ಬಿತ್ತನೆ ಬೀಜ ಖರೀದಿಗೂ ಮುನ್ನ ರೈತರು ಜಾಗೃತರಾಗಲಿ

KannadaprabhaNewsNetwork |  
Published : Jun 09, 2025, 12:10 AM IST
ರಾಣಿಬೆನ್ನೂರಿನ ಅಗ್ರೋ ಕೇಂದ್ರಗಳಿಗೆ ಭೇಟಿ ನೀಡಿ ಖುಲ್ಲಾ ಅಥವಾ ನಕಲಿ ಬೀಜಗಳ ಕುರಿತು ಕೃಷಿ ಅಧಿಕಾರಿಗಳು ಪರಿಶೀಲಿಸಿದರು. | Kannada Prabha

ಸಾರಾಂಶ

ನಗರದಲ್ಲಿ ಈ ಹಿಂದೆ ಕಳಪೆ ಹಾಗೂ ಖುಲ್ಲಾ ಬೀಜ ಮಾರಾಟ ವ್ಯಾಪಕವಾಗಿ ಹರಡಿಕೊಂಡಿತ್ತು. ಕೃಷಿ ಅಧಿಕಾರಿಗಳ ಹಾಗೂ ಜಾಗೃತ ದಳ ವ್ಯಾಪಕ ದಾಳಿಯಿಂದ ಕಡಿವಾಣ ಬಿದ್ದಿದೆ. ಆದರೂ ಅಧಿಕಾರಿಗಳ ಕಣ್ಣು ಮರೆಮಾಚಿ ಮಾರಾಟ ನಡೆಯುತ್ತಿದೆ.

