ಕನ್ನಡಪ್ರಭವಾರ್ತೆ ತಿಪಟೂರು
ನಗರದ ಕೃಷಿ ಇಲಾಖೆ ಆವರಣದಲ್ಲಿ ಗ್ರಾಮೀಣ ಕೈಗಾರಿಕಾ ಇಲಾಖೆ, ಕೃಷಿ ಇಲಾಖೆ, ದೇವರಾಜ ಅರಸು ನಿಗಮ ಹಾಗೂ ಕೃಷಿ ಇಲಾಖೆಯ ಆಯ್ದ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತಿಪಟೂರು ತಾಲೂಕು ಹಾಗೂ ನಗರದ ಅಭಿವೃದ್ಧಿ ಕುಂಠಿತವಾಗಿಲ್ಲ. ಪ್ರತಿದಿನ ತಾಲೂಕಿನ ಹಲವಾರು ಭಾಗಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡುತ್ತಿದ್ದು ಅಭಿವೃದ್ಧಿ ಕೆಲಸಗಳಿಗೆ ವೇಗ ದೊರೆತಿದೆ ಮುಂದಿನ ಏಪ್ರಿಲ್-ಮೇ ತಿಂಗಳೊಳಗೆ ತಾಲೂಕಿನ ಎಲ್ಲ ಹಳ್ಳಿಗಳ ಮನೆಮನೆಗೂ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಮುಖ್ಯಮಂತ್ರಿಗಳನ್ನು ಕರೆಸಿ ಚಾಲನೆ ನೀಡಲಾಗುವುದು ಎಂದರು.
ಬೀರಸಂದ್ರದಲ್ಲಿ ೮ಎಕರೆ ಜಾಗದಲ್ಲಿ ೩೫ಕೋಟಿ ರು ಗಳ ವೆಚ್ಚದಲ್ಲಿ ಕಾರ್ಮಿಕರ ಮಕ್ಕಳಿಗೆ ಆರನೇ ತರಗತಿಯಿಂದ ಪಿಯುಸಿವರೆಗೆ ವಸತಿ ಶಾಲೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ತಾಲೂಕಿನ ೧೦೫ಕೆರೆಗಳಿಗೆ ನೀರು ಹರಿಸಿ ಕುಡಿಯುವ ನೀರು ಯೋಜನೆಗೆ ಉಪಯೋಗಿಸಿಕೊಳ್ಳಲಾಗುವುದು. ತಾಲೂಕಿನಲ್ಲಿ ವಿದ್ಯುತ್ ಸರಬರಾಜು ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ತಾಲೂಕು ಪಂಚಾಯಿತಿ ಕಾರ್ಯನಿವಾಹಕ ಅಧಿಕಾರಿ ಎಚ್.ಎಂ.ಸುದರ್ಶನ್ ಮಾತನಾಡಿ, ದುಡಿಯುವ ವರ್ಗ ಕೈಕಟ್ಟಿ ಕೂರಬಾರದು. ಅವರಿಗೆ ಕೆಲಸ ನೀಡಬೇಕೆಂದು ಸರಕಾರದ ಅನೇಕ ಇಲಾಖೆಗಳು ಇಂದು ಒಂದೇಡೆ ಸೇರಿ ಸವಲತ್ತುಗಳನ್ನು ವಿತರಿಸಲಾಗುತ್ತಿದ್ದು ಒಟ್ಟು ೧೮೧ ಜನರಿಗೆ ಸವಲತ್ತು ವಿತರಿಸಲಾಗುತ್ತಿದೆ ಎಂದರು.ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್‌ಕುಮಾರ್ ಮಾತನಾಡಿ, ಸಾವಿರಾರು ರೈತರ ಜಮೀನುಗಳಲ್ಲಿ ಮಣ್ಣು ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ಮಾಡಿ ಮಣ್ಣು ಆರೋಗ್ಯ ಚೀಟಿ ವಿತರಿಸಲಾಗುತ್ತಿದೆ. ರೈತರು ಮಣ್ಣು ಚೀಟಿಯಲ್ಲಿ ಶಿಫಾರಸ್ಸು ಮಾಡಿರುವ ಪೋಷಕಾಂಶಗಳನ್ನು ಭೂಮಿಗೆ ಹಾಕಬೇಕು. ತೋಟದಲ್ಲಿ ಜೇನುಸಾಕಣೆ ಮಾಡುವುದರಿಂದ ಇಳುವರಿ ಹೆಚ್ಚಿಸಬಹುದು. ಕೃಷಿಹೊಂಡಗಳಲ್ಲಿ ಮೀನು ಸಾಕಾಣಿಕೆ ಮಾಡುವುದರಿಂದ ಆದಾಯ ಹೆಚ್ಚಿಸಬಹುದು. ಸಮಗ್ರ ಕೃಷಿಪದ್ದತಿ ಅಳವಡಿಸಿಕೊಂಡರೆ ರೈತರು ಹೆಚ್ಚು ಲಾಭ ಗಳಿಸಬಹುದು ಎಂದರು.