ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಮಳೆಯಾಗದ ಕಾರಣ ಬರ ಪರಿಸ್ಥಿತಿ ಆತಂಕ ಎದುರಾಗುತ್ತಿದೆ. ಶ್ರೀಅಭಯ ಆಂಜನೇಯ ಸ್ವಾಮಿ ಕೃಪೆಯಿಂದ ಉತ್ತಮಮಳೆಯಾಗಿ ಬರ ನಿವಾರಣೆಯಾಗಿ ರೈತರ ಮೊಗದಲ್ಲಿ ಸಂತಸ ಕಾಣಲಿ ಎಂದು ಸಚಿವರು ದೇವರಲ್ಲಿ ಪ್ರಾರ್ಥನೆ ಮಾಡಿದರು.

ಮದ್ದೂರು:

ತಾಲೂಕಿನ ಕುರುಬರದೊಡ್ಡಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಅಭಯ ಆಂಜನೇಯಸ್ವಾಮಿ ದೇಗುಲವನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಲೋಕಾರ್ಪಣೆ ಮಾಡಿದರು.

ದೇಗುಲದ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಮುಖಂಡರನ್ನು ಗ್ರಾಮಸ್ಥರು ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತ ನೀಡಿದರು. ನಂತರ ವಿವಿಧ ಹಣ್ಣುಗಳಿಂದ ಮಾಡಿದ ಬೃಹತ್ ಗಾತ್ರದ ಹಾರವನ್ನು ಹಾಕಿ ಅಭಿನಂದಿಸಿದರು.

ನಂತರ ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಗಣ್ಯರನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ದೇವಾಲಯದವರೆಗೆ ಸಂಭ್ರಮದಿಂದ ಕರೆದೊಯ್ದರು. ನಂತರ ಸಚಿವ ಕುಮಾರಸ್ವಾಮಿ ದೇಗುಲದ ಕುಂಭಾಭಿಷೇಕ ನೆರವೇರಿಸಿದ ಬಳಿಕ ಶ್ರೀಅಭಯ ಆಂಜನೇಯಸ್ವಾಮಿ ಮೂಲ ವಿಗ್ರಹಕ್ಕೆ ಅರ್ಚನೆಯೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು.

ಈ ಬಾರಿ ಮಂಡ್ಯ ಜಿಲ್ಲೆಯಲ್ಲಿ ಉತ್ತಮ ಮಳೆಯಾಗದ ಕಾರಣ ಬರ ಪರಿಸ್ಥಿತಿ ಆತಂಕ ಎದುರಾಗುತ್ತಿದೆ. ಶ್ರೀಅಭಯ ಆಂಜನೇಯ ಸ್ವಾಮಿ ಕೃಪೆಯಿಂದ ಉತ್ತಮಮಳೆಯಾಗಿ ಬರ ನಿವಾರಣೆಯಾಗಿ ರೈತರ ಮೊಗದಲ್ಲಿ ಸಂತಸ ಕಾಣಲಿ ಎಂದು ಸಚಿವರು ದೇವರಲ್ಲಿ ಪ್ರಾರ್ಥನೆ ಮಾಡಿದರು. ಈ ವೇಳೆ ಗ್ರಾಮದ ಮುಖಂಡರಾದ ಕೆ.ಆರ್.ಪ್ರವೀಣ್ ಕುರುಬರದೊಡ್ಡಿ, ಮಂಜುನಾಥ್, ಎಂ.ರಾಜು ಸೇರಿದಂತೆ ಹಲವರು ಇದ್ದರು.

ಶ್ರೀಚೆಲುವನಾರಾಯಣಸ್ವಾಮಿ ದರ್ಶನ ಪಡೆದ ಎಚ್ಡಿಕೆ

ಮೇಲುಕೋಟೆ:ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಮೇಲುಕೋಟೆಗೆ ಆಗಮಿಸಿ ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ಲೋಕಕಲ್ಯಾಣಕ್ಕಾಗಿ ಪೂಜೆ ಸಲ್ಲಿಸಿದರು.

ಭಾನುವಾರ ಮಧ್ಯಾಹ್ನ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಅವರೊಂದಿಗೆ ಆಗಮಿಸಿ ಚೆಲುವನಾರಾಯಣಸ್ವಾಮಿ, ಯದುಗಿರಿ ನಾಯಕಿ ರಾಮಾನುಜಾಚಾರ್ಯರ ದರ್ಶನ ಪಡೆದರು.ಇಡೀ ದಿನ ವಿವಿಧ ಕಾರ್ಯಕ್ರಮಗಳನ್ನು ಮುಗಿಸಿ ರಸ್ತೆ ಮೂಲಕ ಜಕ್ಕನಹಳ್ಳಿಯಿಂದ ಮೇಲುಕೋಟೆಗೆ ಆಗಮಿಸಿದರು. ದೇವಾಲಯಕ್ಕೆ ಆಗಮಿಸಿದ ಕೇಂದ್ರ ಸಚಿವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.

ದೇವರ ದರ್ಶನದ ನಂತರ ಸಚಿವರು ಬಳಿಘಟ್ಟ ಗ್ರಾಮದ ಕಾರ್ಯಕ್ರಮಕ್ಕೆ ತೆರಳಿದರು. ಈ ವೇಳೆ ನೂರಾರು ಕಾರ್ಯಕರ್ತರೂ ಸಹ ಭಾಗವಹಿಸಿ ಕೇಂದ್ರ ಸಚಿವರಿಗೆ ಜಯಕಾರದ ಘೋಷಣೆ ಕೂಗಿ ಸಂಭ್ರಮಿಸಿದರು.