ಸಕ್ರಿಯ ರಾಜಕಾರಣದತ್ತ ಮಾಜಿ ಶಾಸಕ ರುದ್ರೇಶಗೌಡರ ಕುಟುಂಬ

KannadaprabhaNewsNetwork |  
Published : Dec 04, 2025, 02:00 AM IST
2ಎಚ್ಎಸ್ಎನ್7 : ಮಾಜಿ ಶಾಸಕ ದಿ. ವೈ.ಎನ್ ರುದ್ರೇಶ್ ಗೌಡರು.  | Kannada Prabha

ಸಾರಾಂಶ

ಮೂರು ದಶಕಗಳ ಹಿಂದೆ "ಕೊಡುಗೈ ದಾನಿ " ಎಂದೇ ಪ್ರಖ್ಯಾತಿ ಹೊಂದಿದ್ದ ದಿ. ವೈ ಡಿ ನಂಜೇಗೌಡರು ಯಾವುದೇ ರಾಜಕೀಯ ಪಕ್ಷಗಳ ನಂಟು ಬೆಳೆಸದೆ ಸ್ವಂತ ದುಡಿಮೆ ಹಾಗೂ ದಾನದಿಂದ ಜಿಲ್ಲೆಯಲ್ಲಿ ಮನೆಮಾತಾಗಿದ್ದರು. ಆಗಿನ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಒತ್ತಡದಿಂದಾಗಿ ತಮ್ಮ ಪುತ್ರ ವೈ.ಎನ್ ರುದ್ರೇಶ್ ಗೌಡರನ್ನು ರಾಜಕೀಯ ಕಣಕ್ಕೆ ಇಳಿಸಿದ್ದರು. ಜಿಪಂ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.

ಕನ್ನಡಪ್ರಭ ವಾರ್ತೆ ಬೇಲೂರು

ಸ್ವಪಕ್ಷೀಯರ ಕಿರುಕುಳ ಹಾಗೂ ರಾಜಕೀಯ ಏರಳಿತದಿಂದ ಬೇಸತ್ತು ಕಾಂಗ್ರೆಸ್ ಪಕ್ಷದ ಸಂಘಟನೆಯಿಂದ ದೂರವಾಗಿ ಉಳಿದಿದ್ದ ಮಾಜಿ ಶಾಸಕ ದಿ. ವೈ.ಎನ್ ರುದ್ರೇಶ್ ಗೌಡರ ಕುಟುಂಬ ಮತ್ತೆ ಸಕ್ರಿಯ ರಾಜಕಾರಣದತ್ತ ತೊಡಗಿಸಿಕೊಳ್ಳಲು ಮುಂದಾಗುತ್ತಿರುವುದು ಅವರ ಅಭಿಮಾನಿಗಳಿಗೆ ಸಂತಸ ಉಂಟು ಮಾಡಿದೆ.