ಬಸವರಾಜ ಸರೂರ

ರಾಣಿಬೆನ್ನೂರು: ಏಷ್ಯಾ ಖಂಡದಲ್ಲಿಯೇ ರಾಣಿಬೆನ್ನೂರು ಬೀಜೋತ್ಪಾದನೆಗೆ ಹೆಸರಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ರೈತರು ಬೀಜ ಖರೀದಿಗೆ ನಗರಕ್ಕೆ ಆಗಮಿಸುತ್ತಾರೆ. ಆದರೆ ಅಸಲಿ ಬೀಜಗಳ ಜತೆ ಖುಲ್ಲಾ ಅಥವಾ ನಕಲಿ ಬೀಜಗಳ ಮಾರಾಟಗಾರರು ಇಲ್ಲಿದ್ದು, ರೈತರು ಸ್ವಲ್ಪ ಯಾಮಾರಿದರೂ ಹಾನಿ ಕಟ್ಟಿಟ್ಟ ಬುತ್ತಿ. ನಗರದಲ್ಲಿ ಈ ಹಿಂದೆ ಕಳಪೆ ಹಾಗೂ ಖುಲ್ಲಾ ಬೀಜ ಮಾರಾಟ ವ್ಯಾಪಕವಾಗಿ ಹರಡಿಕೊಂಡಿತ್ತು. ಕೃಷಿ ಅಧಿಕಾರಿಗಳ ಹಾಗೂ ಜಾಗೃತ ದಳ ವ್ಯಾಪಕ ದಾಳಿಯಿಂದ ಕಡಿವಾಣ ಬಿದ್ದಿದೆ. ಆದರೂ ಅಧಿಕಾರಿಗಳ ಕಣ್ಣು ಮರೆಮಾಚಿ ಮಾರಾಟ ನಡೆಯುತ್ತಿದೆ.ಬೀಜಕ್ಕೆ ಹೆಚ್ಚಿದ ಬೇಡಿಕೆ: ಪ್ರಸಕ್ತ ವರ್ಷ ಈಗಾಗಲೇ ಮಳೆ ಸುರಿದಿದ್ದು, ಮೇ ತಿಂಗಳ ಕೊನೆಯಿಂದಲೇ ರೈತರು ಬಿತ್ತನೆಗೆ ಮುಂದಾಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಬೀಜ, ಗೊಬ್ಬರ ಖರೀದಿಗೆ ತಯಾರಿ ನಡೆಸಿದ್ದಾರೆ. ಆದರೆ ಮಾರುಕಟ್ಟೆಗೆ ಈಗಾಗಲೇ ಹೈದರಾಬಾದ್ ಸೇರಿ ಬೇರೆ ಬೇರೆ ರಾಜ್ಯಗಳಿಂದ ಖುಲ್ಲಾ ಹಾಗೂ ಕಳಪೆ ಬೀಜ ತರಿಸಿಕೊಂಡು ನಕಲಿ ಪ್ಯಾಕೆಟ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬರುತ್ತಿದೆ. ಹೀಗಾಗಿ ರೈತರು ಬೀಜ ಖರೀದಿಸುವ ಮುನ್ನ ಆಲೋಚನೆ ಮಾಡಬೇಕಾಗಿದೆ.ನಕಲಿ ಪ್ಯಾಕೆಟ್: ನಗರ ಹಾಗೂ ತಾಲೂಕಿನ ಗ್ರಾಮೀಣ ಭಾಗದಲ್ಲಿ ಗೋದಾಮು ಮಾಡಿಕೊಂಡು ಪ್ರಮಾಣೀಕೃತವಲ್ಲದ ಖುಲ್ಲಾ ಬೀಜಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಖುಲ್ಲಾ ಬೀಜಗಳನ್ನು ತರುವ ಖದೀಮರು ಅವುಗಳನ್ನು ಬೇರೆ ಬೇರೆ ಕಂಪನಿಗಳ ಹೆಸರಿನ ನಕಲಿ ಪ್ಯಾಕೆಟ್‌ಗಳಲ್ಲಿ ಹಾಕಿ ಮಾರಾಟಕ್ಕೆ ಸಿದ್ಧಪಡಿಸುತ್ತಾರೆ ಎನ್ನುವ ಆರೋಪವಿದೆ. ಇದಲ್ಲದೆ ಕೆಲವರು ರಾಜಾರೋಷವಾಗಿ ಗೋಣಿ ಚೀಲಗಳಲ್ಲಿ ಖುಲ್ಲಾ ಬೀಜಗಳನ್ನು ಮಾರಾಟ ರೈತರಿಗೆ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.ರಾಣಿಬೆನ್ನೂರಿಗೆ ಜಿಲ್ಲೆಯ ರೈತರು ಮಾತ್ರವಲ್ಲದೆ ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ಹೊಸಪೇಟೆ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಕೊಪ್ಪಳ ಸೇರಿ ರಾಜ್ಯದ ಮೂಲೆ ಮೂಲೆಯಿಂದಲೂ ಮೆಕ್ಕೆಜೋಳದ ಬೀಜ ಖರೀದಿಸಲು ಬರುತ್ತಾರೆ. ಹಾವೇರಿ ಜಿಲ್ಲೆಯ ರೈತರನ್ನು ಹೊರತುಪಡಿಸಿ ಬೇರೆ ಜಿಲ್ಲೆಯಿಂದ ಬರುವ ರೈತರು ಹೆಚ್ಚಾಗಿ ನಕಲಿ ಬೀಜದ ಮೋಸಕ್ಕೆ ಬಲಿಯಾಗುತ್ತಾರೆ. ಹೀಗಾಗಿ ಬೀಜ ಖರೀದಿಸುವ ಮುನ್ನ ರೈತರು ಅಧಿಕೃತ ಎನ್ನುವುದನ್ನು ಖಾತರಿಪಡಿಸಿಕೊಂಡು ಖರೀದಿಸಬೇಕಾಗಿದೆ.ತಾಪಂ ಸಭೆಯಲ್ಲಿ ಚರ್ಚೆ: ಇತ್ತೀಚೆಗೆ (ಜೂ. 6ರಂದು) ಜರುಗಿದ ತಾಪಂ ಸಾಮಾನ್ಯ ಸಭೆಯಲ್ಲಿಯೂ ಖುಲ್ಲಾ ಬೀಜಗಳ ಕುರಿತು ಸ್ವತಃ ಶಾಸಕ ಪ್ರಕಾಶ ಕೋಳಿವಾಡ ಅವರೇ ವಿಷಯ ಪ್ರಸ್ತಾಪ ಮಾಡಿದರು. ತಾಲೂಕಿನಲ್ಲಿ ಎಲ್ಲಿಯೇ ಖುಲ್ಲಾ ಬೀಜಗಳ ಸಂಗ್ರಹ ಅಥವಾ ಮಾರಾಟದ ಬಗ್ಗೆ ಮಾಹಿತಿ ದೊರೆತಲ್ಲಿ ಯಾವುದೇ ಮುಲಾಜಿಲ್ಲದೆ ಅಂತಹ ವರ್ತಕರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಹಾಯಕ ಕೃಷಿ ನಿರ್ದೇಶಕರಿಗೆ ಸಭೆಯಲ್ಲಿ ಆದೇಶ ನೀಡಿದರು. ಮೋಸ ಹೋಗಬಾರದು: ಈಗಾಗಲೇ ತಾಲೂಕಿನಲ್ಲಿ ಖುಲ್ಲಾ ಬೀಜದ ಮಾರಾಟದ ಬಗ್ಗೆ ಪರಿಶೀಲನೆ ಮಾಡಲಾಗಿದ್ದು, ಎಲ್ಲಿಯೂ ಖುಲ್ಲಾ ಬೀಜದ ಮಾರಾಟ ಕಂಡುಬಂದಿಲ್ಲ. ಅಂತಹ ಬಿತ್ತನೆ ಬೀಜ ಮಾರಾಟ ಮಾಡಬಾರದು ಎಂದು ಈಗಾಗಲೇ ಎಲ್ಲ ಅಂಗಡಿಕಾರರಿಗೆ ತಿಳಿಸಲಾಗಿದೆ. ಖುಲ್ಲಾ ಬೀಜದ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ಅಧಿಕಾರಿಗಳಿಗೆ ತಿಳಿಸಬೇಕು. ಖುಲ್ಲಾ ಬೀಜ ಖರೀದಿ ಮೋಸ ಹೋಗಬಾರದು. ರೈತರು ಯಾವುದೇ ಅಂಗಡಿಯಲ್ಲಿ ಬೀಜ ಖರೀದಿಸಿದರೂ ಕಡ್ಡಾಯವಾಗಿ ಬಿಲ್ ತೆಗೆದುಕೊಳ್ಳಬೇಕು ಎಂದುಸಹಾಯಕ ಕೃಷಿ ನಿರ್ದೇಶಕರಾದ ಶಾಂತಮಣಿ ಜಿ. ತಿಳಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