ಕನ್ನಡಕ್ಕೆ ವಿಶ್ವ ಮಾನ್ಯತೆ ಸಿಗಬೇಕೆಂದು ಹಂಬಲಿಸಿದವರು ಡಾ. ದೇಜಗೌ:ಡಾ. ವೈ.ಡಿ. ರಾಜಣ್ಣ

KannadaprabhaNewsNetwork | Published : Jul 9, 2024 12:55 AM
Follow Us

ಸಾರಾಂಶ

ದೇಜಗೌ ವಿದ್ವತ್ತು, ವಿಚಾರ, ಆಡಳಿತಗಾರನ ಸಂಕಲ್ಪ ಶಕ್ತಿ ಆಗಿದ್ದರು. ಶ್ರೇಷ್ಠ ಗದ್ಯ ಸಾಹಿತಿಯಾಗಿ ಮಹತ್ವದ ಸಾಹಿತ್ಯ ಕೃತಿಗಳನ್ನು ಕೊಟ್ಟವರು

ಕನ್ನಡಪ್ರಭ ವಾರ್ತೆ ಮೈಸೂರು

ಕನ್ನಡ ಸಂಸ್ಕೃತಿ, ಇತಿಹಾಸ, ಭವ್ಯ ಪರಂಪರೆಯಿಂದ ಕೂಡಿದೆ, ಆ ಅಭಿಮಾನವೇ ಕನ್ನಡಿಗರು ವಿಶ್ವದಲ್ಲಿ ಘನತೆಯಿಂದ ಕನ್ನಡಿಗನೆಂಬ ಹೆಮ್ಮೆಯಿಂದ ಬದುಕು ಸಾಗಿಸುವಂತಾಗಬೇಕು ಎಂದು ಹಂಬಲಿಸಿದವರು ಡಾ.ದೇ. ಜವರೇಗೌಡರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ ಅಭಿಪ್ರಾಯಪಟ್ಟರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ವತಿಯಿಂದ ಕನ್ನಡದ ಖ್ಯಾತ ಸಾಹಿತಿ ಡಾ.ದೇ. ಜವರೇಗೌಡರ 110ನೇ ಜನ್ಮ ದಿನಾಚರಣೆ ಪ್ರಯುಕ್ತ, ದೇ.ಜ.ಗೌ. ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಅವರು ಮಾತನಾಡಿದರು.

ದೇಜಗೌ ವಿದ್ವತ್ತು, ವಿಚಾರ, ಆಡಳಿತಗಾರನ ಸಂಕಲ್ಪ ಶಕ್ತಿ ಆಗಿದ್ದರು. ಶ್ರೇಷ್ಠ ಗದ್ಯ ಸಾಹಿತಿಯಾಗಿ ಮಹತ್ವದ ಸಾಹಿತ್ಯ ಕೃತಿಗಳನ್ನು ಕೊಟ್ಟವರು. ಟಾಲ್ ಸ್ಟಾಯ್ ಅವರ ವಾರ್ ಅಂಡ್ ಪೀಸ್ ಕೃತಿಯನ್ನು ''''ಯುದ್ಧ ಮತ್ತು ಶಾಂತಿ'''' ಮೂಲಕ ಶ್ರೇಷ್ಠ ಅನುವಾದಕರಾಗಿ ತಮ್ಮ ಸಾಮರ್ಥ್ಯ ತೋರಿಸಿದವರು. ಕುವೆಂಪು ಕನವರಿಸಿದ ಕನ್ನಡವನ್ನು ಮೈಸೂರು ವಿವಿ ಕುಲಪತಿಗಳಾಗಿ ಅನುಷ್ಠಾನ ಮಾಡಿದರು. ಕುಲಪತಿಗಳಾಗಿ ಪ್ರಸಾರಂಗ ವಿಶ್ವಕೋಶ ಹಾಗೂ ಜನಪದ ಕ್ಷೇತ್ರದಲ್ಲಿ ಈ ನೆಲದ ಮೌಖಿಕ ಸಾಹಿತ್ಯಕ್ಕೆ ದೊಡ್ಡ ಶಕ್ತಿಯಾಗಿ ನಿಂತರು. ಪಠ್ಯವಾಗಿ ಜನಪದವನ್ನು ಸೇರ್ಪಡೆ ಮಾಡಿ ಕನ್ನಡ ಪರಂಪರೆ ಭವ್ಯವನ್ನು ಸಾರಿದರು. ಶಾಸ್ತ್ರೀಯ ಸ್ಥಾನಮಾನ ದೊರೆಯಲಿಕ್ಕೆ ಕಾರಣಕರ್ತರು. ಈ ನೆಲೆ ಹಿನ್ನೆಲೆಯಲ್ಲಿ ಕನ್ನಡ ವಿಶ್ವ ಭಾಷೆಯ ಮುಂಚೋಣಿಯಲ್ಲಿ ನಿಲ್ಲಬೇಕು ಎಂದು ಆಸೆ ಪಟ್ಟವರು ದೇಜಗೌ ಎಂದು ಅವರು ಸ್ಮರಿಸಿದರು.

ಸಮಾಜ ಸೇವಕ ರಘುರಾಂ ವಾಜಪೇಯಿ ಮಾತನಾಡಿ, ದೇಜಗೌ ಸಾವಿರಾರು ವಿದ್ಯಾರ್ಥಿಗಳಿಗೆ ಕನ್ನಡ ದೀಕ್ಷೆ ನೀಡಿದವರು. ಅವರ ಉಸಿರಿನ ಉಸಿರುಗಳಲ್ಲಿಯೋ ಕನ್ನಡವೇ ಇದೆಯೇನೋ ಎಂಬಂತೆ ಬದುಕಿನ ಕೊನೆಯವರೆಗೂ ಕನ್ನಡವನ್ನೇ ಉಸಿರಾಡುತ್ತ ಎಲ್ಲರಲ್ಲೂ ಅದನ್ನೇ ನಿರೀಕ್ಷಿಸುತ್ತಿದ್ದರು. ಕನ್ನಡಕ್ಕೆ ಎಲ್ಲೇ ಅಡೆತಡೆ, ಸಮಸ್ಯೆ ಬಂದರೆ ಅಲ್ಲಿ ಪ್ರತಿಭಟನೆಗೂ ಮುಂದಾಗುತ್ತಿದ್ದರು ಎಂದು ಹೇಳಿದರು.

ಮನೋವೈದ್ಯರಾದ ಡಾ.ಬಿ.ಎನ್. ರವೀಶ್ ಮಾತನಾಡಿ, ದೇಜಗೌರವರು ಕುವೆಂಪುರವರ ಮಾನಸ ಪುತ್ರರಾಗಿದ್ದರು. ಅವರ ಸಾಹಿತ್ಯ ಕ್ಷೇತ್ರ ಕರ್ನಾಟಕ ದಗಲಕ್ಕೂ ಪಸರಿಸಿದೆ ಎಂದು ಹೇಳಿದರು. ಇಂತಹ ಕಾರ್ಯಕ್ರಮ ಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಎನ್. ಕಾಬೆಟ್ಟೆಗೌಡರಿಗೆ ಅಭಿನಂದನೆಗಳು ಎಂದು ಹೇಳಿದರು.

ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಎನ್. ಬೆಟ್ಟೇಗೌಡ, ಮಹಾಸಭಾದ ಗೌರವ ಸಲಹೆಗಾರ ಬಿ.ಸಿ. ಲಿಂಗರಾಜು, ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ಪಡುವಾರಳ್ಳಿ ಎಂ. ರಾಮಕೃಷ್ಣ ಭಾಗವಹಿಸಿದ್ದರು.