ಇ-ಆಸ್ತಿ ಮಾಡಿಸಲು ಹು-ಧಾ ಅವಳಿ ನಿವಾಸಿಗಳ ನಿರಾಸಕ್ತಿ!

KannadaprabhaNewsNetwork |  
Published : Jun 09, 2025, 12:06 AM IST
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ. | Kannada Prabha

ಸಾರಾಂಶ

ಮಹಾನಗರ ಪಾಲಿಕೆಯು ಇ-ಆಸ್ತಿ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆ ಉತ್ತೇಜಿಸಲು ಮತ್ತು ಸರಾಗಗೊಳಿಸುವ ಸಲುವಾಗಿ ಇ-ಆಸ್ತಿ ಮೇಳಗಳನ್ನು ಪ್ರಾರಂಭಿಸಿತ್ತು. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ವಲಯ ಕಚೇರಿಗಳಲ್ಲಿ ಇಂತಹ ಮೇಳಗಳಿಗೆ ಪ್ರತಿಕ್ರಿಯೆ ನೀರಸವಾಗಿತ್ತು. ಇದರಿಂದ ಇಂತಹ ಮೇಳ ನಿಲ್ಲಿಸಬೇಕಾಯಿತು. ಈಗ, ಪಾಲಿಕೆ ಸಿಬ್ಬಂದಿ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಅರ್ಜಿ ನಮೂನೆಗಳನ್ನು ವಿತರಿಸಲು ಮನೆಗಳಿಗೆ ಭೇಟಿ ನೀಡುವ ಸ್ಥಿತಿ ಬಂದಿದೆ.

ಬಸವರಾಜ ಹಿರೇಮಠ

ಧಾರವಾಡ: ಆಸ್ತಿ ಖರೀದಿ-ಮಾರಾಟ ಸೇರಿದಂತೆ ಆಸ್ತಿಗಳ ವಿಷಯವಾಗಿ ಕಾರ್ಯಾಚರಣೆಗೆ ಇ-ಆಸ್ತಿಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದರೂ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನರು ಇ-ಆಸ್ತಿ ಮಾಡಿಸಲು ನಿರಾಸಕ್ತಿ ತೋರುತ್ತಿದ್ದಾರೆ.

ಈ ಡಿಜಿಟಲ್ ಆಸ್ತಿ ದಾಖಲೆ ವ್ಯವಸ್ಥೆ ಉತ್ತೇಜಿಸುವ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆಯೇ ಅರ್ಜಿಗಳನ್ನು ಸ್ವೀಕರಿಸುವ ಹಾಗೂ ಇ-ಆಸ್ತಿ ನೀಡುವ ಪ್ರಕ್ರಿಯೆ ಶುರುವಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಆಸ್ತಿ ಮಾಲೀಕರು ಪ್ರತಿಕ್ರಿಯೆ ನೀಡುತ್ತಿಲ್ಲ. ಇಲ್ಲಿಯವರೆಗೂ ಅಧಿಕೃತ ಇರುವ ಆಸ್ತಿಗಳಲ್ಲಿ ಶೇ. 50ರಷ್ಟು ಸಹ ಆಸ್ತಿಗಳು ಇ-ಆಸ್ತಿಗೆ ಒಳಗೊಳ್ಳುತ್ತಿಲ್ಲ. ಇ-ಆಸ್ತಿ ಪಡೆಯಲು ಅಗತ್ಯ ದಾಖಲೆ ನೀಡುವಲ್ಲಿ ವಿಫಲತೆ ಆಗುವ ಆಸ್ತಿ ಮಾಲೀಕರು, ದೀರ್ಘ ಪರಿಶೀಲನಾ ಪ್ರಕ್ರಿಯೆ, ಪ್ರಮಾಣಪತ್ರ ಪಡೆಯುವಲ್ಲಿ ವಿಳಂಬ, ತಾಂತ್ರಿಕ ಸಮಸ್ಯೆಗಳು ಮತ್ತು ನಾಗರಿಕರಲ್ಲಿ ಆಸಕ್ತಿಯ ಕೊರತೆಯೇ ಇದಕ್ಕೆ ಕಾರಣ ಎಂದು ತಿಳಿದು ಬಂದಿದೆ.

ಮಹಾನಗರ ಪಾಲಿಕೆಯು ಇ-ಆಸ್ತಿ ಅರ್ಜಿಗಳನ್ನು ಸ್ವೀಕರಿಸುವ ಪ್ರಕ್ರಿಯೆ ಉತ್ತೇಜಿಸಲು ಮತ್ತು ಸರಾಗಗೊಳಿಸುವ ಸಲುವಾಗಿ ಇ-ಆಸ್ತಿ ಮೇಳಗಳನ್ನು ಪ್ರಾರಂಭಿಸಿತ್ತು. ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ವಲಯ ಕಚೇರಿಗಳಲ್ಲಿ ಇಂತಹ ಮೇಳಗಳಿಗೆ ಪ್ರತಿಕ್ರಿಯೆ ನೀರಸವಾಗಿತ್ತು. ಇದರಿಂದ ಇಂತಹ ಮೇಳ ನಿಲ್ಲಿಸಬೇಕಾಯಿತು. ಈಗ, ಪಾಲಿಕೆ ಸಿಬ್ಬಂದಿ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಅರ್ಜಿ ನಮೂನೆಗಳನ್ನು ವಿತರಿಸಲು ಮನೆಗಳಿಗೆ ಭೇಟಿ ನೀಡುವ ಸ್ಥಿತಿ ಬಂದಿದೆ ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ಹು-ಧಾ ಅವಳಿ ನಗರಗಳಲ್ಲಿ 1.20 ಲಕ್ಷ ಖಾಲಿ ನಿವೇಶನಗಳು ಸೇರಿದಂತೆ ಒಟ್ಟು 3.39 ಲಕ್ಷ ಆಸ್ತಿಗಳು ಪಾಲಿಕೆಯ ಆಸ್ತಿ ನೋಂದಣಿಯಲ್ಲಿವೆ. ಅವುಗಳಲ್ಲಿ ಸುಮಾರು 45,000 ಆಸ್ತಿಗಳು ಅನಧಿಕೃತ ವಿನ್ಯಾಸ ಅಥವಾ ಇ-ಆಸ್ತಿಗೆ ಅಗತ್ಯ ದಾಖಲೆಗಳ ಕೊರತೆಯಿದೆ. ಇಲ್ಲಿಯವರೆಗೆ 1.13 ಲಕ್ಷ ಆಸ್ತಿಗಳಿಗೆ ಇ-ಆಸ್ತಿ ದಾಖಲೆಗಳನ್ನು ನೀಡಲಾಗಿದೆ ಎಂದು ಮಹಾನಗರ ಪಾಲಿಕೆಯ ಉಪ ಆಯುಕ್ತ (ಕಂದಾಯ) ಅಶೋಕ್ ಗುರಾನಿ ಪತ್ರಿಕೆಗೆ ಮಾಹಿತಿ ನೀಡಿದರು.

