ಗ್ರಾಮೀಣ ಪ್ರದೇಶದ ಎಲ್ಲ ವರ್ಗಗಳ ಜನರ ಅನುಕೂಲಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಬಳಿಕ ದೇಶದ ಹಲವು ರಾಜ್ಯಗಳಲ್ಲಿಯೂ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಯಿತು. ಆದರೆ, ನಮ್ಮ ರಾಜ್ಯದಲ್ಲಿ ಹೊರತುಪಡಿಸಿದರೆ ಬೇರ್‍ಯಾವ ರಾಜ್ಯಗಳಲ್ಲಿಯೂ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಕ್ಷೇತ್ರದ ಜನರು ನನ್ನನ್ನು ತಮ್ಮ ಮನೆ ಮಗನಂತೆ ಭಾವಿಸಿ ಆಶೀರ್ವದಿಸಿ ಈ ಮಟ್ಟಕ್ಕೆ ಬೆಳೆಸಿದ್ದರಿಂದ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ನೂರಾರು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಅಲ್ಪಹಳ್ಳಿಯಲ್ಲಿ ಚಿಣ್ಯದಿಂದ ಅಲ್ಪಹಳ್ಳಿ, ಕನಗೋನಹಳ್ಳಿ ಮಾರ್ಗವಾಗಿ ಕರಿಕ್ಯಾತನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 1.5 ಕೋಟಿ ರು. ವೆಚ್ಚದ ಡಾಂಬರು ರಸ್ತೆ ನಿರ್ಮಾಣ ಕಾಮಗಾರಿಗೆ ಶನಿವಾರ ರಾತ್ರಿ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಜನಪರ ಆಡಳಿತ ಮತ್ತು ಅಭಿವೃದ್ಧಿ ಕೆಲಸ ಕಾರ್ಯಗಳ ದೃಷ್ಟಿಯಿಂದ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಮತ್ತು 2028ರ ವಿಧಾನಸಭಾ ಚುನಾವಣೆಯಲ್ಲಿ ಯುವಕರು, ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಒಗ್ಗಟ್ಟು ಪ್ರದರ್ಶಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಗ್ರಾಮೀಣ ಪ್ರದೇಶದ ಎಲ್ಲ ವರ್ಗಗಳ ಜನರ ಅನುಕೂಲಕ್ಕಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಬಳಿಕ ದೇಶದ ಹಲವು ರಾಜ್ಯಗಳಲ್ಲಿಯೂ ಗ್ಯಾರಂಟಿ ಯೋಜನೆ ಜಾರಿಗೊಳಿಸಲಾಯಿತು. ಆದರೆ, ನಮ್ಮ ರಾಜ್ಯದಲ್ಲಿ ಹೊರತುಪಡಿಸಿದರೆ ಬೇರ್‍ಯಾವ ರಾಜ್ಯಗಳಲ್ಲಿಯೂ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂದರು.

ರಾಜ್ಯ ಸರ್ಕಾರ ಕೇವಲ ಗ್ಯಾರಂಟಿ ಯೋಜನೆಗಳಿಗಷ್ಟೇ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಕಾರ್ಯಗಳಿಗೂ ವಿಶೇಷ ಆದ್ಯತೆ ನೀಡುತ್ತಿದೆ. ಬಹುಮುಖ್ಯವಾಗಿ ಮಹಿಳೆಯರು ಇದನ್ನು ಅರ್ಥೈಸಿಕೊಳ್ಳಬೇಕು ಎಂದರು.

ಅಲ್ಪಹಳ್ಳಿ ಜನರು ಮತ್ತು ಬೆಂಗಳೂರು ನಿವಾಸಿಗಳು 1994ರಿಂದ ಈವರೆಗೂ ನನಗೆ ಶಕ್ತಿಯಾಗಿ ನಿಂತಿರುವುದಕ್ಕೆ ನಾನು ಋಣಿಯಾಗಿರುತ್ತೇನೆ. ನಿಮಗೆ ನಾನು ಎಷ್ಟೇ ನಮಸ್ಕಾರ ಕೃತಜ್ಞತೆ ಸಲ್ಲಿಸಿದರೂ ಕಡಿಮೆಯಾಗುತ್ತದೆ. ನೀವು ಈ ಮಟ್ಟಕ್ಕೆ ಬೆಳೆಸಿರುವುದರಿಂದ ಇಷ್ಟೊಂದು ಅಭಿವೃದ್ಧಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ ಎಂದರು.

