ರಾಮ ಮಂದಿರ ಉದ್ಘಾಟನೆ, ಹಳಿಯಾಳದಲ್ಲಿ ಹಬ್ಬದ ವಾತಾವರಣ

KannadaprabhaNewsNetwork |  
Published : Jan 22, 2024, 02:17 AM IST
 ಪಟ್ಟಣದಲ್ಲಿನ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ಅಲಂಕರಿಸಲ್ಪಟ್ಟಿರುವ ಶ್ರೀ ಸೀತಾರಾಮ | Kannada Prabha

ಸಾರಾಂಶ

ಅಯೋಧ್ಯೆಯಲ್ಲಿ ಸೋಮವಾರ ರಾಮಮಂದಿರ ಲೋಕಾರ್ಪಣೆಯಾಗುತ್ತಿರುವ ಶುಭ ಗಳಿಗೆಯಲ್ಲಿ ಹಳಿಯಾಳ ತಾಲೂಕಿನ 80ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಅನ್ನಪ್ರದಾಸ ವಿತರಣೆ ನಡೆಯಲಿದೆ.

ಹಳಿಯಾಳ: ಅಯೋಧ್ಯೆಯಲ್ಲಿ ಸೋಮವಾರ ರಾಮಮಂದಿರ ಲೋಕಾರ್ಪಣೆಯಾಗುತ್ತಿರುವ ಶುಭಗಳಿಗೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಇಡಿ ತಾಲೂಕಿನೆಲ್ಲೆಡೆ ಸಿದ್ಧತೆಗಳು ನಡೆದಿದೆ. ಎಲ್ಲೆಡೆಯೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಸೋಮವಾರ ಬಹುತೇಕ ಕಡೆ ಅನ್ನಪ್ರಸಾದ ವಿತರಣೆ ನಡೆಯಲಿದೆ.

ತಾಲೂಕಿನೆಲ್ಲೆಡೆ ಇರುವ ದೇವಸ್ಥಾನಗಳಲ್ಲಿ ವಿಶೇಷವಾಗಿ ಶ್ರೀರಾಮ ಹಾಗೂ ಶ್ರೀ ಮಾರುತಿ ದೇವಸ್ಥಾನ ಹಾಗೂ ಗ್ರಾಮದೇವಿ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಪೂಜೆ, ತದನಂತರ ಅನ್ನಪ್ರಸಾದ ನಡೆಯಲಿದೆ. ಹಳಿಯಾಳ ಪಟ್ಟಣದಲ್ಲಿನ 20 ದೇವಸ್ಥಾನಗಳಲ್ಲಿ ಹಾಗೂ ಗ್ರಾಮಾಂತರ ಭಾಗದ 60ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಪ್ರಸಾದ ಹಾಗೂ ಅನ್ನಪ್ರಸಾದ ವಿತರಣೆ ನಡೆಯಲಿದೆ.

ಪಟ್ಟಣದಲ್ಲಿನ ಶ್ರೀ ರಾಮಚಂದ್ರ ದೇವಸ್ಥಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ಪೂಜಾವಿಧಿಯು ನಡೆಯಲಿದ್ದು, ತದನಂತರ ಅನ್ನಪ್ರಸಾದ ನಡೆಯಲಿದೆ ಎಂದು ಶ್ರೀ ರಾಮಚಂದ್ರ ದೇವಸ್ಥಾನದ ಟ್ರಸ್ಟಿ ಸತ್ಯಜಿತ ಗಿರಿ ತಿಳಿಸಿದ್ದಾರೆ. ಬಿ.ಕೆ. ಹಳ್ಳಿಯಲ್ಲಿ ಶ್ರೀರಾಮ ದೇವಸ್ಥಾನದಲ್ಲಿ ಮತ್ತು ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿ ಗ್ರಾಮವಾದ ಮಾವಿನಕೊಪ್ಪ ಗ್ರಾಮದಲ್ಲಿನ ಐತಿಹಾಸಿಕ ಹನುಮಂತ ದೇವಸ್ಥಾನದಲ್ಲಿ ಪೂಜೆ ಹಾಗೂ ಅನ್ನಪ್ರಸಾದ ನಡೆಯಲಿದೆ.

ಪ್ರತಿ ಓಣಿ ಬಡಾವಣೆಗಳಲ್ಲಿ ಸಂಭಮ:

ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಓಣಿಗಳಲ್ಲಿ ಸಂಭ್ರಮಾಚರಣೆಯ ಸಿದ್ಧತೆಗಳು ಆರಂಭಗೊಂಡಿದ್ದು, ಎಲ್ಲೆಡೆ ಪ್ರಭು ಶ್ರೀರಾಮರ ಫ್ಲೆಕ್ಸ್, ಬ್ಯಾನರ್‌ಗಳನ್ನು, ಕೇಸರಿ ಪತಾಕೆಗಳನ್ನು ಹಚ್ಚಿ ಶೃಂಗರಿಸಲಾಗುತ್ತಿದೆ.

ಸೂತ್ರದ ಗೊಂಬೆಯಾಟ: ಅಯೋಧ್ಯಾ ಕರಸೇವೆಗೆ ತೆರಳಿದ ಪ್ರಸ್ತುತ ಕಾಂಗ್ರೆಸ್ ವಕ್ತಾರರಾಗಿರುವ ಉಮೇಶ ಬೊಳಶೆಟ್ಟಿ ಹಾಗೂ ಅಯೋಧ್ಯಾದಲ್ಲಿ ನಡೆಯಲಿರುವ ಶ್ರೀ ರಾಮೋತ್ಸವದಲ್ಲಿ ಸೀತಾಪಹರಣ ಸೂತ್ರದ ಬೊಂಬೆಯಾಟ ಪ್ರದರ್ಶಿಸುವ ಅವಕಾಶವನ್ನು ಪಡೆದಿರುವ ಸ್ಥಳೀಯ ಹೊಂಗಿರಣ ಕಲಾ ತಂಡದ ಮುಖ್ಯಸ್ಥ ಬೊಂಬಯಾಟ ತಜ್ಞ ಸಿದ್ದಪ್ಪ ಬಿರಾದಾರ ಹಾಗೂ ಅವರ ತಂಡವನ್ನು ಪಟ್ಟಣದ ಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಆನಂತರ ಶ್ರೀ ರಾಮೋತ್ಸವದಲ್ಲಿ ಪ್ರದರ್ಶಿಸಲ್ಪಡುವ ಸೀತಾಪಹರಣ ಸೂತ್ರದ ಬೊಂಬೆಯಾಟದ ಮೊದಲ ಪ್ರದರ್ಶನ ಹಳಿಯಾಳದಲ್ಲಿ ನಡೆಯಲಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