ಲಕ್ಷಾಂತರ ಹಾಲು ಉತ್ಪಾದಕ ರೈತರು ನಂಬಿ ಬದುಕು ಕಟ್ಟಿಕೊಂಡಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು ಕೆಲವು ವರ್ಷಗಳಿಂದ ಅಧಃಪತನದ ಹಾದಿಯಲ್ಲಿ ಸಾಗುತ್ತಿದೆ. ಒಕ್ಕೂಟದಲ್ಲಿನ ಅಕ್ರಮಗಳ ಕುರಿತು ಸಿಬಿಐ, ಇಡಿ ಅಥವಾ ಸೂಕ್ತ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಲಕ್ಷಾಂತರ ಹಾಲು ಉತ್ಪಾದಕ ರೈತರು ನಂಬಿ ಬದುಕು ಕಟ್ಟಿಕೊಂಡಿರುವ ಮಂಡ್ಯ ಜಿಲ್ಲಾ ಹಾಲು ಒಕ್ಕೂಟವು ಕೆಲವು ವರ್ಷಗಳಿಂದ ಅಧಃಪತನದ ಹಾದಿಯಲ್ಲಿ ಸಾಗುತ್ತಿದೆ. ಒಕ್ಕೂಟದಲ್ಲಿನ ಅಕ್ರಮಗಳ ಕುರಿತು ಸಿಬಿಐ, ಇಡಿ ಅಥವಾ ಸೂಕ್ತ ತನಿಖಾ ಸಂಸ್ಥೆಯಿಂದ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು ಎಂದು ಮಾಜಿ ಅಧ್ಯಕ್ಷ ಜವರೇಗೌಡ ಸರ್ಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ ಸಂಬಂಧಿಸಿದ ಕಡತವನ್ನು ನೀಡಿದ್ದೇನೆ. ಈ ವೇಳೆ ಒಕ್ಕೂಟದ ಭವಿಷ್ಯದ ಕುರಿತು ಆತಂಕಕಾರಿ ವಿಚಾರಗಳನ್ನು ಅಧಿಕಾರಿಗಳು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದರು.
2014ರಿಂದ ಮನ್ಮುಲ್‌ನಲ್ಲಿ ಹಲವು ಸಮಸ್ಯೆಗಳು ಉಂಟಾಗಿವೆ. ಅಕ್ರಮ ಮದ್ಯ ಸಾಗಾಟ ಪ್ರಕರಣ ಸೇರಿದಂತೆ ಕೆಲವು ಪ್ರಕರಣಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರದ ಕುರಿತು ದೂರು ನೀಡಲಾಗಿತ್ತು. ಪ್ರಕರಣ ಸಿಒಡಿಗೆ ಹೋದ ಬಳಿಕ ಚಾಲಕ ಮತ್ತು ಕ್ಲೀನರ್‌ಗಳ ಕೃತ್ಯ ಎಂದು ಕ್ಲೀನ್‌ಚಿಟ್ ನೀಡಲಾಗಿದೆ ಎಂದು ಆರೋಪಿಸಿದರು.
ನೇಮಕಾತಿ ಪ್ರಕ್ರಿಯೆಯಲ್ಲಿಯೂ ಅಕ್ರಮ ನಡೆದಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗದವರಿಗೆ ಐಟಿಐ ಪ್ರಮಾಣ ಪತ್ರದ ಆಧಾರದ ಮೇಲೆ ಉದ್ಯೋಗ ನೀಡಲಾಗಿದೆ ಎಂಬ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಅದರ ತನಿಖೆ ಮುಂದುವರಿಯದಂತೆ ಕಾನೂನು ಪ್ರಕ್ರಿಯೆ ನಡೆದಿದೆ ಎಂದು ದೂರಿದರು.
