ಗಣೇಶ್ ಕಾಮತ್ ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇದನ್ನು ವಿಚಿತ್ರ ಎನ್ನಬೇಕೋ, ವಿಶೇಷ ಎನ್ನುವುದೋ ಗೊತ್ತಿಲ್ಲ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಶತಮಾನಗಳ ಕನಸು ನನಸಾಗುವ ಲಕ್ಷಣಗಳು 2020ರಲ್ಲಿ ಕಂಡು ಬಂದವು. ಇನ್ನೇನು ಆ ವರ್ಷ ಆಗಸ್ಟ್ 5ರಂದು ರಾಷ್ಟ್ರ ನಾಯಕ ನರೇಂದ್ರ ಮೋದಿಯವರು ಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಲಿದ್ದಾರೆ ಎಂಬ ಸುದ್ದಿ ಪ್ರಕಟವಾದಾಗ ಈ ಮಹತ್ಕಾರ್ಯ ನಿರ್ವಿಘ್ನವಾಗಿ ನಡೆಯುವಂತಾಗಲಿ ಎಂದು ದ.ಕ ಜಿಲ್ಲೆಯ ಬೆಳುವಾಯಿಯ ತಮ್ಮ ಸುರಕ್ಷಾ ನಿವಾಸದಲ್ಲೇ ನಂದಾದೀಪ ಹಚ್ಚಿದವರು ಸುರೇಶ್ ಕುಮಾರ್.ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷರೂ, ವೃತ್ತಿಯಲ್ಲಿ ಬಿಲ್ಡಿಂಗ್ ಕಾಂಟ್ರಾಕ್ಟರ್ ಆಗಿರುವ ಸುರೇಶ್ ಕುಮಾರ್ ಪತ್ನಿ ಉಷಾ ಪುತ್ರ ಸುಜಿತ್, ಪುತ್ರಿ ಸುಪ್ರೀತಾ ಎಲ್ಲರ ಸಂಕಲ್ಪವೂ ಜತೆಗೂಡಿ ಅವರ ದೇವರ ಮನೆಯಲ್ಲಿ ಅ.4 ರಂದೇ ಪುತ್ರಿ ಸುಪ್ರೀತಾ ದೀಪ ಪ್ರಜ್ವಲನ ನಡೆಸಿ ಇದೀಗ ಬರೋಬ್ಬರಿ ಮೂರೂವರೆ ವರ್ಷಗಳು ಅಂದರೆ 1267 ದಿನಗಳೇ ಕಳೆದಿವೆ. ಹಚ್ಚಿದ ನಂದಾ ದೀಪ ಒಮ್ಮೆಯೂ ಆರದಂತೆ ದಿನವೂ ಬೆಳಗುತ್ತಿರುವುದರ ಹಿಂದೆ ಪುತ್ರಿ ಸುಪ್ರೀತಾ ಸೇರಿದಂತೆ ಮನೆಯವರ ಶ್ರದ್ಧೆ ಬಹಳಷ್ಟಿದೆ ಅಂತಾರೆ ಸುರೇಶ್.ವಿಚಿತ್ರ, ವಿಶೇಷ ಎಂದರೆ 57ರ ಹರೆಯದ ಸುರೇಶ್ ಕುಮಾರ್ ಅವರ ಬಾಲ್ಯದಿಂದಲೂ ಮನೆಯಲ್ಲಿ ಈವರೆಗೂ ಹಲವು ದಶಕಗಳೇ ಸಂದರೂ ಕಾರಣಾಂತರಗಳಿಂದ ರಾಮನ ಫೋಟೋ ಇರಲೇ ಇಲ್ಲವಂತೆ! ಈಗ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದ್ದಂತೆ ಬೆಳುವಾಯಿಲ್ಲಿ ಬೆಳಗುತ್ತಿರುವ ನಂದಾದೀಪ ಇರುವ ಮನೆಗೂ ಶ್ರೀರಾಮನ ಭಾವಚಿತ್ರವೂ ದೇವರ ಮನೆ ಪ್ರವೇಶಿಸಲಿದೆ. ಇದೊಂದು ಭಾವನಾತ್ಮಕ, ಮರೆಯಲಾಗದ ಸಂಭ್ರಮ. ಈವರೆಗೆ 180 ಲೀಟರ್ ಎಳ್ಳೆಣ್ಣೆ ನಂದಾದೀಪಕ್ಕೆ ಸಂದಿದೆ. ಆರಂಭದಲ್ಲಿ 5 ಲೀಟರ್ ಎಳ್ಳೆಣ್ಣೆ 24 ದಿನಗಳವರೆಗೆ ಸಾಕಾಗುತ್ತಿತ್ತು. ನಂತರದ ದಿನಗಳಲ್ಲಿ 1 ತಿಂಗಳು 10 ದಿನಗಳವರೆಗೆ ಬರುತ್ತಿದೆ ಎನ್ನುವ ಸುರೇಶ್ ಕುಮಾರ್ ಮಂದಿರ ಶಿಲಾನ್ಯಾಸ ದಿನವಾದ ಅ. 5 ರಂದು ವರ್ಷವೂ ಮನೆಯಲ್ಲಿ ದೀಪಕ್ಕೆ ಅಲಂಕಾರ ಪೂಜೆ, ಗಣಪತಿ ಹವನ ನಡೆಸಿಕೊಂಡು ಬಂದಿದ್ದಾರೆ.
ಸುರೇಶ್ ಭಟ್ ಪ್ರತೀ ವರ್ಷ ಅಲಂಕಾರ ಪೂಜೆ, ಗಣಹೋಮ ವಿಧಿ ವಿಧಾನಗಳನ್ನು ಪೂರೈಸುತ್ತಿದ್ದರು. ಕೊನೆಗೂ ಮಂದಿರ ಲೋಕಾರ್ಪಣೆಯಾಗುತ್ತಿದೆ. ನಂದಾದೀಪ ಮುಂದೆಯೂ ನನ್ನ ಜೀವಿತಾವಧಿವರೆಗೂ ಉರಿಯಲಿ ಎನ್ನುವ ಆಶಯ ಸುರೇಶ್ ಕುಮಾರ್ ಅವರದ್ದು.