ಪಿಎಂ ಸ್ವನಿಧಿ, ಪಿಎಂ ವಿಶ್ವಕರ್ಮ ಯೋಜನೆಗಳು ರಾಜ್ಯದಲ್ಲಿ ಉತ್ತಮ ಅನುಷ್ಠಾನ

KannadaprabhaNewsNetwork | Published : Jan 22, 2024 2:17 AM

ಸಾರಾಂಶ

ಕುಲ ಕಸುಬುಗಳನ್ನು ನಡೆಸುವ 18 ವೃತ್ತಿಪರ ಸಮುದಾಯದ ಏಳಿಗೆಗಾಗಿ ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯ ಸಂಚಾಲಕ ಜವಾಬ್ದಾರಿಯನ್ನು ನನಗೆ ಅ.9 ರಂದು ನೀಡಲಾಯಿತು. ಮರು ದಿನದಿಂದಲೇ ಕಾರ್ಯಾರಂಭಿಸಿ ಎಲ್ಲಾ ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿದ್ದೇನೆ. ವೃತ್ತಿ ಮಾಡುವ ಜಾಗಗಳಿಗೇ ಭೇಟಿ ನೀಡಿ ಯೋಜನೆಯ ಮಾಹಿತಿಯನ್ನು ತಲುಪಿಸಿದ್ದೇನೆ

- ಎರಡು ಯೋಜನೆಗಳ ರಾಜ್ಯ ಸಂಚಾಲಕ ಎಸ್.ಎ. ರಾಮದಾಸ್‌----ಕನ್ನಡಪ್ರಭ ವಾರ್ತೆ ಮೈಸೂರು

ಪ್ರಧಾನಿ ಮೋದಿ ಅವರ ಕನಸಿನ ಕಾರ್ಯಕ್ರಮಗಳಾದ ಪಿಎಂ– ಸ್ವನಿಧಿ ಹಾಗೂ ಪಿಎಂ– ವಿಶ್ವಕರ್ಮ ಯೋಜನೆಗಳು ರಾಜ್ಯದಲ್ಲಿ ಉತ್ತಮವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ಎರಡು ಯೋಜನೆಗಳ ರಾಜ್ಯ ಸಂಚಾಲಕ ಹಾಗೂ ಮಾಜಿ ಸಚಿವ ಎಸ್.ಎ. ರಾಮದಾಸ್‌ ತಿಳಿಸಿದರು.

ಕುಲ ಕಸುಬುಗಳನ್ನು ನಡೆಸುವ 18 ವೃತ್ತಿಪರ ಸಮುದಾಯದ ಏಳಿಗೆಗಾಗಿ ವಿಶ್ವಕರ್ಮ ಯೋಜನೆ ಜಾರಿಗೊಳಿಸಲಾಗಿದೆ. ರಾಜ್ಯ ಸಂಚಾಲಕ ಜವಾಬ್ದಾರಿಯನ್ನು ನನಗೆ ಅ.9 ರಂದು ನೀಡಲಾಯಿತು. ಮರು ದಿನದಿಂದಲೇ ಕಾರ್ಯಾರಂಭಿಸಿ ಎಲ್ಲಾ ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿದ್ದೇನೆ. ವೃತ್ತಿ ಮಾಡುವ ಜಾಗಗಳಿಗೇ ಭೇಟಿ ನೀಡಿ ಯೋಜನೆಯ ಮಾಹಿತಿಯನ್ನು ತಲುಪಿಸಿದ್ದೇನೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ವಿಶ್ವಕರ್ಮ ಯೋಜನೆಗೆ 13 ಸಾವಿರ ಕೋಟಿ ರು. ಅನುದಾನವನ್ನು ಸರ್ಕಾರ ಬಿಡುಗಡೆ ಆಗಿದ್ದು, ಫಲಾನುಭವಿಗಳಿಗೆ ತರಬೇತಿ ನೀಡಲಾಗುತ್ತದೆ. ಆ ಅವಧಿಯಲ್ಲಿ ನಿತ್ಯ 500 ರು., ಕೊನೆಯಲ್ಲಿ 15 ಸಾವಿರ ಮೌಲ್ಯದ ಕಿಟ್ ಒದಗಿಸಲಾಗುತ್ತದೆ. ಪೂರ್ಣಗೊಳಿಸಿದವರಿಗೆ 1 ಲಕ್ಷ ಸಾಲವನ್ನು ಅವರ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ. ಆಯ್ಕೆಯಾಗಿ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ ಎಂದರು.

