ಸಮಾಜದ ಸೇವೆಗೆ ಜೀವನ ಕಾಯ್ದಿರಿಸಿ: ಶಶಿಧರ ದಿಂಡೂರ

KannadaprabhaNewsNetwork | Published : Jan 22, 2024 2:17 AM

ಸಾರಾಂಶ

ಕೇವಲ ಮನೆ, ಕುಟುಂಬದ ಹೊಣೆಗಾರಿಕೆ ಜೊತೆಗೆ ಸಮಾಜದ ಏಳ್ಗೆ, ಸೇವೆಗಾಗಿ ಜೀವನವನ್ನು ಕಾಯ್ದಿರಿಸುವ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಪ್ರಗತಿ ಸಾಧ್ಯವಾಗುವುದು. ಈ ದಿಸೆಯಲ್ಲಿ ಪಂಚಮಸಾಲಿ ಸಮಾಜ ಮುಂದಾಗಬೇಕು ಎಂದು ಗದಗ ಜಿಲ್ಲಾ ಪಂಚಮಸಾಲಿ ಸಮಾಜ ಯುವ ಘಟಕ ಮಾಜಿ ಅಧ್ಯಕ್ಷ ಶಶಿಧರ ದಿಂಡೂರ ಕರೆ ನೀಡಿದರು.

