ಶ್ರೀಗಂಡಿ ಬಸವೇಶ್ವರನಿಗೆ ಜಲದಿಗ್ಬಂಧನ

KannadaprabhaNewsNetwork |  
Published : Jun 09, 2025, 12:03 AM IST
ಚಿತ್ರ: ೮ಎಸ್.ಎನ್.ಡಿ.೦೧- ಸಂಡೂರು-ತಾರಾನಗರ ಮಾರ್ಗಮಧ್ಯ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಹೊರನೋಟ. ೮ಎಸ್.ಎನ್.ಡಿ.೦೨- ಸಂಡೂರು-ತಾರಾನಗರ ಮಾರ್ಗಮಧ್ಯ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀಗಂಡಿ ಬಸವೇಶ್ವರ ದೇವಸ್ಥಾನದಲ್ಲಿ ಜಲಾಶಯದ ಬಸಿ ನೀರು ಸಂಗ್ರಹಗೊಂಡು ದೇವಸ್ಥಾನಕ್ಕೆ ಜಲ ದಿಗ್ಭಂದನವಾಗಿರುವುದು.೮ಎಸ್.ಎನ್.ಡಿ.೦೩- ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಬಳಿಯಲ್ಲಿ ಮದ್ಯದ ಬಾಟಲಿಯ ಚೂರುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದು, ಪಾದಾಚಾರಿಗಳಿಗೆ ಕಂಟಕವಾಗಿರುವುದು. | Kannada Prabha

ಸಾರಾಂಶ

ಸಂಡೂರು-ತಾರಾನಗರ ಮಾರ್ಗಮಧ್ಯೆ ಪ್ರಕೃತಿಯ ಮಡಿಲಲ್ಲಿ ಹಾಗೂ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀಗಂಡಿ ಬಸವೇಶ್ವರ ದೇವಸ್ಥಾನವು ಒಂದೆಡೆ ಜಲ ದಿಗ್ಬಂಧನ, ಮತ್ತೊಂದೆಡೆ ಮದ್ಯವ್ಯಸನಿಗಳ ಕಾಟ ಎದುರಿಸುತ್ತಿದೆ.

ಅನೈತಿಕ ಚಟುವಟಿಕೆ ತಾಣವಾಗುತ್ತಿರುವ ದೇವಸ್ಥಾನದ ಸುತ್ತಲಿನ ಪ್ರದೇಶವಿ.ಎಂ. ನಾಗಭೂಷಣ

ಕನ್ನಡಪ್ರಭ ವಾರ್ತೆ ಸಂಡೂರು

ಸಂಡೂರು-ತಾರಾನಗರ ಮಾರ್ಗಮಧ್ಯೆ ಪ್ರಕೃತಿಯ ಮಡಿಲಲ್ಲಿ ಹಾಗೂ ನಾರಿಹಳ್ಳ ಜಲಾಶಯದ ಹಿನ್ನೀರಿನ ತಟದಲ್ಲಿರುವ ಶ್ರೀಗಂಡಿ ಬಸವೇಶ್ವರ ದೇವಸ್ಥಾನವು ಒಂದೆಡೆ ಜಲ ದಿಗ್ಬಂಧನ, ಮತ್ತೊಂದೆಡೆ ಮದ್ಯವ್ಯಸನಿಗಳ ಕಾಟ ಎದುರಿಸುತ್ತಿದೆ.

ಸಂಡೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶ್ರೀಗಂಡಿ ಬಸವೇಶ್ವರನ ಭಕ್ತರಿದ್ದಾರೆ. ಶ್ರಾವಣ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆಗಳು ಜರುಗುತ್ತವೆ. ದೇವಸ್ಥಾನದ ಬಳಿಯಲ್ಲಿ ಶಿಲಾಶಾಸನವೊಂದು ದೊರೆತಿದ್ದು, ಇದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನಗಳು ನಡೆದಿವೆ.

ಈ ದೇವಸ್ಥಾನವು ನಾರಿಹಳ್ಳ ಜಲಾಶಯದ ತಟದಲ್ಲಿರುವ ಕಾರಣ ಜಲಾಶಯ ಭರ್ತಿಯಾಯಿತೆಂದರೆ, ದೇವಸ್ಥಾನಕ್ಕೆ ಜಲದಿಗ್ಬಂಧನ ಉಂಟಾಗುತ್ತದೆ. ದೇವಸ್ಥಾನಕ್ಕೆ ನೀರು ಬರುವುದನ್ನು ತಡೆಯಲು ದೇವಸ್ಥಾನ ಹಾಗೂ ನಾರಿಹಳ್ಳದ ಮಧ್ಯೆ ತಡೆಗೋಡೆ ನಿರ್ಮಿಸಲಾಯಿತು. ಜಿಂದಾಲ್ ಕಂಪನಿಯವರು ಕೋಟಿಗಟ್ಟಲೆ ಖರ್ಚು ಮಾಡಿ, ದೇವಸ್ಥಾನದ ಸುತ್ತಲು ಎತ್ತರದ ಗೋಡೆ, ದೇವಸ್ಥಾನದ ಆವರಣದ ಸುತ್ತಲು ತಂತಿ ಬೇಲಿ, ನೀರಿನ ಅನುಕೂಲಕ್ಕಾಗಿ ಕೊಳವೆಬಾವಿ, ಮರಗಳ ಸುತ್ತಲೂ ಭಕ್ತರು ಕುಳಿತು ವಿಶ್ರಾಂತಿ ಪಡೆದುಕೊಳ್ಳಲು ಕಟ್ಟೆ, ಪಾದಚಾರಿ ರಸ್ತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ.

