷಣೆಗೆ ಆಗಮಿಸಿದ್ದಾರೆ.

ಕೊರೋನಾ ಮತ್ತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಪ್ರವಾಸೋದ್ಯಮಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಹಾಗಾಗಿ ಪ್ರವಾಸಿಗರು ಕೂಡ ಸಂತಸದಿಂದಲೇ ಆಗಮಿಸಿ ಹಂಪಿ ಸ್ಮಾರಕಗಳನ್ನು ವೀಕ್ಷಿಸುತ್ತಿದ್ದಾರೆ. ಹಂಪಿಯಲ್ಲಿ ಪೊಲೀಸರು ಕೂಡ ಬಂದೋಬಸ್ತ್‌ ಒದಗಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