ಕನ್ನಡಪ್ರಭ ವಾರ್ತೆ ಸುತ್ತೂರು
ಡಾ. ರಕ್ಷಿತ್ ರಾಜ್, ಕೇಂದ್ರ ಸರ್ಕಾರದ ಕೃಷಿ ಮತ್ತು ಪಶು ಸಂಗೋಪನೆ ಯೋಜನೆಗಳು ಹಾಗೂ ಮೇವು ಬೆಳೆಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಬೆಂಗಳೂರಿನ ರಾಷ್ಟ್ರೀಯ ಪಶು ಆಹಾರ ಮತ್ತು ಶರೀರ ಕ್ರಿಯಾಶಾಸ್ತ್ರ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಕಾಜಲ್ ಶಂಕರ್ ರಾಯ್ ಹಸುಗಳಲ್ಲಿ ಬಂಜೆತನ ಸಮಸ್ಯೆಗೆ ಖನಿಜ ಮಿಶ್ರಣ ಮತ್ತು ಹಾರ್ಮೋನ್ ಗಳನ್ನು ಬಳಸಬೇಕು ಎಂದು ತಿಳಿಸಿದರು.
ಹಾಲಿನಲ್ಲಿ ಕೊಬ್ಬು ಮತ್ತು ಡಿಗ್ರಿ ಸಮಸ್ಯೆ ಕಂಡು ಬಂದಲ್ಲಿ ಬೈಪಾಸ್ ಫ್ಯಾಟ್ ಮತ್ತು ಕೆಎಂಎಫ್ ಸಮೃದ್ಧಿಯಂತಹ ಉತ್ಪನ್ನಗಳನ್ನು ಬಳಸಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಅವರು ಮನವರಿಕೆ ಮಾಡಿಕೊಟ್ಟರು.ರಾಷ್ಟ್ರೀಯ ಡೇರಿ ಅಧ್ಯಯನ ಸಂಸ್ಥೆಯ ವಿಜ್ಞಾನಿ ಡಾ. ಶಿವಸ್ವಾಮಿ ಮಾತನಾಡಿ, ರೈತರು ಕೃಷಿಯ ಜೊತೆಗೆ ಹೈನುಗಾರಿಕೆ ಮಾಡುವುದರಿಂದ ಹೆಚ್ಚಿನ ಲಾಭಗಳಿಸಬಹುದು. ಹಾಲು ಒಂದು ಸಂಪೂರ್ಣ ಆಹಾರ. ಇದರಿಂದ ಅನೇಕ ಉಪ ಉತ್ಪನ್ನಗಳನ್ನು ತಯಾರಿಸಿ ದಿನನಿತ್ಯ ಬಳಸಿದರೆ ಆರೋಗ್ಯವನ್ನು ಉತ್ತಮವಾಗಿ ಪಡೆಯಬಹುದು. ರೈತರು ದೇಸಿ ತಳಿಯಾದ ಹಳ್ಳಿಕಾರ್ ತಳಿಯನ್ನು ಹೆಚ್ಚು ಸಾಕಬೇಕು ಎಂದು ತಿಳಿಸಿದರು.
ಪಶು ಚಿಕಿತ್ಸೆ ಸಂಶೋಧನಾ ಕೇಂದ್ರದ ಡಾ. ಸಬಾರಿನಾಥ್, ಸಂಶೋಧನಾ ಕೇಂದ್ರದ ಕೆಲಸ ವೈಖರಿಯ ಕುರಿತು ಮಾಹಿತಿ ನೀಡಿದರು.
ಮಣ್ಣು ಪರೀಕ್ಷೆಯ ಆಧಾರದ ಮೇಲೆ ಬೆಳೆಗಳ ಆಯ್ಕೆ, ತಳಿಗಳ ಆಯ್ಕೆ ಹಾಗೂ ಪೋಷಕಾಂಶಗಳ ನಿರ್ವಹಣೆ ಕುರಿತು ಮಾಹಿತಿ ನೀಡಿ ಹಾಗೂ ಲಘು ಪೋಷಕಾಂಶಗಳಾದ ತರಕಾರಿ ಸಮೃದ್ಧಿ, ಬಾಳೆ ಸಮೃದ್ಧಿ ಹಾಗೂ ಇತರ ಲಘು ಪೋಷಕಾಂಶಗಳ ಬಳಕೆ ಕುರಿತು ಮಾಹಿತಿ ನೀಡಿದರು.
ಡಾ. ದೀಪಕ್, ರೈತರು ಬೆಳೆ ಉತ್ಪಾದನೆ ಜೊತೆಗೆ ಮೌಲ್ಯವರ್ಧನೆ ಕಡೆಗೆ ಗಮನ ಹರಿಸಿದರೆ ಹೆಚ್ಚಿನ ಲಾಭ ಗಳಿಸಬಹುದು. ಮಹಿಳೆಯರು ಸ್ವ ಸಹಾಯ ಸಂಘಗಳನ್ನು ನಿರ್ಮಿಸಿಕೊಂಡು ಆಹಾರ ಪದಾರ್ಥಗಳ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ಆರ್ಥಿಕವಾಗಿ ಸದೃಢರಾಗಬಹುದು ಎಂದು ಮಾಹಿತಿ ನೀಡಿದರು.