ಆದಾಗ್ಯೂ ನಾರಿಹಳ್ಳದ ಬಸಿ ನೀರು ದೇವಸ್ಥಾನದ ಪ್ರಾಂಗಣದಲ್ಲಿ ಬಂದು ನಿಲ್ಲುತ್ತಿದೆ. ಈಗಾಗಲೇ ದೇವಸ್ಥಾನದ ಅರ್ಧ ಭಾಗ ಜಲಾವೃತವಾಗಿದೆ. ಪಾಚಿ ಕಟ್ಟಿಕೊಂಡಿದೆ. ಹೀಗಾಗಿ ದೇವಸ್ಥಾನದ ಒಳಗೆ ಹೋಗಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇವಸ್ಥಾನಕ್ಕೆ ಜಲದಿಗ್ಬಂಧನವಾಗಿರುವ ಕಾರಣ, ಅರ್ಚಕರು ದೇವರ ಮೂರ್ತಿಯನ್ನು ದೇವಸ್ಥಾನದ ಮತ್ತೊಂದು ಬದಿಯಲ್ಲಿರುವ ಗಣೇಶನ ದೇವಸ್ಥಾನದಲ್ಲಿಟ್ಟು ಪೂಜೆ ನೆರವೇರಿಸುತ್ತಿದ್ದಾರೆ.

ಅನೈತಿಕ ಚಟುವಟಿಕೆ:

ಭಕ್ತರ ಅನುಕೂಲಕ್ಕಾಗಿ ಜಿಂದಾಲ್ ಕಂಪನಿಯವರು ದೇವಸ್ಥಾನ ಅಭಿವೃದ್ಧಿ ಪಡಿಸಿ, ಮರ-ಗಿಡಗಳ ಸುತ್ತ ಜನರು ಕುಳಿತುಕೊಳ್ಳಲು ಕಟ್ಟೆ ನಿರ್ಮಿಸಿದರೆ, ಈ ಕಟ್ಟೆಗಳೀಗ ಮದ್ಯವ್ಯಸನಿಗಳಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ದೇವಸ್ಥಾನದ ಸುತ್ತಲಿನ ಗೇಟುಗಳಿಗೆ ಬೀಗ ಹಾಕಿದರೆ, ದುಷ್ಕರ್ಮಿಗಳು ಬೀಗ ಒಡೆದು ಹಾಕುತ್ತಿದ್ದಾರೆ. ಮದ್ಯವ್ಯಸನಿಗಳು ದೇವಸ್ಥಾನದ ಆವರಣದಲ್ಲಿ ಕುಳಿತು ಮದ್ಯ ಸೇವಿಸಿ, ನಂತರ ಬಾಟಲಿಗಳನ್ನು ಒಡೆದುಹಾಕಿ ಹೋಗುತ್ತಿದ್ದಾರೆ. ದೇವಸ್ಥಾನದ ಪ್ರಾಂಗಣದಲ್ಲಿನ ರಸ್ತೆಗೆ ಹಾಕಿರುವ ಟೈಲ್ಸ್‌ಗಳನ್ನು ಕಿತ್ತು, ಮೆಟ್ಟಿಲುಗಳ ತರಹ ಇಟ್ಟುಕೊಂಡು ಅದರ ಮೇಲಿಂದ ದೇವಸ್ಥಾನದ ವರೆಗೆ ಬೈಕ್‌ಗಳನ್ನು ತರುತ್ತಾರೆ.

ದೇವಸ್ಥಾನದ ಸಮೀಪ ರಸ್ತೆಯ ಮತ್ತೊಂದು ಬದಿಯಲ್ಲಿನ ಗಣೇಶ ಗುಡಿಯ ಬಳಿಯಲ್ಲಿ ಕಾರಣಾಂತರಗಳಿಂದ ಅಪೂರ್ಣಗೊಂಡಿರುವ ಸಮುದಾಯ ಭವನದ ಜಾಗ ಅನೈತಿಕ ಚಟುವಟಿಕೆ ತಾಣವಾಗಿದೆ.

ಒಂದೆಡೆ ದೇವಸ್ಥಾನದ ಸುತ್ತಲಿನ ಪ್ರದೇಶವನ್ನು ಆಸ್ತಿಕರ, ಪ್ರಕೃತಿ ಆರಾಧಕರ ಹಾಗೂ ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸುವ ಪ್ರಯತ್ನ ನಡೆಯುತ್ತಿವೆ. ಮತ್ತೊಂದೆಡೆ ದೇವಸ್ಥಾನದ ಸುತ್ತಲಿನ ಪ್ರದೇಶವನ್ನು ಅನೈತಿಕ ಚಟುವಟಿಕೆಗೆ ಬಳಸಿಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ.

ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಬೇಕಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