ಮೂರು ದಶಕಗಳ ಹಿಂದೆ "ಕೊಡುಗೈ ದಾನಿ " ಎಂದೇ ಪ್ರಖ್ಯಾತಿ ಹೊಂದಿದ್ದ ದಿ. ವೈ ಡಿ ನಂಜೇಗೌಡರು ಯಾವುದೇ ರಾಜಕೀಯ ಪಕ್ಷಗಳ ನಂಟು ಬೆಳೆಸದೆ ಸ್ವಂತ ದುಡಿಮೆ ಹಾಗೂ ದಾನದಿಂದ ಜಿಲ್ಲೆಯಲ್ಲಿ ಮನೆಮಾತಾಗಿದ್ದರು. ಆಗಿನ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಒತ್ತಡದಿಂದಾಗಿ ತಮ್ಮ ಪುತ್ರ ವೈ.ಎನ್ ರುದ್ರೇಶ್ ಗೌಡರನ್ನು ರಾಜಕೀಯ ಕಣಕ್ಕೆ ಇಳಿಸಿದ್ದರು. ಜಿಪಂ, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅದರಲ್ಲೂ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಬಸ್ ಡಿಪೋ, ಅರೇಹಳ್ಳಿ ಬಸ್ ನಿಲ್ದಾಣ, ಅಗ್ನಿಶಾಮಕ ಠಾಣೆ, ಅರೇಹಳ್ಳಿ ಬೇಲೂರು ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆ ಸೇರಿಂದಂತೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿ ಜೊತೆಗೆ ಅಜಾತಶತ್ರು ಎಂದು ಹೆಸರು ಮಾಡಿದ್ದರು. ಆದರೆ ಆರೋಗ್ಯದ ಏರುಪೇರಿನಿಂದ ಅಕಾಲಿಕ ಮರಣಕ್ಕೆ ತುತ್ತಾದರು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿಯವರ ಒತ್ತಾಸೆ ಮೇರೆಗೆ ರುದ್ರೇಶ್ ಗೌಡರ ಪತ್ನಿ ಕೀರ್ತನಾ ಅವರನ್ನು ವಿಧಾನಸಭೆ ಚುನಾವಣೆಯ ಕಣಕ್ಕೆ ಇಳಿಸಲಾಗಿತ್ತು. ಗೆಲುವಿಗಾಗಿ ವೈಎನ್ಆರ್‌ ಸಹೋದರರಾದ ವೈ.ಎನ್ ಮಲ್ಲೇಶ್ ಗೌಡ, ವೈ.ಎನ್ ಕೃಷ್ಣೇಗೌಡ ಹಾಗೂ ಕುಟುಂಬಸ್ಥರು ಅವಿರತ ಹೋರಾಟ ನಡೆಸಿದ್ದರು. ಆದರೆ ರಾಜಕೀಯ ವಿರೋಧಿಗಳ ತಂತ್ರಗಾರಿಕೆಯ ಮುಂದೆ ಇವರ ಶ್ರಮ ವ್ಯರ್ಥವಾಗಿ ಸೋಲು ಕಾಣಬೇಕಾಯಿತು ಎಂದು ಕಾಂಗ್ರೆಸ್ ಪಕ್ಷದವರೇ ಬೇಸರ ವ್ಯಕ್ತಪಡಿಸುತ್ತಾರೆ.ನಂತರದ ರಾಜಕೀಯ ಬದಲಾವಣೆಯಲ್ಲಿ ಬಿ.ಶಿವರಾಂ ತಾಲೂಕಿಗೆ ಪ್ರವೇಶಿಸಿದ ನಂತರ ಪಕ್ಷದಲ್ಲಿನ ಆಂತರಿಕ ಜಗಳ ಗುಂಪುಗಾರಿಕೆಯಿಂದಾಗಿ ರುದ್ರೇಶ್ ಗೌಡರ ಕುಟುಂಬದವರು ಸಹಜವಾಗಿ ರಾಜಕೀಯದಿಂದ ದೂರ ಉಳಿಯಬೇಕಾಯಿತು. ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆ ತನ್ನ ದಿಕ್ಕನ್ನು ಬದಲಾಯಿಸುತ್ತಿದ್ದು ಕಾಂಗ್ರೆಸ್ ಪಕ್ಷ ಮನೆ ಒಂದು ನಾಲ್ಕು ಬಾಗಿಲು ಎಂಬಂತಾಗಿದೆ. ಪಕ್ಷದಲ್ಲಿ ಆಂತರಿಕ ಜಗಳಗಳು ದಿನೇ ದಿನೇ ಉಲ್ಬಣ ಗೊಳ್ಳುತ್ತಿದೆ. ಪಕ್ಷದಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ಸ್ಥಿತಿ ಗೋಚರವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಕಾಂಗ್ರೆಸ್ಸಿಗರು ಹಾಗೂ ಹಿತೈಷಿಗಳು ಮತ್ತೆ ಮಾಜಿ ಶಾಸಕ ದಿ. ರುದ್ರೇಶ್ ಗೌಡರ ಕುಟುಂಬದವರು ಸಕ್ರಿಯ ರಾಜಕೀಯದತ್ತ ಮರಳಬೇಕು ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ. ರಾಜಕೀಯ ಕ್ಷೇತ್ರದಿಂದ ತೆರೆಮರೆಗೆ ಸರಿದಿದ್ದ ವೈ ಎನ್ ಕೃಷ್ಣೇಗೌಡ ಹಾಗೂ ಮಲ್ಲೇಶ್ ಗೌಡರು ಮತ್ತೆ ರಾಜಕೀಯ ಕ್ಷೇತ್ರದತ್ತ ಒಲವು ತೋರುತ್ತಿದ್ದು ಮತ್ತೆ ತಮ್ಮ ಕಾರ್ಯಕರ್ತರೊಂದಿಗೆ ಹಾಗೂ ಬೆಂಬಲಿಗರ ಜೊತೆ ಗುರುತಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಯಕ ವಿಚಾರದಲ್ಲಿ ಯಾವುದೇ ಮೇಲು-ಕೀಳು ಎಂಬುದಿಲ್ಲ: ನಂದಿನಿ ಮಲ್ಲಿಕಾರ್ಜುನ್
ಚಿರತೆ ಹಾವಳಿ ಹೆಚ್ಚಳ: ಹಗಲಿನಲ್ಲಿ ವಿದ್ಯುತ್ ಪೂರೈಸಿ