ಕೊಪ್ಪಳ: ತಾಲೂಕಿನ ಕುಟಗನಳ್ಳಿ ಗ್ರಾಮದಲ್ಲಿ ಭಾನುವಾರ ಮೃಗಶಿರಾ ಮಳೆ ಸೇರುವ ಸಮಯದಲ್ಲಿ ಸಹಸ್ರಾರು ಅಸ್ತಮಾ ರೋಗಿಗಳು ಔಷಧ ಸ್ವೀಕಾರ ಮಾಡಿದರು.
ಔಷಧಿ ವಿತರಣೆ ಮಾಡಿದ ಬಳಿಕ ಅಶೋಕ ಕುಲಕರ್ಣಿ ಅವರು ಕೆಲವೊಂದು ಸಂದೇಶ ನೀಡುತ್ತಾರೆ. ಅಲ್ಲದೆ ಆಹಾರ ಸೇವನೆಯ ಕುರಿತು ಸಲಹೆ ನೀಡುತ್ತಾರೆ. ಇದಾದ ಮೇಲೆ ಗಂಟೆ ಬಾರಿಸುತ್ತಿದ್ದಂತೆ ಔಷಧ ಸ್ವೀಕಾರ ಮಾಡಲಾಗುತ್ತದೆ.
ನಾನಾ ರಾಜ್ಯದಿಂದ ಆಗಮನ:ಇಲ್ಲಿ ಅಸ್ತಮಾ ರೋಗಕ್ಕೆ ಔಷಧ ಪಡೆಯಲು ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯದಿಂದ ಅಸ್ತಮಾ ರೋಗಿಗಳು ಆಗಮಿಸುತ್ತಾರೆ. ಸ್ಥಳೀಯರು ಎಲ್ಲ ರೋಗಿಗಳಿಗೂ ಸರಿಯಾಗಿ ಔಷಧ ಪಡೆಯುವುದಕ್ಕೆ ಸಕಲ ರೀತಿಯ ವ್ಯವಸ್ಥೆ ಮಾಡಿರುತ್ತಾರೆ. ಅಷ್ಟೇ ಅಲ್ಲ ಉಚಿತ ಪ್ರಸಾದ ವ್ಯವಸ್ಥೆಯೂ ಇರುತ್ತದೆ.
ಕುಲಕರ್ಣಿ ಕುಟುಂಬದವರೇ ಅಸ್ತಮಾ ರೋಗಕ್ಕೆ ಔಷಧ ಸಿದ್ಧ ಮಾಡಿರುತ್ತಾರೆ. ಬಂದವರು ಎಷ್ಟೇ ಸಾವಿರ ಸಂಖ್ಯೆಯಲ್ಲಿ ಆಗಲಿ ಸಂಪೂರ್ಣವಾಗಿ ಉಚಿತವಾಗಿಯೇ ನೀಡುತ್ತಾರೆ.
ಇಲ್ಲಿ ಸತತ ಮೂರು ವರ್ಷ ಔಷಧ ಪಡೆದರೆ ಅಸ್ತಮಾ ರೋಗ ಸಂಪೂರ್ಣ ನಿವಾರಣೆಯಾಗುತ್ತದೆ. ಅವರಿಗೆ ಮತ್ತೆಂದೂ ಅಸ್ತಮಾ ಬರುವುದಿಲ್ಲ ಎನ್ನುವುದು ನಂಬಿಕೆ.
ಈ ಹಿಂದೆ ಲಕ್ಷಕ್ಕೂ ಅಧಿಕ ಅಸ್ತಮಾ ರೋಗಿಗಳು ಇಲ್ಲಿ ಬಂದು ಔಷಧ ಸ್ವೀಕಾರ ಮಾಡುತ್ತಿದ್ದರು. ಆದರೆ, ಈಗ ವಿವಿಧೆಡೆ ಔಷಧ ನೀಡುತ್ತಿರುವುದರಿಂದ ಅಲ್ಲಲ್ಲಿ ಔಷಧ ಪಡೆಯುತ್ತಾರೆ. ಹೀಗಾಗಿ, ಇಲ್ಲಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಆದರೂ ಈ ವರ್ಷ 30 -40 ಸಾವಿರಕ್ಕೂ ಅಧಿಕ ಜನರು ಆಗಮಿಸಿದ್ದರು ಎನ್ನಲಾಗಿದೆ.
ಸಾವಿರಾರು ಸಂಖ್ಯೆಯಲ್ಲಿ ಔಷಧ ಪಡೆಯಲು ಕುಟನಗಳ್ಳಿ ಗ್ರಾಮಕ್ಕೆ ಆಗಮಿಸಿದರೂ ಯಾವುದೇ ಸಮಸ್ಯೆಯಾಗದಂತೆ ಸಂಚಾರ ದಟ್ಟಣೆ ನಿಯಂತ್ರಣ ಮಾಡಲಾಗಿದೆ ಎಂದು ಕೊಪ್ಪಳಡಿವೈಎಸ್ಪಿ ಮುತ್ತಣ್ಣ ಸರ್ವಗೋಳ ಎಂದರು.