ರೋಣ: ಕೇವಲ ಮನೆ, ಕುಟುಂಬದ ಹೊಣೆಗಾರಿಕೆ ಜೊತೆಗೆ ಸಮಾಜದ ಏಳ್ಗೆ, ಸೇವೆಗಾಗಿ ಜೀವನವನ್ನು ಕಾಯ್ದಿರಿಸುವ ಮನೋಭಾವನೆ ಬೆಳೆಸಿಕೊಂಡಾಗ ಮಾತ್ರ ಪ್ರಗತಿ ಸಾಧ್ಯವಾಗುವುದು. ಈ ದಿಸೆಯಲ್ಲಿ ಪಂಚಮಸಾಲಿ ಸಮಾಜ ಮುಂದಾಗಬೇಕು ಎಂದು ಗದಗ ಜಿಲ್ಲಾ ಪಂಚಮಸಾಲಿ ಸಮಾಜ ಯುವ ಘಟಕ ಮಾಜಿ ಅಧ್ಯಕ್ಷ ಶಶಿಧರ ದಿಂಡೂರ ಕರೆ ನೀಡಿದರು. ಅವರು ಭಾನುವಾರ ತಾಲೂಕಿನ ಜಿಗಳೂರ ಗ್ರಾಮದ ಜಗದ್ಗುರು ತೋಂಟದಾರ್ಯ ಸಮುದಾಯ ಭವನದಲ್ಲಿ ಪಂಚಮಸಾಲಿ ಸಮಾಜ ಜಗಳೂರ ಘಟಕ ವತಿಯಿಂದ ವೀರರಾಣಿ ಕಿತ್ತೂರ ಚೆನ್ನಮ್ಮನ 200ನೇ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕುಟುಂಬ ನಿರ್ವಹಣೆಯಲ್ಲಿ ತಾಯಿಂದಿರ ಪಾತ್ರ ಯಾವ ರೀತಿಯಾಗಿ ಇರುತ್ತದೆಯೋ, ಅದೇ ರೀತಿಯಾಗಿ ಸಮಾಜ ಮತ್ತು ಮಕ್ಕಳ ಬೆಳವಣಿಗೆಯಲ್ಲಿ ತೊಡಗುವದು ಅತೀ ಮುಖ್ಯವಾಗಿದೆ. ಪಂಚಮಸಾಲಿ‌ ಒಬಿಸಿ, 2 ಎ ಮಿಸಲಾತಿಗಾಗಿ ಅನೇಕ ವರ್ಷಗಳಿಂದ ಹೋರಾಡುತ್ತಾ ಬಂದಿದ್ದು, ನ್ಯಾಯ ಸಿಗುವಲ್ಲಿ ಸಮಾಜ ಮತ್ತಷ್ಟು ಗಟ್ಟಿಗೊಳ್ಳಬೇಕು. ಸೀಮಿತ ಮನಸ್ಥಿತಿಯಿಂದ ಪಂಚಮಸಾಲಿ ಸಮಾಜ ಹೊರಬರಬೇಕು ಎಂದರು.ಕೇವಲ ನೌಕರಿಗಾಗಿ ಸೀಮಿತವಾಗಿ ಇರಬಾರದು. ಆರ್ಥಿಕವಾಗಿ ಬೆಳೆಯುವ ಯೋಜನೆಗಳು ಸಾಕಷ್ಟಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜ ಆರ್ಥಿಕವಾಗಿ ಬೆಳೆಯಬೇಕು.ಉನ್ನತ ವಿಚಾರಗಳನ್ನು ಅರಿತು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಸಮಾಜದ ಸೇವೆಯ ಭಾಗವಾಗಿ ಬದುಕನ್ನು ಸಾಗಿಸಬೇಕು ಎಂದರು. ಪಂಚಮಸಾಲಿ ಸಮಾಜ ರಾಜ್ಯ ಕಾರ್ಯಾಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಂಚಮಸಾಲಿ ಸಮಾಜ ಸಂಘಟಿತರಾಗಬೇಕು. ಚುನಾವಣೆಯನ್ನೇ ನೆಪ ಮಾಡಿಕೊಂಡು ಬದುಕನ್ನು ಹಾಳು ಮಾಡಿಕೊಳ್ಳದೇ, ಬದುಕಿನ ಹೊಂದಾಣಿಕೆಗಾಗಿ, ಸಾಮರಸ್ಯತೆಗಾಗಿ ಪಂಚಮಸಾಲಿ ಸಮಾಜ ಒಗ್ಗೂಡಬೇಕು. ರಾಜ್ಯದಲ್ಲಿ ಪಂಚಮಸಾಲಿ ಜನಾಂಗ 86 ಲಕ್ಷ ಇದೆ. 14 ಜನ ಪಂಚಮಸಾಲಿ ಸಮಾಜದ ಶಾಸಕರಿದ್ದರೂ ಸಮಾಜಕ್ಕೆ ನ್ಯಾಯ ಒದಗಿಸುವಲ್ಲಿ ಶ್ರಮಿಸುತ್ತಿಲ್ಲ. ಸಮಾಜದ ಸಮಸ್ಯೆಗಳನ್ನು ಈಡೇರಿಸುವಲ್ಲಿ ಸಮಾಜದ ಜನಪ್ರತಿನಿಧಿಗಳು ಹೋರಾಡಬೇಕು. ಅವೈಜ್ಞಾನಿಕ ಜಾತಿ ಜನಗಣತಿಯಿಂದ ಲಿಂಗಾಯತರಿಗೆ ತೀವ್ರ ಅನ್ಯಾಯವಾಗಿದೆ. ರಾಜ್ಯದಲ್ಲಿ ಕೇವಲ 63 ಲಕ್ಷ ಜನರಿದ್ದಾರೆ ಎಂದು ವರದಿ ನೀಡಲಾಗಿದ್ದು, ಆ ವರದಿ ರದ್ದುಗೊಳಿಸಿ, ವೈಜ್ಞಾನಿಕವಾಗಿ ಜಾತಿ ಜನಗಣತಿ ಮಾಡಬೇಕು. ಆಧಾರ ಕಾರ್ಡ ಅನ್ವಯ ಜಾತಿ ಜನಗಣತಿ ಮಾಡಬೇಕು ಎಂದರು. ಅಧ್ಯಕ್ಷತೆಯನ್ನು ವಹಿಸಿದ್ದ ಕೆಸಿಸಿ ಬ್ಯಾಂಕ್‌ ನಿರ್ದೇಶಕ ಜಿ.ಪಿ. ಪಾಟೀಲ ಮಾತನಾಡಿ, ರಾಜಕೀಯ, ಸಾಮಾಜಿಕ, ಆರ್ಥಿಕ , ಶೈಕ್ಷಣಿಕವಾಗಿ ಪಂಚಮಸಾಲಿ ಸಮಾಜ ಪ್ರಗತಿ ಹೊಂದಬೇಕು. ಈ ನಿಟ್ಟಿನಲ್ಲಿ ಸಂಘಟಿತರಾಗಬೇಕು ಎಂದರು.‌ಗ್ರಾಮದ ದುರ್ಗಾದೇವಿ ಪಾದಗಟ್ಟೆಯಿಂದ ಪ್ರಮುಖ ಬೀದಿಗಳಲ್ಲಿ ಚನ್ನಮ್ಮ ಭಾವಚಿತ್ರ ಮೆರವಣಿಗೆ, ಮಹಿಳೆಯರಿಂದ ಬುತ್ತಿ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಎಸ್‌.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು.ಸಾನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಸ್ವಾಮಿಜಿ, ಗುರಯ್ಯ ಗಂಗಾಧರಮಠ, ಪಂಚಾಕ್ಷರಯ್ಯ ಹಿರೇಮಠ ವಹಿಸಿದ್ದರು.ಕಾರ್ಯಕ್ರಮದಲ್ಲಿ ಶಿವಣ್ಣ ಪಲ್ಲೇದ, ಪಂಚಮಸಾಲಿ ಸಮಾಜ ಅಧ್ಯಕ್ಷ ಶಾಂತಗೌಡ ಪಾಟೀಲ, ವಿಶ್ವನಾಥ ಜಿಡ್ಡಿಬಾಗೀಲ, ಪಿ.ಬಿ. ಧರಣೆಪ್ಪಗೌಡ್ರ, ಸಂಗನಗೌಡ ಪಾಟೀಲ, ಕೆ .ಶಾಬಾದಿ, ನಾಗನಗೌಡ ಕೆಂಚನಗೌಡ್ರ, ವ್ಹಿ.ಎಸ್. ಪಾಟೀಲ, ಬಸವರಾಜ ಹುನಗುಂದ, ಜಿ.ಎನ್. ದಾನಪ್ಪಗೌಡ್ರ, ದೇವಪ್ಪ ಹುನಗುಂದ, ನೀಲಪ್ಪಗೌಡ ಧರಣೆಪ್ಪಗೌಡ್ರ‌ ಮುಂತಾದವರು ಉಪಸ್ಥಿತರಿದ್ದರು. ಅಕ್ಷಯ ಪಾಟೀಲ ನಿರೂಪಿಸಿದರು. ಎಸ್.ಐ. ಪಾಟೀಲ ಸ್ವಾಗತಿಸಿದರು. ಎಸ್.ಎಸ್. ಧರಣೆಪ್ಪಗೌಡ್ರ ವಂದಿಸಿದರು.

Share this article