ಅದೇ ರೀತಿ ನೂರಾರು ಕೋಟಿ ರು. ಮಲ್ಯದ ಕಾಮಗಾರಿಗಳಿಗೆ ಸಂಬಂಧಿಸಿದಂತೆ ನಡೆದಿರುವ ಅಕ್ರಮಗಳ ಕುರಿತ ಹೋರಾಟದ ಫಲವಾಗಿ ಸುಮಾರು72 ಕೋಟಿ ರು. ವಸೂಲಿ ಕ್ರಮಕೈಗೊಳ್ಳಲಾಗಿತ್ತು. ಆದರೆ, ಹಲವು ವರ್ಷಗಳಾದರೂ ಆ ಹಣದ ಸಂಪೂರ್ಣ ವಸೂಲಾತಿ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ನಂದಿನಿ ಉಳಿಸಿಕೊಳ್ಳದಿದ್ದರೆ ರೈತರಿಗೆ ಏನು ಉತ್ತರ ನೀಡುತ್ತೀರಿ? ಎಂಬ ಪ್ರಶ್ನೆಯನ್ನು ಅಧಿಕಾರಿಗಳೇ ಮುಂದಿಟ್ಟಿದ್ದಾರೆ. ಕೋಲಾರ ಸೇರಿದಂತೆ ಕೆಲವೆಡೆ ಅಮುಲ್ ಸಂಸ್ಥೆಯ ವಿಸ್ತರಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಂದಿನಿಯ ಮಾರುಕಟ್ಟೆ ಮತ್ತು ಸಂಗ್ರಹಣಾ ವ್ಯವಸ್ಥೆಯನ್ನು ರಕ್ಷಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ನಂದಿನಿ ಎಂದರೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಸೀಮಿತವಾಗಿರಬೇಕು. ಆದರೆ, ಇಡ್ಲಿ-ದೋಸೆ ಹಿಟ್ಟು, ಖಾರದ ಸೇವೆ, ಬಿಸ್ಕೆಟ್ ಸೇರಿದಂತೆ ವಿವಿಧ ಉತ್ಪನ್ನಗಳ ಮಾರಾಟಕ್ಕೆ ಮುಂದಾಗುತ್ತಿರುವುದರಿಂದ ಮೂಲ ಉದ್ದೇಶದಿಂದ ಸಂಸ್ಥೆ ದೂರವಾಗುತ್ತಿದೆ ಎಂದರು.
ರೈತರ ಸಂಸ್ಥೆ ಮನ್ಮುಲ್ ಉಳಿಸಬೇಕು:
ನಾನು ಮನ್ಮುಲ್ ಅಧ್ಯಕ್ಷನಾಗಿದ್ದಾಗ ಹಿರಿಯ ನಟ ಡಾ.ರಾಜ್‌ಕುಮಾರ್ ಅವರು ಮಂಡ್ಯದ ಹಾಲು ಉತ್ಪನ್ನಗಳ ಗುಣಮಟ್ಟ ಹಾಗೂ ಜನಪ್ರಿಯತೆಯನ್ನು ಕಾಪಾಡಿಕೊಳ್ಳುವಂತೆ ಹೇಳಿದ್ದನ್ನು ಸ್ಮರಿಸಿ, ಇಂದು ಡೇರಿ ಉತ್ಪನ್ನಗಳ ಮಾರುಕಟ್ಟೆ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದರು.
ಮನ್ಮುಲ್ ಹಾಲು ಉತ್ಪನ್ನಗಳು ರಾಜ್ಯದಲ್ಲೇ ಪ್ರಸಿದ್ಧವಾಗಿದ್ದವು. ಇಂದು ಒಕ್ಕೂಟದ ಸ್ಥಿತಿ ಈ ಮಟ್ಟಕ್ಕೆ ತಲುಪಿರುವುದು ಆತಂಕಕಾರಿ. ರೈತರು, ರೈತಪರ ಸಂಘಟನೆಗಳು ಹಾಗೂ ಎಲ್ಲ ಪಕ್ಷಗಳ ಮುಖಂಡರು ಒಗ್ಗೂಡಿ ಮನ್ಮುಲ್ ಮತ್ತು ಕೆಎಂಎಫ್ ಅನ್ನು ರಕ್ಷಿಸಬೇಕು. ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳಿಗಿಂತ ಒಕ್ಕೂಟದ ಹಿತವೇ ಮುಖ್ಯ. ನಾನು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ ಎಂದರು.
ಉತ್ತರ ಭಾರತದ ಸಂಸ್ಥೆಯೊಂದರಲ್ಲಿ ಪತಂಜಲಿ ಸೇರಿದಂತೆ ಹಲವು ತುಪ್ಪದ ಮಾದರಿಗಳನ್ನು ಪರೀಕ್ಷಿಸಿದಾಗ ನಂದಿನಿ ತುಪ್ಪ ಉತ್ತಮ ಗುಣಮಟ್ಟದ ಉತ್ಪನ್ನವಾಗಿ ಹೊರಹೊಮ್ಮಿದೆ. ನಂದಿನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ತಪ್ಪು ಅಭಿಪ್ರಾಯ ಮೂಡದಂತೆ ವೈಜ್ಞಾನಿಕ ಪರೀಕ್ಷಾ ವರದಿಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಅಗತ್ಯವಿದೆ ಎಂದರು.
ಮಂಡ್ಯ ಹಾಲು ಒಕ್ಕೂಟವನ್ನು ಉಳಿಸುವುದು ಕೇವಲ ಒಂದು ಸಂಸ್ಥೆಯ ಪ್ರಶ್ನೆಯಲ್ಲ. ಸಾವಿರಾರು ಹಾಲು ಉತ್ಪಾದಕ ರೈತರ ಜೀವನೋಪಾಯದ ಪ್ರಶ್ನೆಯಾಗಿದೆ. ಆದ್ದರಿಂದ ಒಕ್ಕೂಟದಲ್ಲಿನ ಆರೋಪಗಳ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕಂಬದಹಳ್ಳಿ ಪುಟ್ಟಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಂ. ಪ್ರಕಾಶ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.