ಈ ಯೋಜನೆಯಲ್ಲಿ ದೇಶದ 63 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ (21 ಲಕ್ಷ ಮಂದಿ). ಆಂಧ್ರಪ್ರದೇಶ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಬೆಳಗಾವಿಯಲ್ಲಿ ಅತಿ ಹೆಚ್ಚು ಅಂದರೆ 2.21 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು ಮೊದಲನೇ ಸ್ಥಾನದಲ್ಲಿದೆ. 2ನೇ ಹಂತದಲ್ಲಿ ಯೋಜನೆ ಜಾರಿಯಾದ ಜಿಲ್ಲೆಗಳಲ್ಲಿ ಮೈಸೂರು ಮೊದಲನೇ ಸ್ಥಾನದಲ್ಲಿದೆ (1.29 ಲಕ್ಷ). ಜಿಲ್ಲಾ ಮಟ್ಟದ ಬದಲಿಗೆ ತಾಲೂಕು ಹಂತದಲ್ಲಿಯೇ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತದೆ. ಇದರಲ್ಲಿ ಯುವಕರನ್ನು ಒಳಗೊಳಿಸಿಕೊಳ್ಳುವ ಪ್ರಯತ್ನಿಸಲಾಗುತ್ತಿದೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ತರಬೇತಿಗೆ ಆಯ್ಕೆಯಾಗಿದ್ದಾರೆ. 5 ವರ್ಷಗಳವರೆಗೂ ಕಾರ್ಯಕ್ರಮ ಜಾರಿಯಲ್ಲಿರಲಿದೆ. ಈ ಬಗ್ಗೆ ತಿಳಿಸಲು ಫೆ.1 ರಿಂದ 15 ರವರೆಗೆ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಪಿಎಂ– ಸ್ವನಿಧಿ ಯೋಜನೆ

ಪಿಎಂ– ಸ್ವನಿಧಿ ಯೋಜನೆಯಲ್ಲಿ 25 ಕೆಲಸ ಮಾಡುವವರನ್ನು ತರಲಾಗಿದ್ದು, 59 ಲಕ್ಷ ಜನ ಯೋಜನೆಯ ಲಾಭ ಪಡೆದಿದ್ದು, 12 ಸಾವಿರ ಕೋಟಿ ರು. ನೀಡಲಾಗಿದೆ. ರಾಜ್ಯದಲ್ಲಿ 4.54 ಲಕ್ಷ ಮಂದಿಗೆ 676 ಕೋಟಿ ರು. ಬಿಡುಗಡೆಯಾಗಿದೆ. ಯೋಜನೆಯಲ್ಲಿ ದೇಶದಲ್ಲಿ ಶೇ.91 ರಷ್ಟು ಸಾಲ ಮರುಪಾವತಿ ಆಗಿರುವುದು ದಾಖಲೆ ಎಂದ ಅವರು, ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ ಗೆ ರಾಜ್ಯದ 4 ಜನ ಸ್ವನಿಧಿ ಹಾಗೂ 10 ಜನ ವಿಶ್ವಕರ್ಮ ಯೋಜನೆಯ ಫಲಾನುಭವಿಗಳನ್ನು ಆಹ್ವಾನಿಸಲಾಗಿದೆ. ಇದು ಹೆಮ್ಮೆಯ ಸಂಗತಿ ಎಂದರು.

ಬಿಜೆಪಿ ಮುಖಂಡರಾದ ಪ್ರಸಾದ್ ಬಾಬು, ಸಂತೋಷ್, ಗಿರೀಶ್ ಇದ್ದರು.

ಇಂದು ರಾಮ ಭಜನೆ, ದೀಪೋತ್ಸವ

ಅಯೋಧ್ಯೆಯ ರಾಮಮಂದಿರದಲ್ಲಿ ಜ.22 ರಂದು ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಸಂಜೆ 6ಕ್ಕೆ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇಗುಲದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ವೇಳೆ ಶಿಲ್ಪಿ ಅರುಣ್ ಯೋಗಿರಾಜ್ ಅವರ ತಾಯಿ ಸರಸ್ವತಿ, ಪತ್ನಿ ವಿಜೇತ ಅವರನ್ನು ಗೌರವಿಸಲಾಗುವುದು. ಭಜನೆ, ದೀಪೋತ್ಸವವೂ ನಡೆಯಲಿದ್ದು, ಬಳಿಕ ಪ್ರಸಾದ ವಿತರಣೆ ಮಾಡಲಾಗುವುದು ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ತಿಳಿಸಿದರು.

Share this article