ಸೆಮಿನಾರ್‌ ತಪ್ಪಿಸಲು ಕಾಲೇಜಿಗೆ ಬಾಂಬ್‌ ಬೆದರಿಕೆ ಕರೆ ಮಾಡಿದ್ದ ವಿದ್ಯಾರ್ಥಿನಿ!

KannadaprabhaNewsNetwork |  
Published : Jun 09, 2025, 12:08 AM IST
32 | Kannada Prabha

ಸಾರಾಂಶ

ಜೂನ್‌ 4 ರಂದು ಬೆಳಗ್ಗೆ 8.45 ರ ಸುಮಾರಿಗೆ ಆಸ್ಪತ್ರೆಯ ಆವರಣದಲ್ಲಿ ಬಾಂಬ್‌ ಇಡಲಾಗಿದೆ ಎಂದು ಐದು ಬಾರಿ ಕರೆ ಮಾಡಿ ಬೆದರಿಕೆ ಬಂದಿತ್ತು. ಅನಾಮಧೇಯ ವ್ಯಕ್ತಿಯೊಬ್ಬರ ಬಾಂಬ್‌ ಬೆದರಿಕೆಯ ಕರೆಯಿಂದ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ಹೊರವಲಯದ ದೇರಳಕಟ್ಟೆಯ ಖಾಸಗಿ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಬಾಂಬ್‌ ಬೆದರಿಕೆಯೊಡ್ಡಿದ ಪ್ರಕರಣ ನಾಟಕೀಯ ತಿರುವು ಪಡೆದಿದೆ. ಸೆಮಿನಾರ್‌ ತಪ್ಪಿಸಲು ಹುಸಿ ಕರೆ ಮಾಡಿದ ಆರೋಪದ ಮೇಲೆ ಅದೇ ಕಾಲೇಜಿನ ಸ್ನಾತಕೋತ್ತರ (ಪಿಜಿ) ವೈದ್ಯಕೀಯ ವಿದ್ಯಾರ್ಥಿನಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಡಾ.ಚಲಸಾನಿ ಮೋನಿಕಾ ಚೌಧರಿ ಬಂಧಿತ ಆರೋಪಿ. ವಿಶೇಷ ಪೊಲೀಸ್‌ ತಂಡ ರಚಿಸಿ, ತಾಂತ್ರಿಕ ವಿಶ್ಲೇಷಣೆ ನಡೆಸಿದಾಗ ದೂರು ನೀಡಿದ ವಿದ್ಯಾರ್ಥಿನಿಯೇ ಪ್ರಕರಣದ ಆರೋಪಿ ಎಂಬುದು ಬಹಿರಂಗವಾಗಿದೆ.ಜೂನ್‌ 4 ರಂದು ಬೆಳಗ್ಗೆ 8.45 ರ ಸುಮಾರಿಗೆ ಆಸ್ಪತ್ರೆಯ ಆವರಣದಲ್ಲಿ ಬಾಂಬ್‌ ಇಡಲಾಗಿದೆ ಎಂದು ಐದು ಬಾರಿ ಕರೆ ಮಾಡಿ ಬೆದರಿಕೆ ಬಂದಿತ್ತು. ಅನಾಮಧೇಯ ವ್ಯಕ್ತಿಯೊಬ್ಬರ ಬಾಂಬ್‌ ಬೆದರಿಕೆಯ ಕರೆಯಿಂದ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು.ಬೆದರಿಕೆ ಕರೆಯ ನಂತರ 25-30 ಪೊಲೀಸ್‌ ಸಿಬ್ಬಂದಿ, ಬಾಂಬ್‌ ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನು ಒಳಗೊಂಡ ಬೃಹತ್‌ ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಆಸ್ಪತ್ರೆ ಕಟ್ಟಡ, ಪಾಕಿಂರ್ಗ್‌ ಪ್ರದೇಶ ಮತ್ತು ಸುತ್ತಮುತ್ತಲಿನ ಆವರಣಗಳನ್ನು ಸುಮಾರು 10 ಗಂಟೆಗಳ ಕಾಲ ಸಂಪೂರ್ಣವಾಗಿ ಶೋಧ ನಡೆಸಿದ್ದಾರೆ. ಆದರೆ ಯಾವುದೇ ಸ್ಫೋಟಕ ವಸ್ತುಗಳು ಅಥವಾ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿರಲಿಲ್ಲ. ನಂತರ, ಮೋನಿಕಾ ಚೌಧರಿಯೇ ನಮ್ಮ ಕಾಲೇಜಿಗೆ ಬಾಂಬ್‌ ಬೆದರಿಕೆ ಕರೆ ಬಂದಿದೆ ಎಂದು ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ವೇಳೆ ದೂರು ನೀಡಿದ ವಿದ್ಯಾರ್ಥಿನಿಯೇ ಬೆದರಿಕೆ ಹಾಕಿರುವುದು ತಿಳಿದು ಬಂದಿದೆ. ನಿಗದಿತ ಸೆಮಿನಾರ್‌ ತಪ್ಪಿಸುವ ಉದ್ದೇಶದಿಂದ ಡಾ.ಮೋನಿಕಾ ಈ ಕರೆಗಳನ್ನು ಮಾಡಿದ್ದಾರೆ ಎಂದು ತನಿಖೆ ವೇಳೆ ಗೊತ್ತಾಗಿದೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಕರೆ ಮಾಡಲು ಬಳಸಿದ್ದ ಮೊಬೈಲ್‌ ಫೋನ್‌ ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''