ಚಾಮರಾಜನಗರ: ನೇರ ನುಡಿ, ದಿಟ್ಟನಡೆಗೆ ಹೆಸರಾಗಿದ್ದ ಮಾಜಿ ಶಾಸಕ ಎಂ.ಸಿ. ಬಸಪ್ಪನವರ ನಿಸ್ವಾರ್ಥ ಸೇವೆಯಿಂದ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಮಾಜಿ ಶಾಸಕ ಎಂ.ಸಿ.ಬಸಪ್ಪ ಅವರು ಹಲವರಿಗೆ ಜೀವನ ಕಟ್ಟಿಕೊಟ್ಟಿದ್ದಾರೆ. ಇಂತಹವರ ಹೆಸರಿನಲ್ಲಿ ಸಮಾಜ ಸೇವಾ ಪ್ರಶಸ್ತಿಯನ್ನು ಪರಿಸರವಾದಿ ಸರಳ ಸಜ್ಜನ ಪುಣಜನೂರು ದೊರೆಸ್ವಾಮಿ ಅವರಿಗೆ ನೀಡುತ್ತಿರುವುದು ಅರ್ಥಪೂರ್ಣವಾಗಿದೆ.
ಯಾವುದೇ ಆಮಿಷಕ್ಕೊಳಗಾಗದೇ ತಮ್ಮ ಜೀವನದುದ್ದಕ್ಕೂ ಪ್ರಾಮಾಣಿಕ ರಾಜಕಾರಣ ಮಾಡಿಕೊಂಡು ಬಂದವರು. ಕೃಷಿಯ ಜೊತೆ ರಾಜಕಾರಣ ಮೈಗೂಡಿಸಿಕೊಂಡಿದ್ದ ಬಸಪ್ಪನವರು ಗ್ರಾಮೀಣ ಪ್ರದೇಶದ ಜನರ ಬವಣೆಗಳನ್ನು ಹತ್ತಿರದಿಂದಲೇ ಕಂಡವರು. ಜನರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಜತೆ ಚರ್ಚಿಸಿ, ಪರಿಹರಿಸುವ ಕಾರ್ಯದಲ್ಲಿ ಸದಾ ನಿರತರಾಗಿದ್ದರು ಎಂದು ಹೇಳಿದರು.ಜಿಲ್ಲಾಧಿಕಾರಿ ಶ್ರೀರೂಪ ಮಾತನಾಡಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಭವನ ನಿರ್ಮಾಣಕ್ಕೆ ಸರ್ಕಾರಿ ನಿವೇಶನ ಗುರುತಿಸಿ ಮಂಜೂರು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷರಾದ ಪಡುಗೂರು ಅಡವಿಮಠದ ಶಿವಲಿಂಗೇಂದ್ರ ಸ್ವಾಮೀಜಿ, ನಿವೃತ್ತ ಪ್ರಾಧ್ಯಾಪಕ ಸಾಹಿತಿ ಚಂದ್ರಶೇಖರಯ್ಯ, ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಸಿ.ಸೋಮಶೇಖರ್, ಮಾಜಿ ಎಂಎಲ್‌ಸಿ ಕೆ.ಆರ್.ಮಲ್ಲಿಕಾರ್ಜುನಪ್ಪ, ರಾಜೇಶ್ವರಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಕೆ.ರವಿಕುಮಾರ್, ನಿಕಟಪೂರ್ವ ಅಧ್ಯಕ್ಷ ದುಗ್ಗಟ್ಟಿ ಮಲ್ಲಿಕಾರ್ಜುನಸ್ವಾಮಿ, ಎಂ.ಸಿ.ಬಸಪ್ಪನವರ ಕುಟುಂಬವರ್ಗದವರು, ಅಭಿಮಾನಿಗಳು ಹಾಜರಿದ್ದರು.
ಚಾಮರಾಜನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಮಾಜಿ ಶಾಸಕ ಎಂ.ಸಿ.ಬಸಪ್ಪ ಸಮಾಜ ಸೇವಾ ಪ್ರಶಸ್ತಿಯನ್ನು ಪರಿಸರವಾದಿ ಪುಣಜನೂರು ದೊರೆಸ್ವಾಮಿ ಅವರಿಗೆ ಪ್ರದಾನ ಮಾಡಲಾಯಿತು.