ಕೊಡಗು, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳನ್ನು ಒಂದೇ ಲಾಯಲ್ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಬೇಕು. ಇದರಿಂದ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಿ ಅಭಿವೃದ್ಧಿಯಾಗಲಿದೆ ಎಂದು ಮಾಜಿ ಸಚಿವ ಅಡಗೂರು ಎಚ್. ವಿಶ್ವನಾಥ್ ಹೇಳಿದರು.
ಮಡಿಕೇರಿ: ಕೊಡಗು, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳನ್ನು ಒಂದೇ ಲಾಯಲ್ ಪ್ರವಾಸೋದ್ಯಮ ಕೇಂದ್ರವನ್ನಾಗಿ ರೂಪಿಸಬೇಕು. ಇದರಿಂದ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಾಗಿ ಅಭಿವೃದ್ಧಿಯಾಗಲಿದೆ ಎಂದು ಮಾಜಿ ಸಚಿವ ಅಡಗೂರು ಎಚ್. ವಿಶ್ವನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಅರಮನೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆದರೆ ಈಗ ಅದು ದಸರಾಕ್ಕೆ ಮಾತ್ರ ಸೀಮಿತವಾಗಿದೆ. ೨೦೧೩ರ ಬಜೆಟ್‌ನಲ್ಲೇ ಈ ಐದು ಜಿಲ್ಲೆಗಳನ್ನೊಳಗೊಂಡ ಲಾಯಲ್ ಟೂರಿಸಂ ಕೇಂದ್ರದ ಪ್ರಸ್ತಾವ ಬಂದಿತ್ತು ಎಂದು ನೆನಪಿಸಿದರು.ಕೊಡಗಿನ ನೈಸರ್ಗಿಕ ಸೌಂದರ್ಯ ಮತ್ತು ಸಂಸ್ಕೃತಿ ವಿಶೇಷ. ಈ ಸಾಮರ್ಥ್ಯ ಬಳಸಿಕೊಂಡು ಪ್ರವಾಸೋದ್ಯಮ ಬೆಳೆಸಲು ಸಿಎಂ ಡಿ.ಕೆ. ಶಿವಕುಮಾರ್ ಗಂಭೀರವಾಗಿ ಯೋಚಿಸಬೇಕು. ಕೊಡಗಿನ ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ, ಛೇಂಬರ್, ಹೊಟೇಲ್ ಮಾಲೀಕರೊಂದಿಗೆ ಸಮಾಲೋಚಿಸಿ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.ಪ್ರವಾಸೋದ್ಯಮವನ್ನೇ ನಂಬಿ ಹಲವು ರಾಷ್ಟ್ರಗಳು ಬೆಳೆದಿವೆ. ಈಗಾಗಲೇ ಜನಪ್ರಿಯ ತಾಣವಾಗಿರುವ ಕೊಡಗಿನಲ್ಲಿ ಇನ್ನಷ್ಟು ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಜಿಲ್ಲೆಯ ಇಬ್ಬರು ಶಾಸಕರು ಸಕ್ರಿಯರಾಗಿದ್ದರೂ ಸರ್ಕಾರದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಹಿಂದೆ ಕೊಡಗಿನಿಂದ ಮೂವರು ಸಚಿವರಿದ್ದರು. ಈಗ ಆ ಸ್ಥಾನ ಖಾಲಿಯಾಗಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಜನರ ಮಾತು ಕೇಳುವ ಸಿಎಂ: ಸಿದ್ದರಾಮಯ್ಯ ಅವರು ರೆಡಿ ಮಾಡಿದ ಮನೆಗೆ ಹೋದರೆ, ಡಿ.ಕೆ. ಶಿವಕುಮಾರ್ ಅವರು ಮನೆ ಕಟ್ಟಿಕೊಂಡು ಬಂದವರು. ಅವರು ಜನರ ಮಾತು ಕೇಳುವ ಸಿಎಂ ಎಂದು ವಿಶ್ವನಾಥ್ ವ್ಯಾಖ್ಯಾನಿಸಿದರು.ಕಾರ್ಯಕರ್ತರ ಶ್ರಮದಿಂದ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆದರೆ ಅಧಿಕಾರ ಸಿಕ್ಕ ನಂತರ ನಾಯಕರು ಅದನ್ನು ಹಾಳು ಮಾಡುತ್ತಾರೆ ಎಂದು ದೂರಿದ ಅವರು, ಇಲ್ಲಿಯವರೆಗೆ ನನ್ನ ಮಿತಿಯಲ್ಲಿ ರಾಜಕೀಯ ಮಾಡಿದೆ. ಇನ್ನು ಮುಂದೆ ಚುನಾವಣಾ ಕಣಕ್ಕೆ ಇಳಿಯುವುದಿಲ್ಲ. ದುಬಾರಿ ಚುನಾವಣೆ ನನಗೆ ಸಾಧ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಕೆ.ಎಂ. ಗಣೇಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.