ಜಿಲ್ಲೆಗೆ ಮೆಡಿಕಲ್ ಕಾಲೇಜು, ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ, ಕೃಷಿ ವಿಶ್ವವಿದ್ಯಾಲಯ ತರುವ ಜೊತೆಗೆ ತಾಲೂಕಿನಲ್ಲಿಯೂ ಕೂಡ ಕುಡಿಯುವ ನೀರು, ರಸ್ತೆ, ಸೇತುವೆ ಸೇರಿದಂತೆ ವಿದ್ಯುತ್, ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಲ್ಲಿ ಶಾಶ್ವತವಾಗಿ ಉಳಿಯುವಂತಹ ನೂರಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ ಎಂದರು.

ಗ್ರಾಮಸ್ಥರ ಬೇಡಿಕೆಯಂತೆ ಸಮುದಾಯ ಭವನಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಆರೋಗ್ಯ ಕೇಂದ್ರ ಮತ್ತು ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗುವುದು. ಏತ ನೀರಾವರಿ ಮೂಲಕ ಕೆರೆ ತುಂಬಿಸುವ ಯೋಜನೆ ಈಗಾಗಲೇ ಮಂಜೂರಾಗಿ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ನಂತರ ಈ ಭಾಗದ ಎಲ್ಲಾ ಕೆರೆಗಳಿಗೂ ನೀರು ತುಂಬಿಸಲಾಗುವುದು ಎಂದರು.

ರಾಜ್ಯ ಸರ್ಕಾರದಲ್ಲಿ ನಾಲ್ಕನೇ ಬಾರಿ ಸಚಿವರಾದ ಬಳಿಕ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಚಲುವರಾಯಸ್ವಾಮಿ ಅವರನ್ನು ಡೊಳ್ಳು ಕುಣಿತದೊಂದಿಗೆ ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಕರೆತರಲಾಯಿತು. ಗ್ರಾಮದ ಮಹಿಳೆಯರು ಬೆಲ್ಲದಾರತಿ ಮಾಡಿ ಸ್ವಾಗತ ಕೋರಿದರು. ಗ್ರಾಮದ ಯುವಕರು ಜೆಸಿಬಿ ಯಂತ್ರಗಳ ಮೂಲಕ ಪುಷ್ಪಾರ್ಚನೆ ಮಾಡಿ ಕ್ರೇನ್ ಯಂತ್ರದ ಮೂಲಕ ಬೃಹತ್ ಗಾತ್ರದ ಮೂಸಂಬಿ ಹಣ್ಣಿನ ಹಾರ ಹಾಕಿ ಜಯಘೋಷದೊಂದಿಗೆ ಅದ್ಧೂರಿ ಸ್ವಾಗತ ಕೋರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡ ಸುನಿಲ್ ಲಕ್ಷ್ಮಿಕಾಂತ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ತಾಪಂ ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ, ಗ್ರಾಮದ ಮುಖಂಡರಾದ ತಮ್ಮಣ್ಣಗೌಡ, ಮರಿಸ್ವಾಮಿ, ಜೋಡಿಹೊಸೂರು ಜಯರಾಮು, ಗಂಗವಾಡಿ ಗಂಗಾಧರ್ ಲೋಕೋಪಯೋಗಿ ಇಲಾಖೆಯ ಎಇಇ ಲಿಂಗರಾಜು, ಸಹಾಯಕ ಎಂಜಿನಿಯರ್ ಶಿವಕುಮಾರ್ ಸೇರಿದಂತೆ ನೂರಾರು ಮಂದಿ ಇದ್ದರು.