ಹಲವು ಖಾಲಿ ನಿವೇಶನಗಳನ್ನು ಹೂಡಿಕೆ ಉದ್ದೇಶಗಳಿಗಾಗಿ ಖರೀದಿಸಲಾಗುತ್ತದೆ. ಈ ಪೈಕಿ ಕೆಲವು ನಾಗರಿಕರು ತಮ್ಮ ಆಸ್ತಿಗಳನ್ನು ಮಾರಾಟ ಮಾಡಲು ಅಥವಾ ಕಟ್ಟಡಗಳನ್ನು ನಿರ್ಮಿಸಲು ಬಯಸಿದಾಗ ಮಾತ್ರ ಇ-ಆಸ್ತಿ ನೋಂದಣಿಗೆ ಬರುತ್ತಾರೆ. ಇ-ಆಸ್ತಿ ಒಂದು ಪ್ರಮುಖ ದಾಖಲೆಯಾಗಿರುವುದರಿಂದ ದಾಖಲೆಗಳನ್ನು ಸಹ ಸರಿಯಾಗಿ ಪರಿಶೀಲಿಸಬೇಕು ಮತ್ತು ಇದು ಸಮಯ ತೆಗೆದುಕೊಳ್ಳುತ್ತದೆ. ಆಸ್ತಿ ಮಾಲೀಕರು ನಿರೀಕ್ಷಿತ ಪ್ರತಿಕ್ರಿಯೆ ತೋರಿಸದಿರಲು ಇವು ಕಾರಣಗಳಾಗಿರಬಹುದು ಎಂದವರು ಹೇಳಿದರು.

ಇ-ಆಸ್ತಿ ಪ್ರಮಾಣಪತ್ರ ಪಡೆಯಲು ವಿಳಂಬ ಆಗುವುದಕ್ಕೆ ಬರೀ ಆಸ್ತಿ ಮಾಲೀಕರು ಮಾತ್ರ ಕಾರಣಲ್ಲ. ಹಲವಾರು ದಾಖಲೆಗಳು ಬೇಕಾಗಿರುವುದರಿಂದ ಇ-ಆಸ್ತಿ ಪಡೆಯುವುದು ಸುಲಭದ ಕೆಲಸವಲ್ಲ, ವಲಯ ಕಚೇರಿಗಳಲ್ಲಿರುವ ಪಾಲಿಕೆ ಸಿಬ್ಬಂದಿ ಸರಿಯಾಗಿ ಮಾರ್ಗದರ್ಶನ ನೀಡುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಹಾಗೂ ನವೀಕರಿಸಿದ ಸಾಫ್ಟ್‌ವೇರ್‌ ಸಹ ಕಾರಣ ಎಂದು ಶ್ರೀನಗರದ ನಿವಾಸಿ ಶಿವು ಹಲಗಿ ಆರೋಪಿಸಿದರು.

ಆದ್ಯತೆ ಮೇರೆಗೆ ಪ್ರಕ್ರಿಯೆ: ಇ-ಆಸ್ತಿ ಒಂದು ಸೂಕ್ಷ್ಮ ದಾಖಲೆಯಾಗಿದ್ದು, ಇದನ್ನು ಆಸ್ತಿ ವಹಿವಾಟುಗಳಿಗೆ ಬಳಸಲಾಗುತ್ತದೆ, ಆದ್ದರಿಂದ ನಾವು ನಾಗರಿಕರನ್ನು ಆತುರದಿಂದ ಅರ್ಜಿ ಸಲ್ಲಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ನಾಗರಿಕರು ಅಗತ್ಯವಿರುವ ಎಲ್ಲ ಆಸ್ತಿ-ಸಂಬಂಧಿತ ದಾಖಲೆಗಳೊಂದಿಗೆ ವಲಯ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ ಮತ್ತು ಅರ್ಜಿಗಳ ಪ್ರಕ್ರಿಯೆಗೆ 45 ದಿನಗಳು ಬೇಕಾಗುತ್ತದೆ. ಅರಿವು ಅಥವಾ ತುರ್ತು ಇರುವವರು ಅದನ್ನು ಆದ್ಯತೆ ಮೇರೆಗೆ ಮಾಡಲಾಗುತ್ತಿದೆ ಎಂದು ಪಾಲಿಕೆ ಹೆಚ್ಚುವರಿ ಆಯುಕ್ತ ವಿಜಯಕುಮಾರ ಆರ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